Home Advertisement
Home ನಮ್ಮ ಜಿಲ್ಲೆ ಕೊಪ್ಪಳ ಅಭಿಮಾನೋತ್ಸವವೇ ‘ರಿನಿವಲ್’ ತಂತ್ರ: ಈ ಉತ್ಸವ ಯಾವ ಪುರುಷಾರ್ಥಕ್ಕೆ ?

ಅಭಿಮಾನೋತ್ಸವವೇ ‘ರಿನಿವಲ್’ ತಂತ್ರ: ಈ ಉತ್ಸವ ಯಾವ ಪುರುಷಾರ್ಥಕ್ಕೆ ?

0
103

ಹೈಕಮಾಂಡ್ ವಿರುದ್ಧ ಯತ್ನಾಳ್‌ ಅಸಮಾಧಾನ: ಯತ್ನಾಳ್‌

ಕೊಪ್ಪಳ : ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ ಅವರು ಮತ್ತೊಮ್ಮೆ ಬಿಜೆಪಿ ಪಕ್ಷದ ನಾಯಕತ್ವದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಮಾಜಿ ಮುಖ್ಯಮಂತ್ರಿ ಬಿ. ಎಸ್‌. ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಕೊಪ್ಪಳದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಯತ್ನಾಳ್, “ಈ ತಂದೆ-ಮಕ್ಕಳು ಇರುವವರೆಗೂ ನಾನು ಬಿಜೆಪಿ ಕಚೇರಿ ಮೆಟ್ಟಿಲು ಹತ್ತಲ್ಲ” ಎಂದು ಕಿಡಿಕಾರಿದರು.

ಕರ್ನಾಟಕ ಬಿಜೆಪಿಯ ಪ್ರಸ್ತುತ ಸ್ಥಿತಿಯನ್ನು ವ್ಯಂಗ್ಯವಾಗಿ ಟೀಕಿಸಿದ ಯತ್ನಾಳ್ : “ಬೇರೆ ರಾಜ್ಯಗಳಲ್ಲಿ ಬಿಜೆಪಿ ಗೆದ್ದಾಗ ಇಲ್ಲಿನವರು ಪೇಡೆ ಹಂಚುತ್ತಾರೆ. ಆದರೆ ರಾಜ್ಯದಲ್ಲಿ ಏನು ಸಾಧನೆ ಮಾಡಿದ್ದಾರೆ? ಎಂದು ಪ್ರಶ್ನಿಸಿದರು.

ಪಕ್ಷದ ನಿರಂತರ ಸೋಲು: ವಿಜಯೇಂದ್ರ ರಾಜ್ಯಾಧ್ಯಕ್ಷರಾದ ಬಳಿಕ ಪಕ್ಷ ನಿರಂತರ ಸೋಲು ಕಾಣುತ್ತಿದೆ ಎಂದು ಆರೋಪಿಸಿದ ಅವರು, “ಒಂದು ಕಾಲದಲ್ಲಿ ರಾಜ್ಯದಲ್ಲಿ ಬಿಜೆಪಿ 25 ಸಂಸದರನ್ನು ಗೆಲ್ಲಿಸಿತ್ತು. ಈಗ ಅದು 17ಕ್ಕೆ ಇಳಿದಿದೆ. ಇದು ಅವರ ‘ಡೀಲಿಂಗ್’ ರಾಜಕಾರಣದ ಪರಿಣಾಮ,” ಎಂದು ದೂರಿದರು.

“ಅಭಿಮಾನೋತ್ಸವದ ಹಿಂದೆ ಹೈಕಮಾಂಡ್‌ಗೆ ಸಂದೇಶ” : ಚಿತ್ರದುರ್ಗದಲ್ಲಿ ನಡೆಯಲಿರುವ ಯಡಿಯೂರಪ್ಪ ಅಭಿಮಾನೋತ್ಸವ ಕಾರ್ಯಕ್ರಮವನ್ನೂ ಯತ್ನಾಳ್ ಟೀಕಿಸಿದರು. “ಯಾವ ಪುರುಷಾರ್ಥಕ್ಕೆ ಈ ಉತ್ಸವ? ಭ್ರಷ್ಟಾಚಾರ ಮಾಡಿ ಜೈಲಿಗೆ ಹೋಗಿಬಂದವರಿಗಾ ಈ ಸಂಭ್ರಮ?” ಎಂದು ಪ್ರಶ್ನಿಸಿದರು.

“ವಿಜಯೇಂದ್ರ ಅವರ ರಾಜ್ಯಾಧ್ಯಕ್ಷ ಅವಧಿ ನವೆಂಬರ್‌ನಲ್ಲಿ ಮುಕ್ತಾಯವಾಗಲಿದೆ. ತಮ್ಮ ಸ್ಥಾನ ಉಳಿಸಿಕೊಳ್ಳಲು, ತಾವು ದೊಡ್ಡ ಲಿಂಗಾಯತ ನಾಯಕರು ಎಂದು ಹೈಕಮಾಂಡ್‌ಗೆ ತೋರಿಸಲು ಈ ಅಭಿಮಾನೋತ್ಸವ ನಾಟಕ ನಡೆಯುತ್ತಿದೆ,” ಎಂದು ಆರೋಪಿಸಿದರು.

“ಕುಟುಂಬ ರಾಜಕಾರಣ ಹೆಚ್ಚಾಗಿದೆ” : ಯಡಿಯೂರಪ್ಪ ಕುಟುಂಬದ ರಾಜಕೀಯ ವಿಸ್ತರಣೆಯ ಬಗ್ಗೆಯೂ ಯತ್ನಾಳ್ ಅಸಮಾಧಾನ ವ್ಯಕ್ತಪಡಿಸಿದರು. “ಈಗ ಕುಟುಂಬದ ಇನ್ನೂ ಮೂವರು ರಾಜಕೀಯಕ್ಕೆ ಬರುತ್ತಿದ್ದಾರೆ. ಬಿ.ವೈ. ರಾಘವೇಂದ್ರ ಅವರ ಪುತ್ರ ಯುವ ಮೋರ್ಚಾ ಅಧ್ಯಕ್ಷರಾಗಿದ್ದಾರೆ. ಮಹಿಳಾ ಘಟಕದಲ್ಲೂ ಕುಟುಂಬದವರೇ ಸ್ಥಾನ ಪಡೆದಿದ್ದಾರೆ. ರಾಜ್ಯಕ್ಕೆ ಇವರ ಕೊಡುಗೆ ಏನು?” ಎಂದು ಪ್ರಶ್ನಿಸಿದರು.

“ಹಿಂದುತ್ವ ನಾಯಕತ್ವ ಬಂದರೆ ಮಾತ್ರ ಸಕ್ರಿಯ” : “ಹಿಂದುತ್ವದ ವಿಚಾರಧಾರೆ ಮತ್ತು ಅಭಿವೃದ್ಧಿ ರಾಜಕಾರಣ ಮಾಡುವ ನಾಯಕತ್ವ ಬಂದರೆ ಮಾತ್ರ ನಾನು ಸಕ್ರಿಯವಾಗಿ ಕೆಲಸ ಮಾಡುತ್ತೇನೆ. ಇಲ್ಲದಿದ್ದರೆ ಈ ಭ್ರಷ್ಟ ತಂದೆ-ಮಕ್ಕಳ ಜೊತೆ ಗುರುತಿಸಿಕೊಳ್ಳುವುದಿಲ್ಲ,” ಎಂದು ಅವರು ಸ್ಪಷ್ಟಪಡಿಸಿದರು.

ಡಿ.ಕೆ. ಶಿವಕುಮಾರ್ ವಿರುದ್ಧವೂ ಟೀಕೆ : ಈ ವೇಳೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧವೂ ಯತ್ನಾಳ್ ವಾಗ್ದಾಳಿ ನಡೆಸಿದರು. “ಡಿ.ಕೆ. ಶಿವಕುಮಾರ್ ಅವರಂತಹ ಅಯೋಗ್ಯ ಮತ್ತು ರಾಕ್ಷಸ ರಾಜಕಾರಣಿ ಇನ್ನೊಬ್ಬರಿಲ್ಲ. ಅವರಿಗಿಂತ ಸಿದ್ದರಾಮಯ್ಯ ಉತ್ತಮ,” ಎಂದು ಹೇಳಿದರು.

ಬಿಜೆಪಿ ಹೈಕಮಾಂಡ್ ವಿರುದ್ಧ ಅಸಮಾಧಾನ : ಕರ್ನಾಟಕದ ಜನರ ಭಾವನೆಗಳನ್ನು ಬಿಜೆಪಿ ಹೈಕಮಾಂಡ್ ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ಆರೋಪಿಸಿದ ಯತ್ನಾಳ್, “ಯಡಿಯೂರಪ್ಪ-ವಿಜಯೇಂದ್ರ ನಾಯಕತ್ವ ಮುಂದುವರಿದರೆ ಕರ್ನಾಟಕದಲ್ಲಿ ಬಿಜೆಪಿ ಮತ್ತೆ ಮಣ್ಣು ಮುಕ್ಕುತ್ತದೆ. ಹೊಸ ನಾಯಕತ್ವಕ್ಕೆ ಅವಕಾಶ ನೀಡಿದರೆ ಮಾತ್ರ ಪಕ್ಷ ಮತ್ತೆ ಅಧಿಕಾರಕ್ಕೆ ಬರುತ್ತದೆ,” ಎಂದು ಎಚ್ಚರಿಸಿದರು.

ಬಿಜೆಪಿಯೊಳಗಿನ ಆಂತರಿಕ ಅಸಮಾಧಾನ ಮತ್ತೆ ಬಹಿರಂಗವಾಗಿರುವ ಈ ಹೇಳಿಕೆಗಳು ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿವೆ.