ಹೊಸಪೇಟೆ: ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಭೀಕರ ಹತ್ಯೆಯೊಂದು ನಡೆದಿದ್ದು, ಗಂಡನಿಂದ ದೂರವಿದ್ದ ವಿವಾಹಿತ ಮಹಿಳೆಯೊಬ್ಬಳನ್ನು ಕತ್ತು ಕೊಯ್ದು ಅಮಾನವೀಯವಾಗಿ ಕೊಲೆ ಮಾಡಿರುವ ಘಟನೆ ನಗರವನ್ನು ಬೆಚ್ಚಿಬೀಳಿಸಿದೆ. ನಗರದ ರೈಲ್ವೆ ಸ್ಟೇಷನ್ ರಸ್ತೆಯ ಚಾಪಲಗಡ್ಡ ಪ್ರದೇಶದಲ್ಲಿನ ನಿವಾಸದ ಮಹಡಿಯ ಮೇಲೆ ಈ ದುರ್ಘಟನೆ ಸಂಭವಿಸಿದೆ. ಉಮಾ (28) ವರ್ಷ ಎಂಬ ಯುವತಿಯೇ ಹತ್ಯೆಗೆ ಒಳಗಾದ ಮಹಿಳೆ ಎಂದು ಗುರುತಿಸಲಾಗಿದೆ.
ಮೃತ ಉಮಾ ಮದುವೆಯಾದ ಬಳಿಕ ಕಳೆದ ಆರು ವರ್ಷಗಳಿಂದ ಗಂಡ ರಘುಮೂರ್ತಿ ಅವರಿಂದ ದೂರವಿದ್ದು, ಪ್ರತ್ಯೇಕವಾಗಿ ಜೀವನ ನಡೆಸುತ್ತಿದ್ದಳು ಎನ್ನಲಾಗಿದೆ. ಉಮಾಗೆ ಮೂವರು ಚಿಕ್ಕ ಮಕ್ಕಳು ಇದ್ದು, ತಾಯಿ ಕಳೆದುಕೊಂಡ ಮಕ್ಕಳ ಭವಿಷ್ಯದ ಕುರಿತು ಆತಂಕ ಮೂಡಿದೆ.
ಇದನ್ನೂ ಓದಿ: ಧಾರವಾಡ: ಬೆಂಕಿ ಅನಾಹುತಕ್ಕೆ ಮೂರು ಅಂಗಡಿ ಭಸ್ಮ
ಅಜ್ಞಾತ ವ್ಯಕ್ತಿಗಳು ಉಮಾಳ ಕತ್ತನ್ನು ಕೊಯ್ದು ಹತ್ಯೆ ಮಾಡಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದ್ದು, ಕೊಲೆ ನಡೆದ ರೀತಿ ನೋಡಿದರೆ ಇದು ಪೂರ್ವನಿಯೋಜಿತ ಕೃತ್ಯವಾಗಿರಬಹುದೆಂದು ಶಂಕಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಾಹ್ನವಿ ಎಸ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ್ ಹಾಗೂ ಹೊಸಪೇಟೆ ಡಿವೈಎಸ್ಪಿ ಡಾ. ಮಂಜುನಾಥ್ ತಳವಾರ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದನ್ನೂ ಓದಿ: ದಾಖಲೆ ಬರೆಯುತ್ತಿರುವ ಸಿಎಂಗೆ ಡಿ.ಕೆ. ಶಿವಕುಮಾರ ಶುಭ ಹಾರೈಕೆ
ಹತ್ಯೆಯ ಹಿಂದಿನ ಕಾರಣಗಳು, ಆರೋಪಿಗಳ ಗುರುತು ಹಾಗೂ ಕೃತ್ಯಕ್ಕೆ ಕಾರಣವಾದ ಹಿನ್ನೆಲೆ ಕುರಿತು ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಆರೋಪಿಗಳ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಲಾಗಿದೆ. ಈ ಸಂಬಂಧ ಹೊಸಪೇಟೆಯ ಚಿತ್ತವಾಡ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ. ಮಹಿಳೆಯ ಮೇಲಿನ ಈ ಅಮಾನವೀಯ ಹತ್ಯೆ ಸಾರ್ವಜನಿಕರಲ್ಲಿ ತೀವ್ರ ಆಕ್ರೋಶ ಹಾಗೂ ಆತಂಕ ಮೂಡಿಸಿದೆ.























