ಬಳ್ಳಾರಿ: ಮನೆಗಳ್ಳತನ ಪ್ರಕರಣವೊಂದರ ತನಿಖೆ ನಡೆಸಿದ ಬಳ್ಳಾರಿಯ ಕೌಲಬಜಾರ್ ಪೊಲೀಸರು, ಅಂತರರಾಜ್ಯ ಮಟ್ಟದಲ್ಲಿ ಮನೆಗಳ್ಳತನ ನಡೆಸುತ್ತಿದ್ದ ಆರೋಪಿಯನ್ನು ಬಂಧಿಸಿ, ಸುಮಾರು ₹13 ಲಕ್ಷ ಮೌಲ್ಯದ 110 ಗ್ರಾಂ ಚಿನ್ನಾಭರಣ ಹಾಗೂ ₹10 ಲಕ್ಷ ನಗದು ಜಪ್ತಿ ಮಾಡಿದ್ದಾರೆ.
ಬಂಧಿತನನ್ನು ಹನುಮಂತಪ್ಪ (28) ಎಂದು ಗುರುತಿಸಲಾಗಿದೆ. ಬಳ್ಳಾರಿ ನಗರದ ಕರಿಮಾರೆಮ್ಮ ಕಾಲೋನಿಯಲ್ಲಿ ನಡೆದ ಮನೆಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ವಿಚಾರಣೆ ವೇಳೆ ಈತ ಹಲವು ಜಿಲ್ಲೆಗಳು ಹಾಗೂ ಆಂಧ್ರಪ್ರದೇಶದ ವಿವಿಧೆಡೆ ಮನೆಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ.
ಪೊಲೀಸರ ಪ್ರಕಾರ, ಹನುಮಂತಪ್ಪ ವಿರುದ್ಧ ಬಳ್ಳಾರಿಯ ಮೂರು ಪ್ರಕರಣಗಳು ಸೇರಿದಂತೆ ಒಟ್ಟು 40 ಮನೆಗಳ್ಳತನ ಪ್ರಕರಣಗಳು ದಾಖಲಾಗಿವೆ. ಬೆಂಗಳೂರು, ಗದಗ, ವಿಜಯನಗರ, ಚಿತ್ರದುರ್ಗ, ದಾವಣಗೆರೆ, ಚಿಕ್ಕಬಳ್ಳಾಪುರ ಜಿಲ್ಲೆಗಳ ವಿವಿಧ ಪೊಲೀಸ್ ಠಾಣೆಗಳು ಹಾಗೂ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಹಲವು ಠಾಣೆಗಳಲ್ಲಿ ಈತನ ವಿರುದ್ಧ ಪ್ರಕರಣಗಳಿರುವುದು ತನಿಖೆಯಿಂದ ತಿಳಿದುಬಂದಿದೆ.
ಆರೋಪಿಯ ಚಲನವಲನಗಳ ಮೇಲೆ ನಿರಂತರ ನಿಗಾ ಇರಿಸಿದ್ದ ಕೌಲಬಜಾರ್ ಪೊಲೀಸರು, ಆತ ಚಿನ್ನಾಭರಣ ಹಾಗೂ ಸುಮಾರು ₹10 ಲಕ್ಷ ನಗದು ತೆಗೆದುಕೊಂಡು ಬೆಂಗಳೂರಿನತ್ತ ತೆರಳುತ್ತಿದ್ದ ವೇಳೆ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಬಂಧಿತನಿಂದ 110 ಗ್ರಾಂ ಚಿನ್ನಾಭರಣ ಹಾಗೂ ₹10 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದ ಮುಂದಿನ ತನಿಖೆ ಮುಂದುವರಿದಿದ್ದು, ಇನ್ನಷ್ಟು ಕಳ್ಳತನ ಪ್ರಕರಣಗಳು ಬೆಳಕಿಗೆ ಬರುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೌಲಬಜಾರ್ ಪೊಲೀಸರ ಕಾರ್ಯಾಚರಣೆಗೆ ಹಿರಿಯ ಪೊಲೀಸ್ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.





















