ಬೆಂಗಳೂರು: ಕರ್ನಾಟಕದ ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಡಿಸಿಎಂ ಜಿ. ಪರಮೇಶ್ವರ್ ಅವರೊಂದಿಗೆ 12 ಜನ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಲೋಕಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಅವರು ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧನೆ ಮಾಡಿದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಗಂಗಾಧರ ಅಜ್ಜಯ್ಯನವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರೆ, ಉಪಮುಖ್ಯಮಂತ್ರಿಯಾಗಿ ಜಿ. ಪರಮೇಶ್ವರ ಅವರು ಡಾ. ಬಿ.ಆರ್. ಅಂಬೇಡ್ಕರ್ ಅವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ಕೆ.ಎಚ್. ಮುನಿಯಪ್ಪ ಮತ್ತು ಕೆ.ಜೆ. ಜಾರ್ಜ್ ಮತ್ತು ಯು.ಟಿ. ಖಾದರ್ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರೆ, ಎಂ.ಬಿ. ಪಾಟೀಲ್ ಅವರು ವಿಶ್ವಗುರು ಬಸವಣ್ಣ ಮತ್ತು ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ಇವರೊಂದಿಗೆ ರಾಮಲಿಂಗಾ ರೆಡ್ಡಿ, ಸತೀಶ್ ಜಾರಕಿಹೊಳಿ, ಕೃಷ್ಣ ಬೈರೇಗೌಡ, ಪ್ರಿಯಾಂಕ್ ಖರ್ಗೆ, ಈಶ್ವರ್ ಖಂಡ್ರೆ, ಯತೀಂದ್ರ ಸಿದ್ದರಾಮಯ್ಯ, ಬೈರತಿ ಸುರೇಶ್ ಮತ್ತು ಶರಣ ಪ್ರಕಾಶ್ ಪಾಟೀಲ್ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.






















