ಇದು ದಶರಥನ ರಾಮವೂ ಅಲ್ಲ, ಸೀತಾರಾಮವೂ ಅಲ್ಲ – ನಾಥೂರಾಮನ ರಾಮ
ಕಲಬುರಗಿ: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ವಿ.ಬಿ.ಜಿ–ರಾಮ್–ಜಿ ಕಾಯ್ದೆ (VBG-RAM-G) ಸಂವಿಧಾನ ವಿರೋಧಿಯಾಗಿದ್ದು, ಅದರ ವಿರುದ್ಧ ರಾಜ್ಯ ಸರ್ಕಾರ ಈಗಾಗಲೇ ನಿರ್ಣಯ ಕೈಗೊಂಡಿದೆ. ಜೊತೆಗೆ ಈ ಕಾಯ್ದೆಯ ವಿರುದ್ಧ ಕಾನೂನು ಹೋರಾಟ ರೂಪಿಸಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದರು.
ಕಲಬುರಗಿಯ ಐವಾನ್–ಇ–ಶಾಹಿ ಅತಿಥಿ ಗೃಹದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕಾಯ್ದೆಯು ಬಡವರು, ಕೂಲಿ ಕಾರ್ಮಿಕರು ಹಾಗೂ ಗ್ರಾಮೀಣ ಸಮುದಾಯಗಳ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ತೀವ್ರವಾಗಿ ಟೀಕಿಸಿದರು.
ಇದನ್ನೂ ಓದಿ: ಹುಬ್ಬಳ್ಳಿಗೆ CID ತಂಡ: ವಿವಸ್ತ್ರ–ಹಲ್ಲೆ ಪ್ರಕರಣದ ತನಿಖೆ ಚುರುಕು
ನಾಥೂರಾಮನ ರಾಮ ಕಾಯ್ದೆ: “ಇದು ದಶರಥನ ರಾಮವೂ ಅಲ್ಲ, ಸೀತಾರಾಮವೂ ಅಲ್ಲ – ನಾಥೂರಾಮನ ರಾಮ”: ಕೇಂದ್ರದ ಕಾಯ್ದೆಯನ್ನು ತೀಕ್ಷ್ಣ ಪದಗಳಲ್ಲಿ ಟೀಕಿಸಿದ ಪ್ರಿಯಾಂಕ್ ಖರ್ಗೆ, “ಈ ವಿ.ಬಿ.ಜಿ–ರಾಮ್–ಜಿ ಕಾಯ್ದೆ ದಶರಥನ ರಾಮನೂ ಅಲ್ಲ, ಸೀತಾರಾಮನೂ ಅಲ್ಲ. ಇದು ನಾಥೂರಾಮನ ರಾಮ. ಅಂದರೆ ಇದು ಆರ್‌ಎಸ್‌ಎಸ್ ತತ್ವದ ರಾಮ. ಆ ತತ್ವಗಳು ಹೇಗಿರುತ್ತವೆ ಎಂಬುದು ಜನರಿಗೆ ಗೊತ್ತೇ ಇದೆ – ಬಡವರ ವಿರುದ್ಧವಾಗಿರುತ್ತವೆ, ಧರ್ಮದ ನಶೆಯಲ್ಲಿ ಜನರನ್ನು ತೇಲಾಡಿಸುವುದು ಅವುಗಳ ಉದ್ದೇಶ” ಎಂದು ಕಿಡಿಕಾರಿದರು.
ಕೃಷಿ ಕಾಯ್ದೆಯಂತೆ ಈ ಕಾಯ್ದೆಯೂ ವಾಪಸ್: ಈ ಕಾಯ್ದೆಯ ವಿರುದ್ಧ ರಾಜ್ಯ ಸರ್ಕಾರ ನಿರ್ಣಯ ಕೈಗೊಂಡಿದ್ದು, ಎರಡು ದಿನಗಳ ವಿಶೇಷ ವಿಧಾನಸಭಾ ಅಧಿವೇಶನವನ್ನು ಕರೆದು ಕಾಯ್ದೆಯ ಕುರಿತು ವಿವರವಾಗಿ ಚರ್ಚೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಅವರು ಹೇಳಿದರು. “ಅವರು ಅವರ ವಾದವನ್ನು ಮಂಡಿಸಲಿ, ನಾವು ನಮ್ಮ ವಾದವನ್ನು ಮಂಡಿಸುತ್ತೇವೆ. ಜೊತೆಗೆ ಕಾನೂನು ಹೋರಾಟವೂ ನಡೆಯಲಿದೆ. ಈ ಹೋರಾಟದಲ್ಲಿ ಮಹಿಳಾ ಸಂಘಟನೆಗಳು ಹಾಗೂ ಕೂಲಿ ಕಾರ್ಮಿಕರ ಸಂಘಟನೆಗಳು ಸರ್ಕಾರದೊಂದಿಗೆ ಕೈಜೋಡಿಸಲು ಮುಂದಾಗಿವೆ. ಮೂರು ಕೃಷಿ ಕಾಯ್ದೆಗಳಂತೆ ಈ ಕಾಯ್ದೆಯೂ ವಾಪಸ್ ಆಗಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ಕರಾವಳಿ ಕರ್ನಾಟಕ ಪ್ರವಾಸೋದ್ಯಮಕ್ಕೆ ಪ್ರತ್ಯೇಕ ನೀತಿ: ಕೇರಳ–ಗೋವಾ ಮಾದರಿಯಲ್ಲಿ ಅಭಿವೃದ್ಧಿ – ಡಿ.ಕೆ.ಶಿವಕುಮಾರ್
ನರೇಗಾ ಕುರಿತ ಬಿಜೆಪಿ ಆರೋಪಗಳಿಗೆ ತಿರುಗೇಟು: ನರೇಗಾ ಯೋಜನೆಯಲ್ಲಿ ಅವ್ಯವಹಾರ ನಡೆದಿರುವ ಕಾರಣಕ್ಕೆ ಹೊಸ ಕಾಯ್ದೆ ಅಗತ್ಯ ಎಂದು ಬಿಜೆಪಿ ಹೇಳುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಸಚಿವರು, “ದಿನಕ್ಕೆ ಸುಮಾರು 12 ಕೋಟಿ ಕಾರ್ಮಿಕರು ಕೆಲಸ ಮಾಡುವಂತಹ ಯೋಜನೆ ನರೇಗಾ. ಸಾವಿರಾರು ಕುಟುಂಬಗಳ ಜೀವನಾಧಾರ ಅದು. ಇಂತಹ ಬೃಹತ್ ಯೋಜನೆಯಲ್ಲಿ ಒಂದೆರಡು ಕಡೆ ತಪ್ಪುಗಳಾದರೆ ಇಡೀ ಯೋಜನೆಯನ್ನೇ ರದ್ದು ಮಾಡಬೇಕೇ? ನೆಗಡಿ ಬಂದರೆ ಮೂಗನ್ನೇ ಕತ್ತರಿಸಿಕೊಳ್ಳಬೇಕಾ?” ಎಂದು ಪ್ರಶ್ನಿಸಿದರು.
ಭ್ರಷ್ಟಾಚಾರ ನಡೆದಿದ್ದರೆ ಆಗ ಏಕೆ ಕ್ರಮ ಕೈಗೊಂಡಿಲ್ಲ?: ಪ್ರಧಾನಮಂತ್ರಿ ಕೌಶಲ್ಯ ಯೋಜನೆಯಲ್ಲಿ ಸುಮಾರು ₹14,500 ಕೋಟಿ ಅವ್ಯವಹಾರವಾಗಿದೆ ಎಂದು ವರದಿಗಳು ಹೇಳುತ್ತಿವೆ. ಹಾಗಾದರೆ ಅದನ್ನು ಯಾಕೆ ರದ್ದು ಮಾಡಿಲ್ಲ? ಎಂದು ಕೇಂದ್ರ ಸರ್ಕಾರದ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿದರು. ಕಳೆದ 20 ವರ್ಷಗಳಿಂದ ನರೇಗಾ ಜಾರಿಯಲ್ಲಿದ್ದು, ಕಳೆದ 11 ವರ್ಷಗಳಿಂದ ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಭ್ರಷ್ಟಾಚಾರ ನಡೆದಿದ್ದರೆ ಆಗ ಏಕೆ ಕ್ರಮ ಕೈಗೊಂಡಿಲ್ಲ? ಆಗಲಿಂದಲೂ ಅವರಿಗೆ ಪಾಲು ಹೋಗುತ್ತಿತ್ತಾ ಅಥವಾ ಪಾಲು ಕಡಿಮೆಯಾಗಿತ್ತಾ? ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಕನ್ನಡಿಗರ ಅಸ್ಮಿತೆಗೆ ಕೇರಳದ ಕುತ್ತು: ಪಿಣರಾಯಿ ವಿಜಯನ್‌ಗೆ ಸಿದ್ದರಾಮಯ್ಯ ‘ಖಡಕ್’ ಎಚ್ಚರಿಕೆ!
ಕ್ರೀಡಾಪಟು ಮೇಲೆ ಹಲ್ಲೆ ಪ್ರಕರಣ ವರದಿ ಬಂದ ಬಳಿಕ ಕ್ರಮ: ಯಾದಗಿರಿಯಲ್ಲಿ ಕ್ರೀಡಾಪಟುವೊಬ್ಬರು ನಡೆಸಿದ ಪ್ರತಿಭಟನೆ ಬಳಿಕ ಅವರ ಮೇಲೆ ಪ್ರಕರಣ ದಾಖಲಾಗಿರುವುದು ಹಾಗೂ ಸಂಗೀತಗಾರರ ಉಪಕರಣಗಳನ್ನು ಒಡೆದು ಹಾಕಿದ ಘಟನೆಯ ಕುರಿತು ಕೇಳಿದಾಗ, “ಈ ಬಗ್ಗೆ ವರದಿ ತರಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು” ಎಂದು ಸಚಿವರು ಹೇಳಿದರು.
ರಾಜ್ಯಪಾಲರ ಬಳಿ ಬಾಕಿ ಇರುವ ಬಿಲ್‌ಗಳು: ದ್ವೇಷ ಭಾಷಣ ವಿರೋಧಿ ಬಿಲ್ ರಾಜ್ಯಪಾಲರ ಬಳಿ ಬಾಕಿ ಇರುವ ಕುರಿತು ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, “ಸರ್ಕಾರದ ಕೆಲ ಬಿಲ್‌ಗಳು ಪಾಸಾಗಿವೆ, ಕೆಲವೊಂದು ರಾಜ್ಯಪಾಲರ ಬಳಿ ಇವೆ. ಸಲಹೆ–ಸೂಚನೆ ಇದ್ದರೆ ನೀಡಲಿ. ಆದರೆ ರಾಜಕೀಯ ದುರುದ್ದೇಶದಿಂದ ಬಿಲ್‌ಗಳನ್ನು ತಡೆಹಿಡಿಯುವುದು ಸರಿಯಲ್ಲ” ಎಂದರು.
ಇದನ್ನೂ ಓದಿ: ಕೆಂಚಪ್ಪ ಬಡಿಗೇರ ಕಲೆಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮೆಚ್ಚುಗೆ
ಮೀಸಲಾತಿ ಹಾಗೂ ಒಳಮೀಸಲಾತಿ: ಬಿಜೆಪಿ ಪಕ್ಷ ಮೊದಲಿನಿಂದಲೂ ಮೀಸಲಾತಿಗೆ ವಿರೋಧಿಯಾಗಿರುವುದಾಗಿ ಆರೋಪಿಸಿದ ಸಚಿವರು, ಒಳಮೀಸಲಾತಿ ಕುರಿತು ಸುಪ್ರೀಂ ಕೋರ್ಟ್ ತೀರ್ಮಾನವನ್ನು ರಾಜ್ಯ ಸರ್ಕಾರಗಳಿಗೆ ಬಿಟ್ಟಿದೆ. ಈ ವಿಚಾರದಲ್ಲಿ ಸರ್ಕಾರ ಸೂಕ್ತ ತೀರ್ಮಾನ ಕೈಗೊಳ್ಳಲಿದೆ” ಎಂದರು.
ಅಕ್ರಮ ಬಾಂಗ್ಲಾ ವಲಸೆ – ಕೇಂದ್ರದ ಜವಾಬ್ದಾರಿ: ಅಕ್ರಮ ಬಾಂಗ್ಲಾ ವಲಸೆ ತಡೆಯುವುದು ಕೇಂದ್ರ ಸರ್ಕಾರದ ಜವಾಬ್ದಾರಿ ಎಂದು ಸ್ಪಷ್ಟಪಡಿಸಿದ ಅವರು, “ಪಾಕಿಸ್ತಾನದ ಭಯೋತ್ಪಾದಕರು ಅಥವಾ ಬಾಂಗ್ಲಾದೇಶದ ಪ್ರಜೆಗಳು ಗಡಿಯಿಂದ ಒಳಬಂದರೆ ಅದನ್ನು ತಡೆಯಬೇಕಿರುವುದು ಗೃಹ ಸಚಿವ ಅಮಿತ್ ಶಾ ಅವರ ಕರ್ತವ್ಯ. ಆ ಅಧಿಕಾರ ಅವರ ಕೈಯಲ್ಲಿದೆ. ಆದರೆ ಅವರು ತಮಿಳುನಾಡು ಮತ್ತು ಬಿಹಾರ ಚುನಾವಣೆ ಸಂದರ್ಭದಲ್ಲಿ ಮಾತ್ರ ಈ ವಿಚಾರ ಪ್ರಸ್ತಾಪಿಸುತ್ತಾರೆ. ನನ್ನ ದೃಷ್ಟಿಯಲ್ಲಿ ಅವರು ಅಸಮರ್ಥ ಗೃಹ ಸಚಿವರು” ಎಂದು ಟೀಕಿಸಿದರು.
ಇದನ್ನೂ ಓದಿ: WPL 2026: ಆರ್‌ಸಿಬಿಗೆ ಶುಭಾರಂಭದ ಬೆನ್ನಲ್ಲೇ ಬಿಗ್ ಶಾಕ್; ಸ್ಟಾರ್ ವೇಗಿ ಹೊರಕ್ಕೆ!
RO ಪ್ಲಾಂಟ್‌ಗಳ ನಿರ್ವಹಣೆಗೆ ನೀಲಿ ನಕ್ಷೆ: ಗ್ರಾಮೀಣ ಭಾಗದಲ್ಲಿ ಶುದ್ಧ ಕುಡಿಯುವ ನೀರು ಒದಗಿಸುವ ಆರ್‌ಓ ಪ್ಲಾಂಟ್‌ಗಳ ನಿರ್ವಹಣೆಗೆ ಸಮಗ್ರ ನೀಲಿ ನಕ್ಷೆ ರೂಪಿಸಲಾಗುತ್ತಿದೆ ಎಂದು ಸಚಿವರು ಹೇಳಿದರು. ಈ ಹಿಂದೆ ಕಂಪನಿಗಳ ಸಿಎಸ್‌ಆರ್ ನಿಧಿಯಿಂದ ಸ್ಥಾಪಿಸಿದ ಆರ್‌ಓ ಪ್ಲಾಂಟ್‌ಗಳನ್ನು ಗ್ರಾಪಂಗಳಿಗೆ ವಹಿಸಿದ್ದರಿಂದ ನಿರ್ವಹಣೆ ಕಷ್ಟವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಕಂಪನಿಗಳೊಂದಿಗೆ ಚರ್ಚೆ ನಡೆಸಲಾಗಿದೆ. ಹೊಸ ತಂತ್ರಜ್ಞಾನ ಬಳಸಿ ನೀರಿನ ಮರುಬಳಕೆ ಮತ್ತು ಉಳಿಕೆ ಕುರಿತೂ ಯೋಜನೆ ರೂಪಿಸಲಾಗುವುದು ಎಂದರು.
ತನಿಖಾ ವರದಿ ಸಿಎಂ ಕೈಯಲ್ಲಿ: ಕಲ್ಯಾಣ ಕರ್ನಾಟಕ ಸಾಂಸ್ಕೃತಿಕ ಸಂಘದಲ್ಲಿ ನಡೆದಿತ್ತೆನ್ನಲಾದ ಅವ್ಯವಹಾರ ಕುರಿತು ಪ್ರತಿಕ್ರಿಯಿಸಿದ ಸಚಿವರು, “ಸಂಘಕ್ಕೆ ರಾಜ್ಯ ಸರ್ಕಾರದಿಂದ ಯಾವುದೇ ಅನುದಾನ ಬಿಡುಗಡೆ ಮಾಡಿಲ್ಲ. ಸಂಘವನ್ನು ಮುಚ್ಚಿಲ್ಲ. ಆಡಿಟ್ ಇನ್ನೂ ಬಾಕಿ ಇದೆ. ಇದುವರೆಗೆ ಕೈಗೊಂಡ ತನಿಖೆಯ ವರದಿ ಸಿಎಂ ಅವರ ಕೈ ಸೇರಿದೆ” ಎಂದು ಹೇಳಿದರು.
ಇದನ್ನೂ ಓದಿ: ಬೆಳಗಾವಿ ಅಧಿವೇಶನದ ಪ್ರತಿಗಂಟೆಗೆ 24 ಲಕ್ಷ ಪೋಲು
ಮೆಗಾ ಟೆಕ್ಸಟೈಲ್ ಪಾರ್ಕ್ ಮತ್ತು ಬಿಜೆಪಿ ವ್ಯಂಗ್ಯ: ಮೆಗಾ ಟೆಕ್ಸಟೈಲ್ ಪಾರ್ಕ್ ಸ್ಥಾಪನೆಗೆ ಪ್ರಾಮಾಣಿಕ ಪ್ರಯತ್ನ ನಡೆಯುತ್ತಿದೆ ಎಂದ ಅವರು, ನಗರ ಪ್ರದೇಶದ ರಸ್ತೆ ಸುಧಾರಣೆಗೆ ಆಡಿಟ್ ನಡೆಸಲಾಗಿದ್ದು, ಶೀಘ್ರ ಮಾಹಿತಿ ಹಂಚಿಕೊಳ್ಳುವುದಾಗಿ ತಿಳಿಸಿದರು.
ಸಂಕ್ರಾಂತಿ ಬದಲಾವಣೆ: ಸಂಕ್ರಾಂತಿ ಬಳಿಕ ರಾಜ್ಯದಲ್ಲಿ ಭಾರೀ ಬದಲಾವಣೆ ಆಗಲಿದೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ವ್ಯಂಗ್ಯವಾಡಿದ ಪ್ರಿಯಾಂಕ್ ಖರ್ಗೆ, “ಹೌದು, ಸಾಕಷ್ಟು ಬದಲಾವಣೆಗಳಾಗಲಿವೆ. ಬಿಜೆಪಿ ರಾಜ್ಯಾಧ್ಯಕ್ಷರು ಹಾಗೂ ವಿರೋಧಪಕ್ಷದ ನಾಯಕರು ಬದಲಾಗಲಿದ್ದಾರೆ” ಎಂದು ಚುಟುಕಾಗಿ ಪ್ರತಿಕ್ರಿಯಿಸಿದರು.























