ನಾಯಕತ್ವ ಬದಲಾವಣೆಯಿಂದ ಕಾಂಗ್ರೆಸ್ ದುರ್ಬಲ: ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದ ಬೊಮ್ಮಾಯಿ
ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡುವುದರ ಕುರಿತು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದು ಇದು ಕಾಂಗ್ರೆಸ್ ಪಕ್ಷ ಹಾಗೂ ರಾಜ್ಯ ರಾಜಕೀಯದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಖಾಸಗಿ ಸುದ್ದಿ ಸಂಸ್ಥೆಗೆ ನೀಡಿದ ಪ್ರತಿಕ್ರಿಯೆಯಲ್ಲಿ ಅವರು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. “ಕಾಂಗ್ರೆಸ್ ಪಕ್ಷದಿಂದ ಹಿಂದುಳಿದ ವರ್ಗಗಳಿಗೆ ನಂಬಿಕೆ ದ್ರೋಹವಾಗಿದೆ. ವಿಶೇಷವಾಗಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಒಬಿಸಿ ಪರವಾಗಿ ಮಾತನಾಡುತ್ತಾರೆ. ಆದರೆ ಅದೇ ಪಕ್ಷ ಒಬಿಸಿ ಸಮುದಾಯದ ಮುಖ್ಯಮಂತ್ರಿಯನ್ನು ಕಿತ್ತು ಹಾಕಿದೆ” ಎಂದು ಬೊಮ್ಮಾಯಿ ಆರೋಪಿಸಿದರು.
ಹಿಂದುಳಿದ ವರ್ಗಗಳ ಬಗ್ಗೆ ಕಾಂಗ್ರೆಸ್ ನಾಯಕರು ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ ಎಂಬುದು ಈಗ ಬಹಿರಂಗವಾಗಿದೆ ಎಂದು ಅವರು ಟೀಕಿಸಿದರು.
“2028ರಲ್ಲಿ ಕಾಂಗ್ರೆಸ್‌ಗೆ ಪಾಠ”: ಒಬಿಸಿ ಸಮುದಾಯ ಕಾಂಗ್ರೆಸ್ ನಡೆಗೆ ಬೇಸರಗೊಂಡಿದ್ದು, 2028ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸುವ ಮನಸ್ಥಿತಿಯಲ್ಲಿದೆ ಎಂದು ಬೊಮ್ಮಾಯಿ ಹೇಳಿದರು. “ಈ ಬೆಳವಣಿಗೆ ಹಿಂದುಳಿದ ವರ್ಗಗಳ ರಾಜಕೀಯ ಮನೋಭಾವದ ಮೇಲೆ ಪರಿಣಾಮ ಬೀರುತ್ತದೆ” ಎಂದು ಅವರು ಅಭಿಪ್ರಾಯಪಟ್ಟರು.
“ನಾಯಕತ್ವ ಬದಲಾವಣೆ ಆಡಳಿತ ದುರ್ಬಲಗೊಳಿಸಿದೆ” : ರಾಜ್ಯದಲ್ಲಿ ನಡೆದ ನಾಯಕತ್ವ ಬದಲಾವಣೆ ಆಡಳಿತ ಪಕ್ಷವನ್ನು ದುರ್ಬಲಗೊಳಿಸಿದೆ ಎಂದು ಹೇಳಿದ ಬೊಮ್ಮಾಯಿ, ಬಿಜೆಪಿ ಈ ಪರಿಸ್ಥಿತಿಯನ್ನು ರಾಜಕೀಯವಾಗಿ ಬಳಸಿಕೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. “ಬಿಜೆಪಿ ಇನ್ನಷ್ಟು ಬಲಿಷ್ಠವಾಗಿ ಸಂಘಟಿತವಾಗಿ 2028ರಲ್ಲಿ ಸ್ವಂತ ಶಕ್ತಿಯಿಂದ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತದೆ” ಎಂದು ಹೇಳಿದರು.
ಬಿಜೆಪಿ ಸಂಘಟನೆಗೆ ಒತ್ತು : ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಕರ್ನಾಟಕ ಭೇಟಿಯ ವೇಳೆ ನೀಡಿದ ಸೂಚನೆಗಳ ಕುರಿತು ಮಾತನಾಡಿದ ಬೊಮ್ಮಾಯಿ, ಪಕ್ಷವನ್ನು ಬೂತ್ ಮಟ್ಟದಿಂದ ರಾಜ್ಯ ಮಟ್ಟದವರೆಗೆ ಬಲಪಡಿಸಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.
SIR ಪ್ರಕ್ರಿಯೆ ಗಂಭೀರವಾಗಿ ತೆಗೆದುಕೊಳ್ಳಲು ಸೂಚನೆ : ಎಸ್‌ಐಆರ್ ಪ್ರಕ್ರಿಯೆಯಲ್ಲಿ ಪಕ್ಷದ ಬಿಎಲ್‌ಎ ಹಾಗೂ ಬಿಎಲ್‌ಎ-2 ಕಾರ್ಯಕರ್ತರು ಹೇಗೆ ಕೆಲಸ ಮಾಡಬೇಕು ಎಂಬುದರ ಬಗ್ಗೆ ಗಂಭೀರವಾಗಿ ಗಮನಹರಿಸಲು ರಾಷ್ಟ್ರೀಯ ನಾಯಕತ್ವ ಸೂಚನೆ ನೀಡಿದೆ ಎಂದು ಹೇಳಿದರು. “ನಿತಿನ್ ನಬಿನ್ ಅವರು ಮುಂದಿನ ದಿನಗಳಲ್ಲಿ ಹಲವು ಬಾರಿ ಕರ್ನಾಟಕಕ್ಕೆ ಭೇಟಿ ನೀಡಲಿದ್ದು, 2028ರಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವುದು ಅವರ ಗುರಿಯಾಗಿದೆ” ಎಂದು ಬೊಮ್ಮಾಯಿ ತಿಳಿಸಿದರು.
ರಾಜ್ಯ ರಾಜಕೀಯದಲ್ಲಿ ಚರ್ಚೆ : ಸಿದ್ದರಾಮಯ್ಯ ರಾಜೀನಾಮೆ ಹಾಗೂ ಅದರ ಬಳಿಕದ ರಾಜಕೀಯ ಬೆಳವಣಿಗೆಗಳು ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಆರೋಪ-ಪ್ರತ್ಯಾರೋಪಗಳು ಹೆಚ್ಚಾಗಿವೆ.


















