Home Advertisement
Home ನಮ್ಮ ಜಿಲ್ಲೆ ದಕ್ಷಿಣ ಕನ್ನಡ “ಕೇಂದ್ರ ಅನುದಾನದಿಂದಲೇ ದಕ್ಷಿಣ ಕನ್ನಡ ಅಭಿವೃದ್ಧಿ”: ರಾಜ್ಯ ಸರ್ಕಾರ ವಿರುದ್ಧ ಆಕ್ರೋಶ

“ಕೇಂದ್ರ ಅನುದಾನದಿಂದಲೇ ದಕ್ಷಿಣ ಕನ್ನಡ ಅಭಿವೃದ್ಧಿ”: ರಾಜ್ಯ ಸರ್ಕಾರ ವಿರುದ್ಧ ಆಕ್ರೋಶ

0
48

ಮಂಗಳೂರಿಗೆ ಹೈಕೋರ್ಟ್ ಪೀಠ ಸ್ಥಾಪನೆಗೆ ಕರಾವಳಿಗರ ಒತ್ತಾಯ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿ ಕಾಮಗಾರಿಗಳು ಕೇಂದ್ರ ಸರ್ಕಾರದ ಅನುದಾನದಿಂದ ನಡೆಯುತ್ತಿವೆ ಹೊರತು ರಾಜ್ಯ ಸರ್ಕಾರದಿಂದಲ್ಲ ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ್‌ ಕಾಮತ್‌ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಮಂಗಳೂರಿನ ಅಟಲ್‌ಸೇವಾ ಕೇಂದ್ರದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಮೂರು ವರ್ಷಗಳಿಂದ ರಾಜ್ಯ ಸರ್ಕಾರ ಮಂಗಳೂರು ಅಭಿವೃದ್ಧಿಗೆ ಯಾವುದೇ ಸಮರ್ಪಕ ಅನುದಾನ ಬಿಡುಗಡೆ ಮಾಡದೇ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿದರು.

ಜಿಲ್ಲೆಯ ಅಭಿವೃದ್ಧಿ ಕುರಿತು ಗಮನಹರಿಸಬೇಕಾದ ಜಿಲ್ಲಾ ಉಸ್ತುವಾರಿ ಸಚಿವರು ಎರಡು ತಿಂಗಳಿಗೊಮ್ಮೆ ಮಾತ್ರ ಜಿಲ್ಲೆಗೆ ಬರುತ್ತಿದ್ದಾರೆ. ಅದೂ ಉದ್ಘಾಟನೆ ಮತ್ತು ಶಿಲಾನ್ಯಾಸ ಕಾರ್ಯಕ್ರಮಗಳಿಗೆ ಮಾತ್ರ ಬರುತ್ತಿದ್ದು, ಅಭಿವೃದ್ಧಿ ಕುರಿತು ಚರ್ಚಿಸಲು ಆಸಕ್ತಿ ತೋರಿಸುತ್ತಿಲ್ಲ ಎಂದು ಟೀಕಿಸಿದರು.

ಪಿಂಚಣಿ ಸಿಗದೆ ಜನ ಸಂಕಷ್ಟ : ರಾಜ್ಯದಲ್ಲಿ ಕಳೆದ ಮೂರು ತಿಂಗಳಿಂದ ಸಾಮಾಜಿಕ ಭದ್ರತಾ ಪಿಂಚಣಿಗಳು ಸರಿಯಾಗಿ ವಿತರಣೆ ಆಗುತ್ತಿಲ್ಲ. ವೃದ್ಧಾಪ್ಯ ವೇತನ, ವಿಧವಾ ವೇತನ, ಲಿಂಗತ್ವ ಅಲ್ಪಸಂಖ್ಯಾತರ ಮಾಸಾಶನ, ನಿವೃತ್ತ ನೌಕರರ ಪಿಂಚಣಿ ಸೇರಿದಂತೆ ಹಲವು ಯೋಜನೆಗಳ ಹಣ ಬಿಡುಗಡೆ ಆಗದೆ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಕಾಮತ್ ಆರೋಪಿಸಿದರು.

“ಈ ಪಿಂಚಣಿಗಳನ್ನೇ ನಂಬಿ ಜೀವನ ನಡೆಸುವವರು ಪರದಾಡುತ್ತಿದ್ದಾರೆ. ಆದರೆ ಸರ್ಕಾರ ಸಾಧನಾ ಸಮಾವೇಶ ನಡೆಸುವುದರಲ್ಲಿ ಬ್ಯುಸಿಯಾಗಿದೆ” ಎಂದು ಅವರು ಕಿಡಿಕಾರಿದರು.

ಕೇಂದ್ರ ಅನುದಾನ ಬಳಕೆ : ಮಂಗಳೂರಿನ ಕದ್ರಿ ಹಿಲ್ಸ್ ಆವರಣದಲ್ಲಿ ನಿರ್ಮಾಣವಾಗಿರುವ ಕರ್ನಾಟಕ-ಜರ್ಮನ್ ತಾಂತ್ರಿಕ ತರಬೇತಿ ಸಂಸ್ಥೆಯ ಕಟ್ಟಡಕ್ಕೆ ಕೇಂದ್ರ ಸರ್ಕಾರದ ಅನುದಾನ ಬಳಸಲಾಗಿದೆ ಎಂದು ಅವರು ತಿಳಿಸಿದರು. ಸುಮಾರು ₹20.85 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಕಟ್ಟಡವನ್ನು ಕಾಂಗ್ರೆಸ್ ತನ್ನ ಸಾಧನೆ ಎಂದು ಹೇಳಿಕೊಳ್ಳುವ ಸಾಧ್ಯತೆಯಿದೆ ಎಂದು ವ್ಯಂಗ್ಯವಾಡಿದರು.

ಮಳೆಗಾಲ ಮುನ್ನ ಕ್ರಮಕ್ಕೆ ಒತ್ತಾಯ : ಮಳೆಗಾಲಕ್ಕೆ ಕೆಲವೇ ದಿನಗಳು ಬಾಕಿ ಇದ್ದರೂ ಪಾಲಿಕೆ ವ್ಯಾಪ್ತಿಯಲ್ಲಿ ರಾಜಕಾಲುವೆ ಹಾಗೂ ಚರಂಡಿಗಳ ಹೂಳೆತ್ತುವಿಕೆ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಶಾಸಕ ಕಾಮತ್ ಅಸಮಾಧಾನ ವ್ಯಕ್ತಪಡಿಸಿದರು. ಪ್ರತಿ ವಾರ್ಡ್‌ಗೆ ಗ್ಯಾಂಗ್‌ಮೆನ್ ನೇಮಕ ಸೇರಿದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಅನೇಕ ಬಾರಿ ಸೂಚಿಸಿದ್ದರೂ ಅಧಿಕಾರಿಗಳು ನಿರೀಕ್ಷಿತ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಆರೋಪಿಸಿದರು.

ಮಂಗಳೂರಲ್ಲೇ ಹೈಕೋರ್ಟ್ ಪೀಠಕ್ಕೆ ಒತ್ತಾಯ : ಮಂಗಳೂರಿನಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪಿಸಬೇಕು ಎಂಬುದು ಕರಾವಳಿಯ ಜನರ ಒಕ್ಕೊರಲ ಬೇಡಿಕೆಯಾಗಿದೆ ಎಂದು ಅವರು ಹೇಳಿದರು. ಸ್ಪೀಕರ್ ನೇತೃತ್ವದಲ್ಲಿ ಜಿಲ್ಲೆಯ ಎಲ್ಲಾ ಪಕ್ಷಗಳ ಶಾಸಕರು, ಸಂಸದರು ಹಾಗೂ ಜನಪ್ರತಿನಿಧಿಗಳು ಈ ಬೇಡಿಕೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ಕೆಲ ವಲಯಗಳಿಂದ ವಿರೋಧ ವ್ಯಕ್ತವಾಗುತ್ತಿದ್ದರೂ, ಮಂಗಳೂರಲ್ಲೇ ಹೈಕೋರ್ಟ್ ಪೀಠ ಸ್ಥಾಪನೆಗಾಗಿ ಹೋರಾಟ ಮುಂದುವರಿಯಲಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಪ್ರೇಮಾನಂದ ಶೆಟ್ಟಿ, ನಿತಿನ್‌ಕುಮಾರ್‌, ರವಿಶಂಕರ್‌ಮಿಜಾರ್‌, ರಮೇಶ್‌ ಕಂಡೆಟ್ಟು, ಪೂರ್ಣಿಮಾ, ರಮೇಶ್‌ಹೆಗ್ಡೆ, ಸುರೇಖಾ, ಮೋಹನ ಪೂಜಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.