ಕಲಬುರಗಿ: ಪ್ರಧಾನಿ ನರೇಂದ್ರ ಮೋದಿ ತಮ್ಮ ವಿದೇಶಾಂಗ ನೀತಿಯಿಂದಾಗಿ ನಮ್ಮ ದೇಶವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾಳು ಮಾಡುತ್ತಿದ್ದಾರೆ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದರು.
ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ 1,069 ಕೋಟಿ ವೆಚ್ಚದ ಕಾಮಗಾರಿಗಳು ಅಡಿಗಲ್ಲು ಹಾಗೂ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಮೋದಿ ಎಲ್ಲಿ ಹೋಗಿದ್ದಾರೆ, ಯಾರನ್ನು ಭೇಟಿಯಾಗಿದ್ದಾರೆ, ಐಲ್ಯಾಂಡ್ ಕ್ಲಬ್‌ನಲ್ಲಿ ಮಜಾ ಮಾಡಿರುವ ಬಗ್ಗೆ ಟ್ರಂಪ್ ಬಳಿ ಎಫ್ಟಿನ್ ಫೈಲ್ ಇದೆ. ಹಾಗಾಗಿ ಆ ಫೈಲ್‌ಗೆ ಹೆದರಿ ಮೋದಿ ಟ್ರಂಪ್ ಹೇಳಿದಂತೆ ಕೇಳುತ್ತಿದ್ದಾರೆ. ಅದನ್ನು ಇಟ್ಟುಕೊಂಡೆ ಟ್ರಂಪ್ ಮೋದಿಗೆ ಹೆದರಿಸುತ್ತಿದ್ದಾರೆ ಎಂದರು.
“ಟ್ರಂಪ್ ಒಬ್ಬ ಡಿಕ್ಟೇಟರ್, ಮೋದಿ ಅವರ ಗುಲಾಮ ಎಂದು ಕಟು ಟೀಕಿಸಿದ ಖರ್ಗೆ, ರಷ್ಯಾದಿಂದ ಈಗ ಒಂದು ತಿಂಗಳು ಮಾತ್ರ ತೈಲ ಖರೀದಿಗೆ ಅಮೆರಿಕ ಅನುಮತಿ ನೀಡಿದೆ. ಅಮೆರಿಕದವರು ಹೇಳಿದಂತೆ ಮೋದಿ ಕೇಳುತ್ತಿದ್ದಾರೆ. ಟ್ರಂಪ್ ಜೊತೆ ಸ್ನೇಹ ಮಾಡಿಕೊಂಡು ನಮ್ಮ ದೇಶವನ್ನು ಗಿರಿವಿ ಇಟ್ಟಿದ್ದಾರೆ” ಎಂದು ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಬಗ್ಗೆ ಪ್ರಸ್ತಾಪಿಸಿದ ಮಲ್ಲಿಕಾರ್ಜುನ ಖರ್ಗೆ, ಜವಾಹರ್ ಲಾಲ್ ನೆಹರು ಪ್ರಧಾನಿಯಾಗಿದ್ದಾಗ ನಾನ್ ಅಲೈನ್‌ಮೆಂಟ್ ಒಪ್ಪಂದ ಮಾಡಿಕೊಂಡಿದ್ದರಿಂದ ಅದು ವಿಶ್ವಶಾಂತಿಗೆ ಕಾರಣವಾಗಿತ್ತು. ಆದರೆ, ಮೋದಿ ಈಗ ಮಾಡುತ್ತಿರುವುದೇನು? ಮೋದಿ ಇಸ್ರೇಲ್‌ಗೆ ಹೋಗಿ ಬಂದ ನಂತರ ಅದು ಇರಾನ್ ಮೇಲೆ ಬಾಂಬ್ ಹಾಕಿತು. ದೇಶದ ಮುಖ್ಯಸ್ಥ ಖೋಮೇನಿಯನ್ನು ಅಮೆರಿಕದವರು ಹತ್ಯೆ ಮಾಡಿದರು. ಒಂದು ದೇಶದ ಮುಖ್ಯಸ್ಥನನ್ನು ಹತ್ಯೆ ಮಾಡಿದರೆ ಆ ದೇಶ ಶಾಂತಿಯಿಂದ ಇರುತ್ತದೆಯೇ? ಇದು ವಿಶ್ವ ಶಾಂತಿಯಿಂದ ಇರಲು ಸಾಧ್ಯವಾಗುತ್ತದೆಯಾ? ಎಂದು ಖರ್ಗೆ ಪ್ರಶ್ನಿಸಿದರು.
ಭಾರತ ದೇಶದ 65% ರೈತರು ಕೃಷಿ ಅವಲಂಬಿತರಾಗಿದ್ದರೆ ಅಮೆರಿಕಾದದಲ್ಲಿ 3% ಅವಲಂಬಿತರಾಗಿದ್ದಾರೆ. ನಮ್ಮ ದೇಶದ ಉತ್ಪನ್ನಗಳಿಗೆ ಅಮೆರಿಕಾದಲ್ಲಿ ಟ್ಯಾಕ್ಸ್ ಇಲ್ಲ. ಆದರೆ, ಅಮೆರಿಕಾದ ಉತ್ಪನ್ನಗಳ ಮೇಲೆ ಮನಬಂದಂತೆ ಟ್ಯಾಕ್ಸ್ ಹಾಕಲಾಗುತ್ತಿದೆ. ಟ್ರಂಪ್ ನನ್ನ ಸ್ನೇಹಿತ ಎನ್ನುತ್ತಾರೆ. ಆದರೆ, ರಷ್ಯಾದಿಂದ ತೈಲ ಖರೀದಿ ಮಾಡದರೆ ನಿಮ್ಮ ಮೇಲೆ ಟ್ಯಾಕ್ಸ್ ಹಾಕುತ್ತೇನೆ ಎಂದು ಟ್ರಂಪ್ ಹೇಳುತ್ತಾರೆ. ಟ್ರಂಪ್ ಜೊತೆ ದಿನಾಲೂ ಮಾತನಾಡುತ್ತಿರುವುದಾಗಿ ಮೋದಿ ಹೇಳುತ್ತಾರೆ. ಟ್ಯಾಕ್ಸ್ ಹಾಕುವ ಬಗ್ಗೆ ಮಾತನಾಡುತ್ತಾರೆಯೇ? ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಅಧಿಕಾರದ 75 ವರ್ಷ ಆದರೂ ಕೂಡ ನಮ್ಮ ದೇಶದ ತಂಟೆಗೆ ಯಾರೂ ಬಂದಿರಲಿಲ್ಲ. ಪಾಕಿಸ್ತಾನವನ್ನು ಒಡೆದು ಎರಡು ಭಾಗ ಮಾಡಿದರು. ಅವರಿಗೆ ಇದ್ದಂತ ಧೈರ್ಯ ನಿಮಗೇಕಿಲ್ಲ? ಎಂದು ಪ್ರಶ್ನಿಸಿದ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಟೀಕಿಸುತ್ತಿರುವ ಬಿಜೆಪಿ ನಾಯಕರ ಮೇಲೆ ಹರಿಹಾಯ್ದರು.























