ಬೆಳಗಾವಿ(ಗುರ್ಲಾಪುರ): ಸರ್ಕಾರ ಕಬ್ಬಿಗೆ 3300 ದರ ಘೋಷಿಸಿ ಹೊರಡಿಸಿದ ಆದೇಶ ಕೊನೆಗೂ ಗುರ್ಲಾಪುರ ಕ್ರಾಸ್ ರೈತ ಹೋರಾಟಗಾರರಿಗೆ ತಲುಪಿದೆ. ರೈತರ ಬೇಡಿಕೆಯಂತೆ ಖುದ್ದು ಸಕ್ಕರೆ ಸಚಿವ ಶಿವಾನಂದ ಪಾಟೀಲ ಅವರು ಶನಿವಾರ ಸಂಜೆ ಗುರ್ಲಾಪುರ ಕ್ರಾಸ್ ಪ್ರತಿಭಟನಾ ವೇದಿಕೆ ಬಂದು ವಿತರಿಸಿದ್ದು 10 ದಿನಗಳ ಹೋರಾಟ ಸುಖಾಂತ್ಯಗೊಂಡಿದೆ.
ಸಚಿವ ಶಿವಾನಂದ ಪಾಟೀಲ ಶನಿವಾರ ಸಂಜೆ ಗ್ರಾಮಕ್ಕೆ ಆಗಮಿಸಿ ಸರ್ಕಾರದ ಆದೇಶ ಪ್ರತಿ ವಿತರಿಸಿ ಮಾತನಾಡಿ, ಎರಡು ದಿನ ಅವಕಾಶ ಕೇಳಿ ಸರ್ಕಾರ-ಕಾರ್ಖಾನೆ ಮಾಲಿಕರ ಜೊತೆ ಮಾತುಕತೆ ನಡೆಸಿ ನಿಮ್ಮ ಬೇಡಿಕೆ ಈಡೇರಿಸಿಕೊಂಡು ಬಂದಿದ್ದೇನೆ ಎಂದು ಸಂತಸ ಹಂಚಿಕೊಂಡರು.
ಈ ವೇದಿಕೆಯಿಂದ ಪ್ರಾರಂಭವಾದ ಪ್ರತಿಭಟನೆ ರಾಜ್ಯದುದ್ದಕ್ಕೂ ಹರಡಿತು. ದೇಶವ್ಯಾಪ್ತಿ ಆಗುವ ಭಯವೂ ಇತ್ತು. ನಿಮ್ಮ ಕೂಗು ಕೇಂದ್ರ ಸರ್ಕಾರಕ್ಕೂ ಕೇಳಿಸಿದೆ. ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜೇಯಂದ್ರ ಈ ವೇದಿಕೆ ಮೇಲೆ ಹುಟ್ಟು ಹಬ್ಬ ಆಚರಿಸಿಕೊಂಡಿರುವುದು ದುರ್ದೈವ. ನನ್ನ ಅಣಕು ಶವ ಸಂಸ್ಕಾರವಾಯಿತು. ಇದರಿಂದ ನನಗೇನೂ ಬೇಜಾರಿಲ್ಲ ಎಂದು ಹೇಳಿದರು.
ರಾಜ್ಯದಲ್ಲಿ 12 ಹೊಸ ತೂಕದ ಮಷಿನ ಹಾಕುತ್ತಿದ್ದೇವೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಎಲ್ಲ ಕಡೆ ತೂಕದ ಮಷಿನ್ ಕೂಡಿಸುತ್ತೇವೆ. ರೈತರು ಕಾರ್ಖಾನೆಯಲ್ಲಿ ಹೋಗಿ ತೂಕ ಕಡಿಮೆ ಬಂದಾಗ ದಾಖಲೆ ಸಮೇತ ತಿಳಿಸಿದರೆ ಕಾರ್ಖಾನೆಯ ಮೇಲೆ ಯೋಗ್ಯ ಕ್ರಮ ಕೈಗೊಳ್ಳುತ್ತೇವೆ. ರೈತರು ವೈಜ್ಞಾನಿಕವಾಗಿ ಉಪ ಬೆಳೆ ಬೆಳೆದು ತಮ್ಮ ಆದಾಯ ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ಹೋರಾಟ ಸುಖಾಂತ್ಯವಾಗಲು ಕೃಷಿ ಆಯೋಗದ ಅಧ್ಯಕ್ಷ ಅಶೋಕ ದಳವಾಯಿ, ಜಿಲ್ಲಾಧಿಕಾರಿ ಮಹಮ್ಮದ ರೋಷನ್, ಎಸ್.ಪಿ ಭೀಮಾಶಂಕರ ಗುಳೆದ, ಹೋರಾಟಗಾರರ – ನಮ್ಮ ಮನಸ್ಸನ್ನು ಒಂದುಗೂಡಿಸಿದ ಮುಗಳಖೋಡದ ಷಡಕ್ಷರಿ ಮುರುಘರಾಜೇಂದ್ರ ಮಹಾಸ್ವಾಮಿಗಳು ಹಾಗೂ ರೈತ ಸಂಘದ ಅಧ್ಯಕ್ಷ ಚೂನಪ್ಪ ಪೂಜೇರಿ, ಗೌರವಾಧ್ಯಕ್ಷ ಶಶಿಕಾಂತ ಪೂಜೇರಿ ಅವರ ಸಹಕಾರ ಕಾರಣವಾಯಿತು ಎಂದು ಹೇಳಿದರು.
ಕೇಂದ್ರದ ಸಕ್ಕರೆ ಸಚಿವ ಪ್ರಲ್ಹಾದ ಜೋಷಿಯವರನ್ನು ನೀವು ಕೇಳುತ್ತಿಲ್ಲ, ನನ್ನೊಬನನ್ನೆ ಕೇಂದ್ರಿಕೃತವಾಗಿ ಮಾಡಿದ್ದೀರಿ ಎಂದಾಗ ಅರ‍್ಯಾರು ನಮಗೆ ಗೊತ್ತೆ ಇಲ್ಲ ಎಂದು ರೈತರು ಕೂಗಿ ಹೇಳಿದರು.
ಈ ವೇಳೆ ಸಚಿವರು, ಕೇಂದ್ರ ಸಚಿವರು ನಮಗೆ ಸಹಾಯ ಮಾಡಬಹುದು ಏಕೊ ಮನಸ್ಸು ಮಾಡುತ್ತಿಲ್ಲ. ಸಕ್ಕರೆ ಕಾರ್ಖಾನೆ ಮಾಲಿಕರಿಂದ ಕೇಂದ್ರ ಸರ್ಕಾರಕ್ಕೂ, ರಾಜ್ಯ ಸರ್ಕಾರಕ್ಕೂ ಸಮ ಆದಾಯ ಬರುತ್ತದೆ. ಕೇಂದ್ರ ಸರ್ಕಾರ ಮನಸ್ಸು ಮಾಡಬೇಕು. ಎಥೆನಾಲ ಎಫ್‌ಆರ್‌ಪಿ ಇನ್ನೂ ಅನೇಕ ಕಾರಣಗಳಿಂದ ಕೇಂದ್ರ ಸರ್ಕಾರದಿಂದ ನಮಗೆ ಅನ್ಯಾಯವಾಗುತ್ತಿದೆ ಎಂದು ಸಚಿವರು ಹೇಳಿದರು.
