Home Advertisement
Home ಸಿನಿ ಮಿಲ್ಸ್ ದಾಂಪತ್ಯ ಜೀವನದ ದಶಕದ ಸಂಭ್ರಮ: ವಿವಾಹ ವಾರ್ಷಿಕೋತ್ಸವ ಆಚರಿಸಿದ ಅನು ಪ್ರಭಾಕರ್ – ರಘು ಮುಖರ್ಜಿ

ದಾಂಪತ್ಯ ಜೀವನದ ದಶಕದ ಸಂಭ್ರಮ: ವಿವಾಹ ವಾರ್ಷಿಕೋತ್ಸವ ಆಚರಿಸಿದ ಅನು ಪ್ರಭಾಕರ್ – ರಘು ಮುಖರ್ಜಿ

0
40

ಕನ್ನಡ ಚಿತ್ರರಂಗದ ಜನಪ್ರಿಯ ಜೋಡಿಗಳಲ್ಲೊಂದಾದ ಅನು ಪ್ರಭಾಕರ್ ಮತ್ತು ರಘು ಮುಖರ್ಜಿ ತಮ್ಮ ಸುಂದರ ಸಂಸಾರ ಜೀವನದ ಮಹತ್ವದ ಮೈಲಿಗಲ್ಲನ್ನು ತಲುಪಿದ್ದಾರೆ. ಈ ತಾರಾ ದಂಪತಿ ಮದುವೆಯಾಗಿ ಯಶಸ್ವಿಯಾಗಿ ಹತ್ತು ವರ್ಷಗಳನ್ನು ಪೂರೈಸಿದ್ದು, ಈ ವಿಶೇಷ ದಿನವನ್ನು ಅತ್ಯಂತ ಸರಳವಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಿಕೊಂಡಿದ್ದಾರೆ. ಬೆಂಗಳೂರಿನ ತಮ್ಮ ನಿವಾಸದಲ್ಲಿ ನಡೆದ ಈ ಸಮಾರಂಭದಲ್ಲಿ ಕುಟುಂಬದವರು ಮಾತ್ರವಲ್ಲದೆ, ತಮ್ಮ ನೆಚ್ಚಿನ ಅಭಿಮಾನಿಗಳ ಸಮ್ಮುಖದಲ್ಲಿ ಕೇಕ್ ಕತ್ತರಿಸುವ ಮೂಲಕ ಸಂಭ್ರಮ ಹಂಚಿಕೊಂಡಿದ್ದಾರೆ.

ಅನು ಪ್ರಭಾಕರ್ ಮತ್ತು ರಘು ಮುಖರ್ಜಿ ಏಪ್ರಿಲ್ 25, 2016 ರಂದು ಹೊಸ ಜೀವನಕ್ಕೆ ಕಾಲಿಟ್ಟಿದ್ದರು. ಈ ಹಿಂದೆ ವೈಯಕ್ತಿಕ ಜೀವನದಲ್ಲಿ ಕಹಿ ಘಟನೆಗಳನ್ನು ಅನುಭವಿಸಿದ್ದ ಈ ಇಬ್ಬರು ಕಲಾವಿದರು, ಪರಸ್ಪರ ಅರ್ಥಮಾಡಿಕೊಂಡು ಮರು ಮದುವೆಯಾಗುವ ನಿರ್ಧಾರ ಕೈಗೊಂಡಿದ್ದರು. ‘ಸೂಪರ್’ ಎಂಬ ರಿಯಾಲಿಟಿ ಶೋನಲ್ಲಿ ತೀರ್ಪುಗಾರರಾಗಿ ಭಾಗವಹಿಸಿದ್ದಾಗ ಇವರ ನಡುವೆ ಸ್ನೇಹ ಅಂಕುರಿಸಿತ್ತು. ರಘು ಪ್ರಾಮಾಣಿಕತೆ ಮತ್ತು ಪಾರದರ್ಶಕ ವ್ಯಕ್ತಿತ್ವವೇ ತಮ್ಮನ್ನು ಆಕರ್ಷಿಸಿತು ಎಂದು ಅನು ಪ್ರಭಾಕರ್ ಹಲವು ಬಾರಿ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ಸರಳತೆಗೆ ಹೆಸರಾದ ಈ ದಂಪತಿ ಹತ್ತು ವರ್ಷಗಳ ಹಿಂದೆ ಕುಟುಂಬದ ಆಪ್ತರ ಸಮ್ಮುಖದಲ್ಲಿ ಮದುವೆಯಾಗಿದ್ದರು. ಈಗ ಹತ್ತನೇ ವರ್ಷದ ಸಂಭ್ರಮದಲ್ಲೂ ಅದೇ ಸರಳತೆಯನ್ನು ಮೆರೆದಿದ್ದಾರೆ. ಈ ಜೋಡಿ ದಾಂಪತ್ಯಕ್ಕೆ ನಂದನ ಎಂಬ ಮುದ್ದಾದ ಮಗಳಿದ್ದು, ಪುಟ್ಟ ಕಂದನೊಂದಿಗೆ ದಂಪತಿಗಳು ಸುಖೀ ಸಂಸಾರ ನಡೆಸುತ್ತಿದ್ದಾರೆ. ಆಚರಣೆಯ ವೇಳೆ ಅನು ಪ್ರಭಾಕರ್ ತಾಯಿ ಗಾಯತ್ರಿ ಪ್ರಭಾಕರ್ ಹಾಗೂ ರಘು ತಾಯಿ ಉಪಸ್ಥಿತರಿದ್ದು, ಮಕ್ಕಳಿಗೆ ಶುಭ ಹಾರೈಸಿದರು.

ಸಾಮಾಜಿಕ ಜಾಲತಾಣಗಳಲ್ಲಿ ಈ ಜೋಡಿಯ ಫೋಟೋಗಳು ವೈರಲ್ ಆಗುತ್ತಿದ್ದು, ಅಭಿಮಾನಿಗಳು ಹಾಗೂ ಚಿತ್ರರಂಗದ ಗಣ್ಯರು ಶುಭಾಶಯಗಳ ಮಳೆ ಸುರಿಸುತ್ತಿದ್ದಾರೆ. ಅಭಿಮಾನಿಗಳ ಪ್ರೀತಿಯೇ ನಮಗೆ ದೊಡ್ಡ ಶಕ್ತಿ ಎಂದು ಭಾವಿಸುವ ಈ ದಂಪತಿ, ತಮ್ಮ ವಿಶೇಷ ದಿನವನ್ನು ಫ್ಯಾನ್ಸ್ ಜೊತೆ ಸೆಲೆಬ್ರೇಟ್ ಮಾಡುವ ಮೂಲಕ ಮೇಲಿರುವ ಗೌರವವನ್ನು ಎತ್ತಿ ಹಿಡಿದಿದ್ದಾರೆ.