ಮಂಗಳೂರು: ನರೇಗಾ ಸ್ವರೂಪ ಉಳಿಸಲು ಆಗ್ರಹಿಸಿ ಉಪವಾಸ ಸತ್ಯಾಗ್ರಹ

0
4

ಮಂಗಳೂರು: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ)ಯ ಹೆಸರು ಹಾಗೂ ಮೂಲ ಸ್ವರೂಪವನ್ನು ಯಾವುದೇ ಬದಲಾವಣೆ ಇಲ್ಲದೆ ಮುಂದುವರಿಸಬೇಕು ಎಂದು ಒತ್ತಾಯಿಸಿ, ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ನಗರದ ಪುರಭವನ ಸಮೀಪದ ರಾಜಾಜಿ ಪಾರ್ಕ್‌ನಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆಯ ಎದುರು ಉಪವಾಸ ಸತ್ಯಾಗ್ರಹ ನಡೆಸಿದರು.

ಕೇಂದ್ರ ಸರ್ಕಾರದ ಕ್ರಮಕ್ಕೆ ತೀವ್ರ ಆಕ್ಷೇಪ: ಈ ಸಂದರ್ಭದಲ್ಲಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್, “ನರೇಗಾ ಯೋಜನೆಯ ಹೆಸರನ್ನು ಬದಲಿಸುವ ಮೂಲಕ ಕೇಂದ್ರದ ಎನ್‌ಡಿಎ ನೇತೃತ್ವದ ಸರ್ಕಾರವು ಮಹಾತ್ಮ ಗಾಂಧಿ ಅವರನ್ನು ಎರಡನೇ ಬಾರಿಗೆ ಕೊಲೆ ಮಾಡಿದಂತೆ ವರ್ತಿಸಿದೆ. ಯೋಜನೆಯ ಮೂಲ ಸ್ವರೂಪವನ್ನೇ ಬದಲಾಯಿಸಲಾಗಿದ್ದು, ಇದರಿಂದ ಎಲ್ಲಾ ರಾಜ್ಯಗಳಿಗೆ ಆರ್ಥಿಕ ಹೊರೆ ಹೆಚ್ಚಾಗಲಿದೆ” ಎಂದು ಆರೋಪಿಸಿದರು.

ಇದನ್ನೂ ಓದಿ: ತುಳು ಭಾಷೆಗೆ ಅಧಿಕೃತ ಸ್ಥಾನಮಾನ: ಆಂಧ್ರಕ್ಕೆ ಭೇಟಿ ನೀಡಿದ ಸಮಿತಿ

ಯುಪಿಎ ನೇತೃತ್ವದ ಕಾಂಗ್ರೆಸ್ ಸರ್ಕಾರ ರೂಪಿಸಿದ್ದ ನರೇಗಾ ಕಾಯ್ದೆಯ ಮೂಲ ಆಶಯ ಮತ್ತು ಸ್ವರೂಪವನ್ನು ಉಳಿಸಬೇಕು ಎಂದು ಒತ್ತಾಯಿಸಿದ ಅವರು, ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿ ಫೆಬ್ರುವರಿ 9 ರಿಂದ 12ರವರೆಗೆ ಸುಳ್ಯದಿಂದ ಮೂಲ್ಕಿವರೆಗೆ 100 ಕಿ.ಮೀ ಪಾದಯಾತ್ರೆ ನಡೆಸಿ ಜನಜಾಗೃತಿ ಮೂಡಿಸಲಾಗುವುದು ಎಂದು ಘೋಷಿಸಿದರು.

ಜನಪರ ಕಾನೂನುಗಳ ಕೊಡುಗೆ ಕಾಂಗ್ರೆಸ್‌ನದ್ದೇ – ರಮಾನಾಥ ರೈ: ಕಾಂಗ್ರೆಸ್ ಹಿರಿಯ ಮುಖಂಡ ರಮಾನಾಥ ರೈ ಮಾತನಾಡಿ, “ಯುಪಿಎ ಸರ್ಕಾರದ ಅವಧಿಯಲ್ಲಿ ಆಹಾರ ಭದ್ರತಾ ಕಾಯ್ದೆ, ಉದ್ಯೋಗ ಖಾತ್ರಿ ಕಾಯ್ದೆ, ಮಾಹಿತಿ ಹಕ್ಕು ಕಾಯ್ದೆ, ಶಿಕ್ಷಣ ಹಕ್ಕು ಕಾಯ್ದೆ ಸೇರಿದಂತೆ ಅನೇಕ ಜನಪರ ಕಾನೂನುಗಳನ್ನು ದೇಶಕ್ಕೆ ನೀಡಲಾಗಿದೆ. ಕಾಂಗ್ರೆಸ್ ಆಡಳಿತದಲ್ಲಿ ಬಡವರು, ಪರಿಶಿಷ್ಟರು, ಅಲ್ಪಸಂಖ್ಯಾತರಿಗೆ ಯಾವುದೇ ತೊಂದರೆ ಆಗಿಲ್ಲ” ಎಂದರು.

ಇದನ್ನೂ ಓದಿ: ಪ್ರಯಾಗ್‌ರಾಜ್‌: ಭಾರತೀಯ ವಾಯುಪಡೆ ತರಬೇತಿ ವಿಮಾನ ಪತನ

“ತೊಂದರೆ ಆಗಿದ್ದರೆ ಅದು ಭೂ ಮಾಲೀಕರು ಹಾಗೂ ಬಂಡವಾಳಶಾಹಿಗಳಿಗೆ ಆಗಿರಬಹುದು. ಕಾಂಗ್ರೆಸ್ ಸದಾ ಜನಪರ ಧೋರಣೆಯೊಂದಿಗೆ ಕೆಲಸ ಮಾಡಿದೆ” ಎಂದು ಹೇಳಿದರು.

ಜಿಲ್ಲಾಧಿಕಾರಿಗಳು ಕೇಸರಿ ಧ್ವಜ ಹಾರಿಸಿರುವುದು ಸರಿಯಲ್ಲ: ಈ ವೇಳೆ ಉಡುಪಿಯಲ್ಲಿ ಇತ್ತೀಚೆಗೆ ನಡೆದ ಶ್ರೀಕೃಷ್ಣ ಮಠದ ಪರ್ಯಾಯ ಉತ್ಸವದಲ್ಲಿ ಜಿಲ್ಲಾಧಿಕಾರಿಗಳು ಕೇಸರಿ ಧ್ವಜ ಹಾರಿಸಿರುವುದು ಸರಿಯಲ್ಲ ಎಂದು ಟೀಕಿಸಿದ ಅವರು, “ಧಾರ್ಮಿಕ ಕಾರ್ಯಕ್ರಮಗಳಲ್ಲಿ ರಾಜಕೀಯ ಪ್ರೇರಿತ ಪತಾಕೆ ಹಾರಿಸಿರುವುದು ಖಂಡನೀಯ” ಎಂದು ಹೇಳಿದರು.

ಇದನ್ನೂ ಓದಿ: ಸಂಸದ ಬಿವೈ ರಾಘವೇಂದ್ರ ಪ್ರಯಾಣಿಸುತ್ತಿದ್ದ ಕಾರು ಅಪಘಾತ

ನರೇಗಾ ನಿಯಮ ಬದಲಾವಣೆ ಬಡವರ ಹೊಟ್ಟೆಗೆ ಹೊಡೆತ – ಐವನ್ ಡಿಸೋಜ: ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮಾತನಾಡಿ, “ಒಟ್ಟು 18 ಕೋಟಿ ಜನರಿಗೆ ಉದ್ಯೋಗ ನೀಡಿದ್ದ ನರೇಗಾ ಯೋಜನೆಯ ನಿಯಮಾವಳಿಯನ್ನು ಬದಲಾಯಿಸಿರುವ ಕೇಂದ್ರ ಸರ್ಕಾರ ಬಡವರ ಹೊಟ್ಟೆಯ ಮೇಲೆ ಹೊಡೆಯುವ ಕೆಲಸ ಮಾಡಿದೆ ಎಂದು ಆರೋಪಿಸಿದರು.

ಮಹಾತ್ಮ ಗಾಂಧಿ ಹೆಸರನ್ನು ಸಹಿಸಲು ಆಗದೆ ಯೋಜನೆಯ ಹೆಸರನ್ನು ಬದಲಿಸಿ, “ವಿಬಿ ಜಿ ರಾಮ್ ಜಿ ಎಂದು ಹೆಸರು ಬದಲಿಸಿ ರಾಮನ ಹೆಸರನ್ನು ತಂದು ಭಾವನಾತ್ಮಕತೆ ಸೃಷ್ಟಿಸುವ ದುರುದ್ದೇಶ ಇದರಲ್ಲಿ ಅಡಗಿದೆ” ಎಂದು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: Deepfake video ವಿರುದ್ಧ ಸಾರ್ವಜನಿಕರಿಗೆ ಸುಧಾಮೂರ್ತಿ ಎಚ್ಚರಿಕೆ

ಉಪವಾಸ ಸತ್ಯಾಗ್ರಹದಲ್ಲಿ ಕಾಂಗ್ರೆಸ್ ಮುಖಂಡರಾದ ಜೆ.ಆರ್. ಲೋಬೊ, ಶಾಲೆಟ್ ಪಿಂಟೊ, ಪದ್ಮರಾಜ ಪೂಜಾರಿ, ಅಪ್ಪಿ, ವಿಶ್ವಾಸ್ ಕುಮಾರ್ ದಾಸ್, ಮತ್ತು ಇತರ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.

Previous articleತುಳು ಭಾಷೆಗೆ ಅಧಿಕೃತ ಸ್ಥಾನಮಾನ: ಆಂಧ್ರಕ್ಕೆ ಭೇಟಿ ನೀಡಿದ ಸಮಿತಿ