ಹುಬ್ಬಳ್ಳಿಯಲ್ಲಿ ಸುದೀಪ್ ಹೇಳಿಕೆ ಸ್ಟಾರ್‌ ವಾರ್‌ ಅಲ್ಲ : ಚಕ್ರವರ್ತಿ ಸ್ಪಷ್ಟನೆ

0
4

ಬೆಂಗಳೂರು: ‘ನಮ್ಮ ಸಿನಿಮಾ ರಿಲೀಸ್ ಆಗುವಾಗ ಒಂದು ಪಡೆ ಯುದ್ಧಕ್ಕೆ ಸಿದ್ಧವಾಗುತ್ತಿದೆ’ ಎಂಬ ನಟ ಕಿಚ್ಚ ಸುದೀಪ್ ಅವರ ಹೇಳಿಕೆ ಕನ್ನಡ ಚಿತ್ರರಂಗದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಹೇಳಿಕೆಯನ್ನು ಕೆಲವರು ಸ್ಟಾರ್ ವಾರ್ ಅಥವಾ ಫ್ಯಾನ್ ವಾರ್‌ಗೆ ಸಂಬಂಧಿಸಿದ್ದು ಎಂದು ಅರ್ಥೈಸಿಕೊಂಡ ಪರಿಣಾಮ, ದರ್ಶನ್ ಅಭಿಮಾನಿಗಳ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿತ್ತು.

ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಸುದೀಪ್ ಅವರ ಆಪ್ತರಾದ ಚಕ್ರವರ್ತಿ ಚಂದ್ರಚೂಡ್ ಸ್ಪಷ್ಟನೆ ನೀಡಿದ್ದು, ಸುದೀಪ್ ಅವರ ಹೇಳಿಕೆಗೆ ಬೇರೆ ಅರ್ಥ ಕಲ್ಪಿಸಿಕೊಳ್ಳಬಾರದು ಎಂದು ತಿಳಿಸಿದ್ದಾರೆ. ಸುದೀಪ್ ಅವರು ಹೇಳಿದ್ದು ಪೈರಸಿ ಮತ್ತು ನೆಗೆಟಿವ್ ಕ್ಯಾಂಪೇನ್ ನಡೆಸುವ ಗುಂಪುಗಳ ವಿರುದ್ಧ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: “ಯುದ್ಧಕ್ಕೆ ನಾವು ಸಿದ್ಧ” – ಹುಬ್ಬಳ್ಳಿ ವೇದಿಕೆಯಿಂದ ವಿರೋಧಿಗಳಿಗೆ ಕಿಚ್ಚ ಸುದೀಪ್ ಎಚ್ಚರಿಕೆ

“ಸುದೀಪ್ ಹೇಳಿಕೆ ಬಳಿಕ ಕನ್ನಡ ಚಿತ್ರರಂಗದಲ್ಲಿ ಫ್ಯಾನ್ ವಾರ್, ಸ್ಟಾರ್ ವಾರ್ ನಡೆಯುತ್ತಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ಅದು ಸತ್ಯವಲ್ಲ. ಭಾರತದ ಸಿನಿಮಾಗಳು ರಿಲೀಸ್ ಆದಾಗ ಅವುಗಳನ್ನು ನಾಶ ಮಾಡಲು ಸಾಕಷ್ಟು ಪ್ರಯತ್ನಗಳು ನಡೆಯುತ್ತವೆ. ಒಂದು ಪಡೆ ಸಿನಿಮಾ ಭಯೋತ್ಪಾದಕರಂತೆ ವರ್ತಿಸುತ್ತದೆ. ಇಂತಹವರ ವಿರುದ್ಧ ಸುದೀಪ್ ಸೇರಿದಂತೆ ಎಲ್ಲರೂ ಹೋರಾಡಬೇಕು ಎಂಬುದೇ ಅವರ ಉದ್ದೇಶ” ಎಂದು ಚಕ್ರವರ್ತಿ ಹೇಳಿದ್ದಾರೆ.

ಅವರು ಪೈರಸಿ ಸಮಸ್ಯೆಯ ಗಂಭೀರತೆಯನ್ನೂ ವಿವರಿಸಿದ್ದು, “ಇಂದಿನ ದಿನಗಳಲ್ಲಿ 22ಕ್ಕೂ ಹೆಚ್ಚು ಪೈರಸಿ ಆ್ಯಪ್‌ಗಳು ಸಕ್ರಿಯವಾಗಿವೆ. ಕ್ಷಣಮಾತ್ರದಲ್ಲಿ ಸಿನಿಮಾ ಡೌನ್‌ಲೋಡ್ ಆಗುತ್ತದೆ. ಮೊದಲ ಶೋ ಮುಗಿಯುತ್ತಿದ್ದಂತೆ ಸಿನಿಮಾ ಲೀಕ್ ಆಗುತ್ತದೆ. ‘ಮ್ಯಾಕ್ಸ್’ ಸಿನಿಮಾ ಸಮಯದಲ್ಲಿ ನಾನು ಸಾವಿರಾರು ಪೈರಸಿ ಲಿಂಕ್‌ಗಳನ್ನು ಡಿಲೀಟ್ ಮಾಡಿಸಿದ್ದೇನೆ. ಸಿನಿಮಾ ಮಾಡೋದು ಮಾತ್ರವಲ್ಲ, ರಿಲೀಸ್ ಆದ ಮೇಲೆಯೂ ಯುದ್ಧ ಮಾಡಬೇಕಾದ ಸ್ಥಿತಿ ಕಲಾ ಲೋಕಕ್ಕೆ ಬಂದ ಶಾಪ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಪೈರಸಿ ವಿರುದ್ಧ ಸರ್ಕಾರದ ಮಟ್ಟದಲ್ಲೂ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿರುವುದಾಗಿ ಅವರು ತಿಳಿಸಿದ್ದು, “ಈ ವಿಷಯದಲ್ಲಿ ಮುಖ್ಯಮಂತ್ರಿ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ” ಎಂದಿದ್ದಾರೆ.

ಇದನ್ನೂ ಓದಿ: ಉತ್ತರ ಕರ್ನಾಟಕದಲ್ಲಿ ಸ್ಟಾರ್ಟ್‌ಅಪ್ ಕ್ರಾಂತಿಯ ಆರಂಭ: ನಿಮ್ಮೂರಲ್ಲೇ ಕನಸು ನನಸಾಗಿಸಿಕೊಳ್ಳಿ

ವಿಮರ್ಶೆಯ ಹೆಸರಿನಲ್ಲಿ ಸಿನಿಮಾಗಳನ್ನು ಹಾಳು ಮಾಡುವ ಪ್ರವೃತ್ತಿಯ ಮೇಲೂ ಚಕ್ರವರ್ತಿ ಅಸಮಾಧಾನ ವ್ಯಕ್ತಪಡಿಸಿದರು. “ದುಡ್ಡು ಕೊಟ್ಟು ಟಿಕೆಟ್ ಖರೀದಿ ಮಾಡಿದವರಿಗೆ ಸಿನಿಮಾ ಅಥವಾ ಕೃತಿಯನ್ನು ವಿಮರ್ಶೆ ಮಾಡುವ ಹಕ್ಕು ಇದೆ. ಆದರೆ ವಿಮರ್ಶೆ ಹೆಸರಲ್ಲಿ ಸಿನಿಮಾನೇ ಸಾಯಿಸಲಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಸಿನಿಮಾ ಹರಿಬಿಡಲು, ನೆಗೆಟಿವ್ ಕ್ಯಾಂಪೇನ್ ಮಾಡಲು ಒಂದು ಪಡೆ ಕೆಲಸ ಮಾಡುತ್ತಿದೆ. ಇಂತಹ ಪಡೆಗಳ ವಿರುದ್ಧ ಯುದ್ಧ ಮಾಡುತ್ತೇನೆ ಎಂದು ಸುದೀಪ್ ಹೇಳಿದ್ದಾರೆ. ಇದರಲ್ಲಿ ತಪ್ಪೇನು? ‘ಕುಂಭಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿಕೊಳ್ಳಬಾರದು’ ಎಂಬಂತೆ, ಇದಕ್ಕೆ ಬೇರೆ ಅರ್ಥ ಕಲ್ಪಿಸಿಕೊಳ್ಳಬಾರದು” ಎಂದು ಹೇಳಿದರು.

ಇದೇ ರೀತಿಯ ಪೈರಸಿ ಸಮಸ್ಯೆ ‘ಡೆವಿಲ್’ ಸಿನಿಮಾಗೂ ಎದುರಾಗುತ್ತಿದೆ ಎಂದು ಉಲ್ಲೇಖಿಸಿದ ಚಕ್ರವರ್ತಿ, “ಸುದೀಪ್ ಅವರು ಎಂದಿಗೂ ಒಳ್ಳೆಯದನ್ನೇ ಬಯಸಿದವರು. ಅವರ ಮಾತನ್ನು ತಪ್ಪಾಗಿ ಅರ್ಥೈಸಬೇಡಿ” ಎಂದು ಮನವಿ ಮಾಡಿದ್ದಾರೆ. ಈ ಮೂಲಕ ಸುದೀಪ್ ಹೇಳಿಕೆ ಸ್ಟಾರ್ ಅಥವಾ ಅಭಿಮಾನಿಗಳ ವಿರುದ್ಧವಲ್ಲ, ಸಂಪೂರ್ಣವಾಗಿ ಪೈರಸಿ ಮತ್ತು ನೆಗೆಟಿವ್ ಟ್ರೋಲ್ ಸಂಸ್ಕೃತಿಯ ವಿರುದ್ಧವೇ ಎಂಬುದನ್ನು ಅವರು ಪುನರುಚ್ಚರಿಸಿದ್ದಾರೆ.

Previous articleಗದಗ: ಶಾಂತಿ ಚಿತ್ರಮಂದಿರದಲ್ಲಿ ಭಾರೀ ಬೆಂಕಿ ಅವಘಡ