ವೈದ್ಯೋ ನಾರಾಯಣೋ ಹರಿಃ ಎನ್ನುವ ಮಾತಿದೆ. ಅಂದರೆ ವೈದ್ಯರನ್ನು ನಾವು ದೇವರ ಸ್ಥಾನದಲ್ಲಿಟ್ಟು ಪೂಜಿಸುತ್ತೇವೆ. ಆದರೆ ಅದೇ ವೈದ್ಯರು ಯಮನಾಗಿ ಬದಲಾದರೆ ಏನಾಗಬಹುದು ಎಂಬುದಕ್ಕೆ ಉತ್ತರ ಪ್ರದೇಶದ ಮುಜಾಫರ್‌ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಕೇವಲ ಲಂಚದ ಹಣ ನೀಡಲಿಲ್ಲ ಎಂಬ ಒಂದೇ ಒಂದು ಕಾರಣಕ್ಕೆ, ಶಸ್ತ್ರಚಿಕಿತ್ಸೆ ಮುಗಿದು ಗುಣಮುಖಳಾಗುತ್ತಿದ್ದ 14 ವರ್ಷದ ಬಾಲಕಿಯ ಕಾಲನ್ನು ವೈದ್ಯರೊಬ್ಬರು ವಿಕೃತವಾಗಿ ಮತ್ತೆ ಮುರಿದು ಹಾಕಿರುವ ಆಘಾತಕಾರಿ ಆರೋಪ ಕೇಳಿಬಂದಿದೆ. ಮಾನಸಿಕವಾಗಿ ಕೂಡ ಸ್ವಸ್ಥಳಾಗಿರದ ಈ ಬಾಲಕಿಗೆ ಕೇವಲ ಹದಿನೇಳು ಸಾವಿರ ರೂಪಾಯಿ ಬಾಕಿ ಹಣಕ್ಕಾಗಿ ಇಂತಹ ಕ್ರೂರ ಶಿಕ್ಷೆ ನೀಡಲಾಗಿದ್ದು, ಇಡೀ ಮಾನವಕುಲವೇ ತಲೆತಗ್ಗಿಸುವಂತಾಗಿದೆ.
ಈ ಅಮಾನವೀಯ ಘಟನೆಗೆ ಬಲಿಯಾದ ಬಾಲಕಿಯ ತಾಯಿ ರೇಷ್ಮಾ ಒಬ್ಬ ವಿಧವೆ ಮಹಿಳೆಯಾಗಿದ್ದು,ತೀವ್ರ ಬಡತನದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಸುಮಾರು ಒಂದೂವರೆ ತಿಂಗಳ ಹಿಂದೆ ಮಗಳ ಬಲಗಾಲಿನ ಸಮಸ್ಯೆಗೆ ಚಿಕಿತ್ಸೆ ಕೊಡಿಸಲು ಅವರು ಮುಜಾಫರ್‌ನಗರದ ಜಿಲ್ಲಾ ಆಸ್ಪತ್ರೆಗೆ ಬಂದಿದ್ದರು. ಆದರೆ ಅಲ್ಲಿನ ವೈದ್ಯರು ಮತ್ತು ಸಿಬ್ಬಂದಿ ಆಪರೇಷನ್ ಮಾಡಲು ಬರೋಬ್ಬರಿ 25,000 ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಗಂಡನಿಲ್ಲದೆ ತುತ್ತು ಅನ್ನಕ್ಕೂ ಪರದಾಡುತ್ತಿದ್ದ ರೇಷ್ಮಾ ತಮ್ಮ ಅಸಹಾಯಕತೆಯನ್ನು ತೋಡಿಕೊಂಡಾಗ ಆಸ್ಪತ್ರೆಯವರು ಚಿಕಿತ್ಸೆ ನೀಡಲು ನಿರಾಕರಿಸಿದ್ದರು. ಇದರಿಂದ ಕಂಗಾಲಾದ ತಾಯಿ ನೇರವಾಗಿ ಜಿಲ್ಲಾ ಮೇಜಿಸ್ಟ್ರೇಟ್ ಅವರ ಬಳಿ ಹೋಗಿ ತಮಗಾದ ಅನ್ಯವನ್ನು ವಿವರಿಸಿದ್ದರು. ಪರಿಸ್ಥಿತಿಯ ಗಾಂಭೀರ್ಯತೆಯನ್ನು ಅರಿತ ಜಿಲ್ಲಾಡಳಿತ, ಬಾಲಕಿಗೆ ಸಂಪೂರ್ಣ ಉಚಿತವಾಗಿ ಚಿಕಿತ್ಸೆ ನೀಡುವಂತೆ ಮುಖ್ಯ ವೈದ್ಯಕೀಯ ಅಧಿಕಾರಿಗೆ (CMO) ಖಡಕ್ ಸೂಚನೆ ನೀಡಿತ್ತು.
ಆದರೆ ಜಿಲ್ಲಾಡಳಿತದ ಆದೇಶವನ್ನೂ ಗಾಳಿಗೆ ತೂರಿದ ಆಸ್ಪತ್ರೆಯ ಸಿಬ್ಬಂದಿ, ಹಣ ನೀಡದೆ ಚಿಕಿತ್ಸೆ ಸಾಧ್ಯವೇ ಇಲ್ಲ ಎಂದು ಪಟ್ಟು ಹಿಡಿದಿದ್ದರು. ಕೊನೆಗೆ ಬೇರೆ ದಾರಿಯಿಲ್ಲದೆ ತಾಯಿ ರೇಷ್ಮಾ ಅವರು ತಮಗಿದ್ದ ಅಲ್ಪಸ್ವಲ್ಪ ಹಣದಲ್ಲಿ 8,000 ರೂಪಾಯಿಗಳನ್ನು ಪಾವತಿಸಿ, ಇನ್ನುಳಿದ ಹಣವನ್ನು ಆಮೇಲೆ ಕೊಡುವುದಾಗಿ ವಿನಂತಿಸಿಕೊಂಡಿದ್ದರು. ಅದರಂತೆ ಶಸ್ತ್ರಚಿಕಿತ್ಸೆಯೂ ನಡೆದಿತ್ತು. ಆದರೆ ಅಸಲಿ ಕ್ರೌರ್ಯ ಶುರುವಾಗಿದ್ದು ಫಾಲೋ-ಅಪ್ ತಪಾಸಣೆಯ ಸಮಯದಲ್ಲಿ. ಇತ್ತೀಚೆಗೆ ಮಗಳ ಕಾಲಿನ ತಪಾಸಣೆಗಾಗಿ ತಾಯಿ ಮತ್ತೆ ಆಸ್ಪತ್ರೆಗೆ ಬಂದಾಗ, ಕಾರ್ಯಾಚರಣೆ ನಡೆಸಿದ್ದ ವೈದ್ಯರು ಬಾಕಿ ಹಣಕ್ಕಾಗಿ ಪೀಡಿಸಿದ್ದಾರೆ. ಹಣ ತಂದಿಲ್ಲ ಎಂದು ಗೊತ್ತಾಗುತ್ತಿದ್ದಂತೆ ಸಿಟ್ಟಿಗೆದ್ದ ವೈದ್ಯರು, ತಪಾಸಣೆಯ ನೆಪದಲ್ಲಿ ಬಾಲಕಿಯ ಕಾಲನ್ನು ಬಲವಂತವಾಗಿ ತಿರುಚಿ, ಮಂಡಿಯನ್ನು ಜೋರಾಗಿ ಮಡಚಿದ್ದಾರೆ. ಆ ಸಮಯದಲ್ಲಿ ಇಡೀ ಆಸ್ಪತ್ರೆ ನಡುಗುವಂತೆ ಬಾಲಕಿ ಕಿರುಚಿಕೊಂಡಿದ್ದಾಳೆ ಮತ್ತು ಕಾಲಿನ ಮೂಳೆ ಮುರಿಯುವ ಸದ್ದು ಕೇಳಿಸಿದೆ ಎಂದು ತಾಯಿ ಕಣ್ಣೀರಿಡುತ್ತಾ ಆರೋಪಿಸಿದ್ದಾರೆ. ಈ ಘಟನೆಯ ನಂತರ ಮಗಳ ಆರೋಗ್ಯ ಮತ್ತಷ್ಟು ಹದಗೆಟ್ಟಿದ್ದು, ಆಸ್ಪತ್ರೆಯ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ.
ಸದ್ಯ ನ್ಯಾಯಕ್ಕಾಗಿ ಅಲೆಯುತ್ತಿರುವ ಈ ನತದೃಷ್ಟ ತಾಯಿ ಮತ್ತು ಮಗಳು ಜಿಲ್ಲಾಧಿಕಾರಿಗಳ ಕಚೇರಿಯ ಮೆಟ್ಟಿಲೇರಿದ್ದಾರೆ. ಇನ್ನು ಈ ಗಂಭೀರ ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯ ವೈದ್ಯಕೀಯ ಅಧಿಕಾರಿ ಸುನಿಲ್ ತಿವಾರಿ ಅವರು, ಘಟನೆಯ ಕುರಿತು ಸಂಪೂರ್ಣ ತನಿಖೆ ನಡೆಸಲಾಗುವುದು ಮತ್ತು ತಪ್ಪಿತಸ್ಟರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಾಗುವುದು ಎಂದು ಭರವಸೆ ನೀಡಿದ್ದಾರೆ. ಆದರೆ ಜೀವ ರಕ್ಷಕರು ಎಂದು ನಂಬ ಬಂದ ಬಡವರ ಮೇಲೆಯೇ ಇಂತಹ ಪಾಪಿ ಕೃತ್ಯ ನಡೆಸಿರುವುದು ಇಡೀ ಸಮಾಜವೇ ಆಕ್ರೋಶ ಕಣ್ಣೀರು ಸುರಿಸುವಂತೆ ಮಾಡಿದೆ.


















