ʻ45′ ಸಿನಿಮಾ ಟ್ರೇಲರ್ ಬಿಡುಗಡೆಗೆ 7 ಕಡೆ ಸ್ಥಳ ನಿಗದಿ

0
37

ಆಟೋಟಗಳನ್ನು ಲೈವ್ ಆಗಿ ನೋಡುತ್ತೇವೆ. ಭಾಷಣಗಳೂ ನೇರ ಪ್ರಸಾರಕ್ಕೆ ಬಂದಿದೆ. ಸಮಾರಂಭಗಳನ್ನೂ ಲೈವ್ ಟೆಲಿಕಾಸ್ಟ್ ಮಾಡುವುದುಂಟು. ಸಿನಿಮಾದವರು ಈ ಅವಕಾಶಗಳನ್ನು ಮಿಸ್ ಮಾಡಿಕೊಳ್ಳುವುದುಂಟೇ? ಅವರೂ ಕಾರ್ಯಕ್ರಮಗಳನ್ನು ಟಿವಿಯಲ್ಲಿ ಲೈವ್ ಆಗಿ ಪ್ರಸಾರ ಮಾಡಿದ್ದುಂಟು. ಆದರೆ, ಚಿತ್ರಮಂದಿರದೊಳಗೆ ಪ್ರೇಕ್ಷಕರನ್ನು ಕೂರಿಸಿ ನಡೆಯುತ್ತಿರುವ ಅಷ್ಟೂ ಕಾರ್ಯಕ್ರಮವನ್ನು ನೇರ ಪ್ರಸಾರಕ್ಕೆ ತಂದವರುಂಟೆ?

ಅದೂ ಒಂದು ಕೈ ನೋಡೋಣ ಎನ್ನುವಂತೆ 45 ಚಿತ್ರತಂಡ ಸಿದ್ಧವಾಗಿದೆ. ಡಿಸೆಂಬರ್ 25ನೇ ತಾರೀಖು ಪ್ರದರ್ಶನಕ್ಕೆ ಅಣಿಯಾಗಿರುವ ಈ ಚಿತ್ರದ ಟ್ರೇಲರನ್ನು ಒಂದು ವಾರದ ಮುಂಚೆ, ಅಂದರೆ ಡಿಸೆಂಬರ್ 15 ರಂದು ಜನರ ಮುಂದಿಡುವುದು ನಿರ್ದೇಶಕ ಅರ್ಜುನ್ ಜನ್ಯ ಹಾಗೂ ನಿರ್ಮಾಪಕ ರಮೇಶ್ ರೆಡ್ಡಿ ಬಯಕೆ. ಒಂದು ಊರಿನಲ್ಲಿ ಸಮಾರಂಭ ನಡೆಸಿದರೆ ಆ ಪ್ರಾಂತ್ಯದವರಷ್ಟೇ ಭಾಗವಹಿಸುತ್ತಾರೆ. ಅದರ ಬದಲು, ಸಮಾರಂಭವನ್ನು ಲೈವ್ ಆಗಿ ರಾಜ್ಯದ ಏಳು ಚಿತ್ರಮಂದಿರಗಳಲ್ಲಿ ಪ್ರದರ್ಶನ ಮಾಡಿಸಿದರೆ, ಸ್ಟಾರ್ ನಟರ ಅಭಿಮಾನಿಗಳು ಮತ್ತಷ್ಟು ಸಂತುಷ್ಟರಾಗುತ್ತಾರೆ ಅನ್ನೋದು ಚಿತ್ರತಂಡದ ಯೋಜನೆ.

ಇದಕ್ಕಾಗಿ ಕ್ಯೂಬ್ ಸಂಸ್ಥೆ ಜೊತೆ ಒಪ್ಪಂದ ಮಾಡಿಕೊಂಡು ಮೈಸೂರು, ಮಂಗಳೂರು, ತುಮಕೂರು, ದಾವಣಗೆರೆ, ಶಿವಮೊಗ್ಗ, ಹೊಸಪೇಟೆ ಮತ್ತು ಹುಬ್ಬಳ್ಳಿಯಲ್ಲಿ ಆಯ್ದ ಚಿತ್ರಮಂದಿರದಲ್ಲಿ ಕಾರ್ಯಕ್ರಮವನ್ನು ನೇರವಾಗಿ ವೀಕ್ಷಿಸುವ ವ್ಯವಸ್ಥೆ ಮಾಡಲಾಗಿದೆ. ಶಿವರಾಜ್‌ಕುಮಾರ್, ಉಪೇಂದ್ರ ಮತ್ತು ರಾಜ್ ಬಿ. ಶೆಟ್ಟಿ ಈ ಚಿತ್ರದ ತ್ರಿವಳಿ ಸ್ಟಾರ್‌ಗಳಾದ್ದರಿಂದ, ಅವರುಗಳಿಗೆ ಅವರದ್ದೇ ಆದ ಅಭಿಮಾನಿ ವರ್ಗವಿದೆ. ಆ ಅಭಿಮಾನಿಗಳೆಲ್ಲ ಚಿತ್ರತಂಡ ನಿಗದಿಪಡಿಸಿದ ಚಿತ್ರಮಂದಿರಗಳಲ್ಲಿ, ನಿರ್ದಿಷ್ಟ ದಿನಾಂಕ ಮತ್ತು ಸಮಯದಂದು ಉಚಿತ ಪಾಸ್‌ಗಳನ್ನು ತೋರಿಸಿ ಈ ಕಾರ್ಯಕ್ರಮವನ್ನು ನೋಡಬಹುದು.

‘ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವಂಥ ಅದ್ಧೂರಿ ಸಿನಿಮಾ ಮಾಡಿದ್ದೇನೆ. ಭಾರತದಾದ್ಯಂತ ಸಿನಿಮಾ ಪ್ರೇಕ್ಷಕರು ನಮ್ಮ ಸಿನಿಮಾವನ್ನು ಮೆಚ್ಚಿ ಕೊಂಡಾಡುವ ನಿರೀಕ್ಷೆ ನನ್ನದು’ ಎಂದು ಹೇಳಿಕೊಂಡರು ನಿರ್ಮಾಪಕ ರಮೇಶ್ ರೆಡ್ಡಿ. ಈ ಟ್ರೇಲರ್ ಸಮಾರಂಭ ಮುಗಿದ ಮೇಲೆ ರಾಜ್ಯದ ಇನ್ನಿತರೆ ಜಿಲ್ಲೆಗಳಿಗೆ ಸಿನಿಮಾದ ಕಲಾವಿದರು ಮತ್ತು ತಂತ್ರಜ್ಞರು ಭೇಟಿ ನೀಡಿ ಪ್ರಚಾರ ಕಾರ್ಯ ಕೈಗೆತ್ತಿಕೊಳ್ಳುವುದಾಗಿ ವಿವರಿಸಿದರು ಅರ್ಜುನ್ ಜನ್ಯ.

Previous articleಬೆಳಗಾವಿ: ಮರಾಠಿ ಬ್ಯಾನರ್ ಪೀಸ್ ಪೀಸ್
Next articleರೋಹಿತ್‌ – ಕೊಹ್ಲಿ ಆರ್ಭಟ, ಜೈಸ್ವಾಲ್‌ ಶತಕ; ಭಾರತಕ್ಕೆ ಗೆಲುವು

LEAVE A REPLY

Please enter your comment!
Please enter your name here