SK Home Ad
Home ಸುದ್ದಿ ರಾಜ್ಯ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಕರ್ನಾಟಕ, ಗೋವಾ ಪ್ರವಾಸ

ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಕರ್ನಾಟಕ, ಗೋವಾ ಪ್ರವಾಸ

0
80

ಮೇ 31ರಂದು ಧರ್ಮಸ್ಥಳಕ್ಕೆ ಉಪರಾಷ್ಟ್ರಪತಿ ಆಗಮನ; ಸಿರಿ ಇಂಡಸ್ಟ್ರಿಯಲ್ ಪಾರ್ಕ್ ಉದ್ಘಾಟನೆ

ಬೆಂಗಳೂರು: ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು ಮೇ 29ರಿಂದ 31ರವರೆಗೆ ಕರ್ನಾಟಕ ಹಾಗೂ ಗೋವಾ ರಾಜ್ಯಗಳಿಗೆ ಮಹತ್ವದ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಅವಧಿಯಲ್ಲಿ ಅವರು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

ಮೇ 29ರಂದು ಬೆಂಗಳೂರಿನಲ್ಲಿ ನಡೆಯಲಿರುವ ಆರ್ಟ್ ಆಫ್ ಲಿವಿಂಗ್ ಫೌಂಡೇಶನ್‌ನ 45ನೇ ವರ್ಷದ ಜಾಗತಿಕ ಆಚರಣೆಯಲ್ಲಿ ಉಪರಾಷ್ಟ್ರಪತಿಗಳು ಭಾಗವಹಿಸಲಿದ್ದಾರೆ. ವಿಶ್ವದಾದ್ಯಂತ ಪ್ರಸಿದ್ಧಿಯಾಗಿರುವ ಈ ಸಂಸ್ಥೆಯ ವಿಶೇಷ ಕಾರ್ಯಕ್ರಮಕ್ಕೆ ವಿವಿಧ ಕ್ಷೇತ್ರಗಳ ಗಣ್ಯರು ಆಗಮಿಸುವ ನಿರೀಕ್ಷೆಯಿದೆ.

ಮೇ 30ರಂದು ಉಪರಾಷ್ಟ್ರಪತಿಗಳು ಗೋವಾ ರಾಜ್ಯೋತ್ಸವ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಪಣಜಿಗೆ ಭೇಟಿ ನೀಡಲಿದ್ದಾರೆ. ಗೋವಾ ಸರ್ಕಾರ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ರಾಜ್ಯದ ಅಭಿವೃದ್ಧಿ, ಸಂಸ್ಕೃತಿ ಹಾಗೂ ಐತಿಹಾಸಿಕ ಪರಂಪರೆಯ ಕುರಿತು ವಿಶೇಷ ಕಾರ್ಯಕ್ರಮಗಳು ನಡೆಯಲಿವೆ.

ಇದಾದ ಬಳಿಕ ಉಪರಾಷ್ಟ್ರಪತಿ ಕರ್ನಾಟಕ ಪ್ರವಾಸ ಮುಂದುವರಿಸಲಿದ್ದಾರೆ. ಮೇ 30ರಂದು ಸಂಜೆ 4:25ಕ್ಕೆ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವ ಅವರು, ಬಳಿಕ ಹೆಲಿಕಾಪ್ಟರ್ ಮೂಲಕ ಸಂಜೆ 5:05ಕ್ಕೆ ಧರ್ಮಸ್ಥಳ ಹೆಲಿಪ್ಯಾಡ್‌ಗೆ ತಲುಪಲಿದ್ದಾರೆ. ನಂತರ ಧರ್ಮಸ್ಥಳದ ಅತಿಥಿಗೃಹದಲ್ಲಿ ವಾಸ್ತವ್ಯ ಹೂಡಲಿದ್ದಾರೆ.

ಮೇ 31ರಂದು ಬೆಳಗ್ಗೆ 8 ಗಂಟೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಧರ್ಮಸ್ಥಳ ಧಾರ್ಮಿಕ ಕ್ಷೇತ್ರಕ್ಕೆ ದೇಶದ ಉನ್ನತ ಹುದ್ದೆಯ ಗಣ್ಯರು ಭೇಟಿ ನೀಡುತ್ತಿರುವುದು ಕ್ಷೇತ್ರದ ಭಕ್ತರಲ್ಲಿ ಸಂತಸ ಮೂಡಿಸಿದೆ.

ಅದೇ ದಿನ ಬೆಳಿಗ್ಗೆ 11 ಗಂಟೆಗೆ ಬೆಳ್ತಂಗಡಿಯಲ್ಲಿ ನಿರ್ಮಾಣಗೊಂಡಿರುವ “ಸಿರಿ ಇಂಡಸ್ಟ್ರಿಯಲ್ ಪಾರ್ಕ್” ಅನ್ನು ಉಪರಾಷ್ಟ್ರಪತಿಗಳು ಉದ್ಘಾಟಿಸಲಿದ್ದಾರೆ. ಈ ಕೈಗಾರಿಕಾ ಉದ್ಯಾನವನವು ಪ್ರದೇಶದ ಕೈಗಾರಿಕಾ ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಗೆ ಉತ್ತೇಜನ ನೀಡಲಿದೆ ಎಂದು ನಿರೀಕ್ಷಿಸಲಾಗಿದೆ.

ಕಾರ್ಯಕ್ರಮಗಳ ನಂತರ ಮಧ್ಯಾಹ್ನ 2:25ಕ್ಕೆ ಧರ್ಮಸ್ಥಳ ಹೆಲಿಪ್ಯಾಡ್‌ನಿಂದ ಹೊರಡುವ ಉಪರಾಷ್ಟ್ರಪತಿಗಳು 3:05ಕ್ಕೆ ಮಂಗಳೂರು ವಿಮಾನ ನಿಲ್ದಾಣ ತಲುಪಲಿದ್ದಾರೆ. ಬಳಿಕ ಮಧ್ಯಾಹ್ನ 3:15ಕ್ಕೆ ಕೇರಳದ ಕಣ್ಣೂರಿಗೆ ಪ್ರಯಾಣ ಬೆಳೆಸಲಿದ್ದಾರೆ.

ಉಪರಾಷ್ಟ್ರಪತಿಯವರ ಈ ಪ್ರವಾಸದ ಹಿನ್ನೆಲೆ ಮಂಗಳೂರು, ಧರ್ಮಸ್ಥಳ ಹಾಗೂ ಬೆಳ್ತಂಗಡಿ ಭಾಗಗಳಲ್ಲಿ ಭದ್ರತಾ ವ್ಯವಸ್ಥೆಯನ್ನು ಕಟ್ಟು ನಿಟ್ಟಾಗಿಸಲಾಗಿದೆ. ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಅಗತ್ಯ ಸಿದ್ಧತೆಗಳನ್ನು ಕೈಗೊಂಡಿವೆ.