Home Advertisement
Home ಸುದ್ದಿ ದೇಶ ಪ್ರಧಾನಿ ಮೋದಿ ಸಂಪುಟ ಸಭೆ: ನೀಟ್ ಹಗರಣ, ತೈಲ ಬೆಲೆ ಏರಿಕೆ ಕುರಿತು ಗಂಭೀರ ಚರ್ಚೆ

ಪ್ರಧಾನಿ ಮೋದಿ ಸಂಪುಟ ಸಭೆ: ನೀಟ್ ಹಗರಣ, ತೈಲ ಬೆಲೆ ಏರಿಕೆ ಕುರಿತು ಗಂಭೀರ ಚರ್ಚೆ

0
32

ನವದೆಹಲಿ: ಐದು ರಾಷ್ಟ್ರಗಳ ಪ್ರವಾಸ ಮುಗಿಸಿ ತಾಯ್ನಾಡಿಗೆ ಮರಳಿರುವ ಪ್ರಧಾನಿ ನರೇಂದ್ರ ಮೋದಿ ಗುರುವಾರ ರಾಷ್ಟ್ರ ರಾಜಧಾನಿಯ ‘ಸೇವಾ ತೀರ್ಥ’ ಕಾರ್ಯಾಲಯದಲ್ಲಿ ಕೇಂದ್ರ ಸಚಿವ ಸಂಪುಟದ ಮಹತ್ವದ ಸಭೆ ನಡೆಸಲಾಗಿತ್ತು. ಇದು ಈ ವರ್ಷದ ಮೊದಲ ಸಂಪುಟ ಸಭೆಯಾಗಿದ್ದು, ಸಂಜೆ 5 ಗಂಟೆಗೆ ಆರಂಭವಾಗಿ ತಡರಾತ್ರಿಯವರೆಗೂ ಮುಂದುವರಿಯಿತು. ಸಭೆಯಲ್ಲಿ 30ಕ್ಕೂ ಹೆಚ್ಚು ಸಂಪುಟ ಸಚಿವರು, 36 ರಾಜ್ಯ ಖಾತೆ ಸಚಿವರು ಹಾಗೂ ಐವರು ಸಹಾಯಕ ಸಚಿವರು ಪಾಲ್ಗೊಂಡಿದ್ದರು.
ಪಶ್ಚಿಮ ಏಷ್ಯಾ ಬಿಕ್ಕಟ್ಟಿನಿಂದಾಗಿ ಜಾಗತಿಕವಾಗಿ ಕಚ್ಚಾ ತೈಲ ದರ ಏರಿಕೆಯಾಗಿರುವುದು ಮತ್ತು ಅದರಿಂದ ಎದುರಾಗಿರುವ ಆರ್ಥಿಕ ಸಂಕಷ್ಟಗಳ ಬಗ್ಗೆ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಲಾಯಿತು.

ಇದರೊಂದಿಗೆ ಭೌಗೋಳಿಕ ರಾಜಕೀಯ ಒತ್ತಡಗಳು ಹಾಗೂ ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿರುವ ‘ನೀಟ್-ಯುಜಿ’ ಪ್ರಶ್ನೆಪತ್ರಿಕೆ ಸೋರಿಕೆ ಹಗರಣದ ಕುರಿತೂ ಗಂಭೀರ ಸಮಾಲೋಚನೆ ನಡೆಯಿತು. ನೀಟ್ ಪತ್ರಿಕೆ ಸೋರಿಕೆ ಮತ್ತು ಸಿಬಿಎಸ್‌ಇ 12ನೇ ತರಗತಿ ಅಂಕಪಟ್ಟಿ ದೋಷಗಳ ಕುರಿತು ಪ್ರಧಾನಿಯವರು ಶಿಕ್ಷಣ ಸಚಿವರನ್ನು ಪ್ರಶ್ನಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಮೂರನೇ ಅವಧಿಗೆ ಅಧಿಕಾರಕ್ಕೇರಿದ ನಂತರ ಎನ್‌ಡಿಎ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ವರದಿ ಸಲ್ಲಿಸಲು ಸಚಿವರಿಗೆ ಸೂಚಿಸಲಾಗಿದೆ. ಇದೇ ವೇಳೆ ಕಾರ್ಮಿಕ, ಅರಣ್ಯ, ರಸ್ತೆ ಸಾರಿಗೆ ಮತ್ತು ವಿದೇಶಾಂಗ ಸಚಿವಾಲಯಗಳು ಪ್ರಮುಖ ವಿಷಯಗಳನ್ನು ಮಂಡಿಸಿದವು. ನಕ್ಸಲರ ನಿರ್ಮೂಲನೆ ಕುರಿತೂ ಚರ್ಚೆಗಳು ನಡೆದವು.

ಮತ್ತೊಂದೆಡೆ, ಸಚಿವ ಸಂಪುಟ ಪುನರ್‌ರಚನೆಯ ವದಂತಿಗಳ ನಡುವೆಯೇ ಈ ಸಭೆ ನಡೆದಿರುವುದು ತೀವ್ರ ಕುತೂಹಲ ಮೂಡಿಸಿದೆ. ಮೋದಿ ಸರ್ಕಾರವು ಹೊಸ ಹಾಗೂ ಯುವ ನಾಯಕರಿಗೆ ಸಂಪುಟದಲ್ಲಿ ಅವಕಾಶ ನೀಡಲು ಯೋಜಿಸುತ್ತಿದ್ದು, ಜೂನ್ 15ರ ನಂತರ ಸಂಪುಟ ಪುನರ್‌ರಚನೆಯಾಗುವ ಸಾಧ್ಯತೆಯಿದೆ ಎಂದು ಬಿಜೆಪಿ ಮೂಲಗಳು ಹೇಳಿವೆ. ಯುಎಇ, ನೆದರ್ಲೆಂಡ್ಸ್ ಸೇರಿದಂತೆ 5 ದೇಶಗಳ ಯಶಸ್ವಿ ಪ್ರವಾಸ ಮುಗಿಸಿ ಮೇ 21 ರಂದು ಪ್ರಧಾನಿ ವಾಪಸಾಗಿದ್ದಾರೆ.