ಕೊಟ್ಟೂರು (ವಿಜಯನಗರ ಜಿಲ್ಲೆ): ಕೊಟ್ಟೂರಿನಲ್ಲಿ ಕಳೆದ ಕೆಲ ದಿನಗಳಿಂದ ಕುತೂಹಲ ಹಾಗೂ ಆತಂಕಕ್ಕೆ ಕಾರಣವಾಗಿದ್ದ ತ್ರಿವಳಿ ಕೊಲೆ ಪ್ರಕರಣ ಕೊನೆಗೂ ಶನಿವಾರ ಮಧ್ಯಾಹ್ನದ ವೇಳೆಗೆ ಬಯಲಾಗಿದೆ. ಆರೋಪಿಯು ತನ್ನ ಮನೆಯೊಳಗೆ ತೋಡಿದ್ದ ಒಂದೇ ಗುಂಡಿಯಲ್ಲಿ ತಂದೆ, ತಾಯಿ ಮತ್ತು ತಂಗಿಯ ಮೃತದೇಹಗಳನ್ನು ಹೂತಿಟ್ಟಿದ್ದ ಸಂಗತಿ ತನಿಖೆಯ ವೇಳೆ ಬೆಳಕಿಗೆ ಬಂದಿದೆ.
ಆರೋಪಿ ಅಕ್ಷಯ್ ಕುಮಾರ್ ತನ್ನ ಮನೆಯಲ್ಲಿ ಸುಮಾರು ನಾಲ್ಕು ಅಡಿ ಆಳದ ಗುಂಡಿ ತೋಡಿ, ಮೊದಲಿಗೆ ತಾಯಿಯ ಮೃತದೇಹವನ್ನು, ಅದರ ಮೇಲೆಯೇ ತಂಗಿಯ ಮೃತದೇಹವನ್ನು ಹಾಗೂ ಕೊನೆಯಲ್ಲಿ ತಂದೆಯ ಮೃತದೇಹವನ್ನು ಇಟ್ಟು, ಮೇಲೆ ಟೈಲ್‌ಗಳಿಂದ ಮುಚ್ಚಿರುವುದು ಪೊಲೀಸ್ ತನಿಖೆಯಲ್ಲಿ ಪತ್ತೆಯಾಗಿದೆ.
ಇದನ್ನೂ ಓದಿ: ಹೆತ್ತ ಮಗನಿಗೆ ನೆರಳಾಗಿ ನಿಲ್ಲುವ ಚೌಕಿದಾರ…
ಶನಿವಾರ ಆರೋಪಿಯನ್ನು ಬೆಂಗಳೂರಿನಿಂದ ಕೊಟ್ಟೂರಿಗೆ ಕರೆತಂದು, ಉಪವಿಭಾಗಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ಜಾಹ್ನವಿ ಅವರ ಸಮಕ್ಷಮದಲ್ಲಿ ಮಹಜರು ನಡೆಸಿದ ನಂತರ ಮನೆಯೊಳಗೆ ಹೂತಿಟ್ಟಿದ್ದ ಮೂರು ಶವಗಳನ್ನು ಹೊರತೆಗೆದು, ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಯಿತು.
ಘಟನಾ ಸ್ಥಳ ಹಾಗೂ ಆಸ್ಪತ್ರೆ ಆವರಣದಲ್ಲಿ ಅಪಾರ ಸಂಖ್ಯೆಯ ಜನಸ್ತೋಮ ಜಮಾಯಿಸಿದ್ದು, ಭಾರೀ ಉದ್ವಿಗ್ನತೆ ನಿರ್ಮಾಣವಾಯಿತು. ಜನಸ್ತೋಮವನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾದ ಪರಿಸ್ಥಿತಿ ಉಂಟಾಯಿತು.
ಇದನ್ನೂ ಓದಿ: ಬೀದರ್: ನಿಗೂಢ ವಸ್ತು ಸ್ಪೋಟ – ಮಕ್ಕಳು ಸೇರಿ 6 ಜನರಿಗೆ ಗಾಯ
ಪ್ರಕರಣದ ಹಿನ್ನೆಲೆ ಕುರಿತು ತಿಳಿದುಬಂದ ಮಾಹಿತಿಯಂತೆ, ಆರೋಪಿ ಅಕ್ಷಯ್ ಡಿ.28ರಂದು ಬೆಂಗಳೂರಿಗೆ ತೆರಳಿದ್ದ. ಆರೋಗ್ಯ ತಪಾಸಣೆಗೆ ಬೆಂಗಳೂರಿಗೆ ಬಂದಿದ್ದ ತನ್ನ ತಂದೆ, ತಾಯಿ ಮತ್ತು ತಂಗಿ ಕಾಣೆಯಾಗಿದ್ದಾರೆಂದು ಅಲ್ಲಿನ ಪೊಲೀಸ್ ಠಾಣೆಯೊಂದರಲ್ಲಿ ದೂರು ನೀಡಿದ್ದ. ದೂರಿನ ಪ್ರಾಥಮಿಕ ಪರಿಶೀಲನೆ ವೇಳೆ ಆರೋಪಿಯ ಹೇಳಿಕೆಗಳಲ್ಲಿ ವೈರುಧ್ಯ ಕಂಡುಬಂದಿದ್ದು, ಅನುಮಾನಗೊಂಡ ಪೊಲೀಸರು ಆತನನ್ನು ವಿಚಾರಣೆಗೆ ಒಳಪಡಿಸಿದ್ದರು.
ವಿಚಾರಣೆಯ ಸಂದರ್ಭದಲ್ಲಿ ಆರೋಪಿ ಕೊಟ್ಟೂರಿನ ತನ್ನ ಮನೆಯಲ್ಲೇ ಮೂವರನ್ನೂ ಕೊಲೆ ಮಾಡಿ, ಅಲ್ಲಿಯೇ ಹೂತಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಮಾಹಿತಿ ಆಧರಿಸಿ ಕೊಟ್ಟೂರಿನ ಪೊಲೀಸರು ಆರೋಪಿಯ ಮನೆಗೆ ಬೀಗ ಒಡೆದು ಪರಿಶೀಲನೆ ನಡೆಸಿದಾಗ, ಮನೆ ಹಾಲ್‌ನಲ್ಲೇ ಟೈಲ್‌ಗಳನ್ನು ಕತ್ತರಿಸಿ ನೆಲವನ್ನು ಅಗೆದು, ಮಣ್ಣನ್ನು ಪಕ್ಕದಲ್ಲಿ ಗುಡ್ಡೆಯಾಗಿ ಹಾಕಿರುವುದು ಕಂಡುಬಂದಿದೆ. ಇದು ಪೊಲೀಸರ ಅನುಮಾನಕ್ಕೆ ಮತ್ತಷ್ಟು ಪುಷ್ಟಿ ನೀಡಿತು.
ಇದನ್ನೂ ಓದಿ: ತುಮಕೂರು ಪಿಎಸ್‌ಐ ಲೋಕಾಯುಕ್ತರ ಬಲೆಗೆ
ಜಿಲ್ಲಾ ಎಸ್‌ಪಿ ಎಸ್. ಜಾಹ್ನವಿ ಅವರು ಮಧ್ಯಾಹ್ನ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಆರೋಪಿಯನ್ನು ಕೊಟ್ಟೂರಿಗೆ ಕರೆತಂದು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದ್ದು, ಕೊಲೆಗೈದ ನಿಖರ ಕಾರಣ, ಸಮಯ ಹಾಗೂ ಇತರ ಅಂಶಗಳ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.























