Home Advertisement
Home ನಮ್ಮ ಜಿಲ್ಲೆ ಬಳ್ಳಾರಿ ಬಳ್ಳಾರಿ: ಗಾಂಜಾ ಕಿಂಗ್ ಪಿನ್ ದೌಲ ಬಂಧನ ಸಮ್ಮತಿಸಿದ ಸಲಹಾ ಸಮಿತಿ

ಬಳ್ಳಾರಿ: ಗಾಂಜಾ ಕಿಂಗ್ ಪಿನ್ ದೌಲ ಬಂಧನ ಸಮ್ಮತಿಸಿದ ಸಲಹಾ ಸಮಿತಿ

0
78

ಬಳ್ಳಾರಿ: ಬಳ್ಳಾರಿಯ ಎನ್‌ಡಿಪಿಎಸ್‌ ಪ್ರಕರಣಗಳ ಆರೋಪಿ ಡಿ. ದೌಲ ಅಲಿಯಾಸ್ ಎಸ್. ದೌಲನನ್ನು 2027ರವರೆಗೆ ಬಂಧನದಲ್ಲಿಡಲು ಸಲಹಾ ಸಮಿತಿಯಿಂದ ಅನುಮೋದನೆ ದೊರೆತಿದೆ.

ಬಳ್ಳಾರಿ ಜಿಲ್ಲೆಯಲ್ಲಿಯೂ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಮಾದಕ ದ್ರವ್ಯ ಸಾಗಣೆ ಮತ್ತು ಮಾರಾಟ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಯಾದ ಡಿ. ದೌಲ ಅಲಿಯಾಸ್ ಎಸ್. ದೌಲ ಅಲಿಯಾಸ್ ಮೆಹಬೂಬ್ ದೌಲನನ್ನು ಒಂದು ವರ್ಷದವರೆಗೆ ಬಂಧನದಲ್ಲಿಡುವ ಆದೇಶಕ್ಕೆ ಸಲಹಾ ಸಮಿತಿಯಿಂದ ಅನುಮೋದನೆ ದೊರೆತಿದೆ ಎಂದು ಜಿಲ್ಲಾ ಪೊಲೀಸ್ ಇಲಾಖೆ ಪ್ರಕಟಿಸಿದೆ.

ನಗರದ ರಾಣಿತೋಟ ಪ್ರದೇಶದ ನಿವಾಸಿಯಾಗಿರುವ 40 ವರ್ಷದ ದೌಲ ವಿರುದ್ಧ ಕರ್ನಾಟಕದ ವಿವಿಧ ಪೊಲೀಸ್ ಠಾಣೆಗಳಲ್ಲಿ ಎನ್‌ಡಿಪಿಎಸ್‌ (Narcotic Drugs and Psychotropic Substances) ಕಾಯ್ದೆಯಡಿಯಲ್ಲಿ ಒಟ್ಟು 21 ಪ್ರಕರಣಗಳು ದಾಖಲಾಗಿವೆ. ಆರೋಪಿಯು ದೀರ್ಘಕಾಲದಿಂದ ಮಾದಕ ದ್ರವ್ಯಗಳ ಸಂಗ್ರಹಣೆ, ಸಾಗಣೆ ಹಾಗೂ ಮಾರಾಟ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ದೌಲನ ಅಕ್ರಮ ಚಟುವಟಿಕೆಗಳು ಸಮಾಜದ ಸ್ವಾಸ್ಥ್ಯ ಮತ್ತು ಯುವಜನತೆಯ ಭವಿಷ್ಯಕ್ಕೆ ಅಪಾಯಕಾರಿಯಾಗಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕ ಹಿತದೃಷ್ಟಿಯಿಂದ ಹಾಗೂ ಸಮಾಜದ ಆರೋಗ್ಯ ಕಾಪಾಡುವ ಉದ್ದೇಶದಿಂದ ಕಠಿಣ ಕ್ರಮ ಕೈಗೊಳ್ಳಲಾಗಿದೆ.

ಈ ಹಿನ್ನೆಲೆದಲ್ಲಿ, ಎನ್‌ಡಿಪಿಎಸ್‌ ಕಾಯ್ದೆಯ ಅನ್ವಯ ಆರೋಪಿಯನ್ನು ನಿರ್ಬಂಧಿತ ಬಂಧನದಲ್ಲಿಡುವಂತೆ ಬಳ್ಳಾರಿ ಐಜಿಪಿ ಅವರಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಪ್ರಸ್ತಾವನೆ ಪರಿಶೀಲಿಸಿದ ಐಜಿಪಿ ಹರ್ಷ ಅವರು ದೌಲನನ್ನು ಒಂದು ವರ್ಷದವರೆಗೆ ಬಂಧನದಲ್ಲಿಡುವಂತೆ ಆದೇಶಿಸಿದ್ದರು.

ನಂತರ ಪ್ರಕರಣವು ಉಚ್ಚ ನ್ಯಾಯಾಲಯದ ನ್ಯಾಯಾಧೀಶರನ್ನು ಒಳಗೊಂಡ ಸಲಹಾ ಸಮಿತಿಯ ಮುಂದೆ ವಿಚಾರಣೆಗೆ ಬಂದಿತ್ತು. ವಿಚಾರಣೆ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ. ಪೆನ್ನೇಕರ್ ಹಾಗೂ ಹಿರಿಯ ಕಾನೂನು ಸಲಹೆಗಾರ ಟಿ.ಎಸ್. ಪಾಟೀಲ್ ಅವರು ಸರ್ಕಾರದ ಪರವಾಗಿ ವಾದ ಮಂಡಿಸಿದರು.

ಎಲ್ಲ ದಾಖಲೆಗಳು ಹಾಗೂ ವಾದಗಳನ್ನು ಪರಿಶೀಲಿಸಿದ ಸಲಹಾ ಸಮಿತಿಯು ದೌಲನ ಬಂಧನ ಆದೇಶಕ್ಕೆ ಸಮ್ಮತಿ ಸೂಚಿಸಿದ್ದು, 2027ರ ಫೆಬ್ರವರಿ 12ರವರೆಗೆ ಬಂಧನ ಮುಂದುವರಿಸಲು ಅನುಮೋದನೆ ನೀಡಿದೆ. ಸದ್ಯ ಆರೋಪಿಯು ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ಬಂಧನದಲ್ಲಿದ್ದಾನೆ.

ಮಾದಕ ದ್ರವ್ಯ ಸಾಗಣೆ ವಿರುದ್ಧ ರಾಜ್ಯ ಪೊಲೀಸ್ ಇಲಾಖೆ ಕಠಿಣ ಕ್ರಮ ಮುಂದುವರಿಸಿದ್ದು, ಸಮಾಜದ ಸುರಕ್ಷತೆ ಮತ್ತು ಯುವ ಸಮುದಾಯವನ್ನು ರಕ್ಷಿಸುವ ಉದ್ದೇಶದಿಂದ ಇಂತಹ ಆರೋಪಿಗಳ ವಿರುದ್ಧ ನಿರಂತರ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.