ದಾವಣಗೆರೆ (ಚನ್ನಗಿರಿ): ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಬಳಸಿ ಸೃಷ್ಟಿಸಲಾಗಿದೆ ಎನ್ನಲಾದ ದೆವ್ವದ ಫೋಟೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ವದಂತಿ ಹಬ್ಬಿಸಿರುವ ಘಟನೆ ಚನ್ನಗಿರಿ ತಾಲೂಕಿನಲ್ಲಿ ಆತಂಕಕ್ಕೆ ಕಾರಣವಾಗಿದೆ.
ಚನ್ನಗಿರಿ ಹೊರವಲಯದ ಬೈಪಾಸ್ ರಸ್ತೆಯಲ್ಲಿ ಬಿಳಿ ಸೀರೆ ಉಟ್ಟ ಮಹಿಳೆಯೊಬ್ಬಳು ರಾತ್ರಿ ವೇಳೆ ನಿಂತಿರುವಂತೆ ಕಾಣುವ ಫೋಟೋ ಕಳೆದ ನಾಲ್ಕೈದು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಅ. 12ರ ರಾತ್ರಿ ಈ ರಸ್ತೆಯಲ್ಲಿ ಜೆಸಿಬಿ ಕೆಲಸ ಮಾಡುತ್ತಿದ್ದ ಮೂವರು ಕಾರ್ಮಿಕರ ಮೇಲೆ ದೆವ್ವ ದಾಳಿ ನಡೆಸಿದ್ದು, ಅವರ ಬೆನ್ನು ಮತ್ತು ಕೈಗಳಿಗೆ ಗಾಯಗಳಾಗಿವೆ ಎಂಬ ಬರಹದೊಂದಿಗೆ ಫೋಟೋವನ್ನು ಹಂಚಿಕೊಳ್ಳಲಾಗಿದೆ.
ಈ ಪೋಸ್ಟ್ನಿಂದಾಗಿ ಸ್ಥಳೀಯರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಬೈಪಾಸ್ ರಸ್ತೆಯಲ್ಲಿ ಬೆಳಗಿನ ವಾಕಿಂಗ್ಗೆ ತೆರಳುತ್ತಿದ್ದ ಕೆಲವರು ತಮ್ಮ ಮಾರ್ಗ ಬದಲಾಯಿಸಿದ್ದಾರೆ ಎನ್ನಲಾಗಿದೆ. ಸಂಜೆ ವೇಳೆ ಜಮೀನುಗಳಿಗೆ ತೆರಳಲು ಸುತ್ತಮುತ್ತಲಿನ ರೈತರೂ ಹಿಂದೇಟು ಹಾಕುತ್ತಿದ್ದಾರೆ ಎಂದು ತಿಳಿದುಬಂದಿದೆ.
ವದಂತಿ ಹರಡಿರುವ ಬಗ್ಗೆ ಮಾಹಿತಿ ಪಡೆದ ಚನ್ನಗಿರಿ ಸಿಪಿಐ ರವೀಶ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಹರಿಬಿಟ್ಟು ಜನರಲ್ಲಿ ಆತಂಕ ಮೂಡಿಸಿರುವವರ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದಾರೆ.
ವದಂತಿಗಳಿಗೆ ಕಿವಿಗೊಡದಿರಿ: ಎಐ ತಂತ್ರಜ್ಞಾನ ಬಳಸಿ ನೈಜ ಚಿತ್ರಗಳಂತೆ ಕಾಣುವ ನಕಲಿ ಫೋಟೋ ಮತ್ತು ವಿಡಿಯೊಗಳನ್ನು ಸೃಷ್ಟಿಸುವುದು ಸುಲಭವಾಗಿದೆ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಇಂತಹ ಚಿತ್ರಗಳು ಹಾಗೂ ಸಂದೇಶಗಳ ಸತ್ಯಾಸತ್ಯತೆಯನ್ನು ಪರಿಶೀಲಿಸದೆ ನಂಬುವುದು ಅಥವಾ ಇತರರಿಗೆ ಹಂಚಿಕೊಳ್ಳುವುದು ಸೂಕ್ತವಲ್ಲ. ಸಾರ್ವಜನಿಕರು ವದಂತಿಗಳಿಗೆ ಕಿವಿಗೊಡದೆ, ಯಾವುದೇ ಅನುಮಾನಾಸ್ಪದ ಮಾಹಿತಿ ಕಂಡುಬಂದಲ್ಲಿ ಪೊಲೀಸರಿಗೆ ತಿಳಿಸಬೇಕು.





















