ಇಷ್ಟು ದಿನ DMK ಸರ್ಕಾರದ ಸೂರ್ಯನ ಬೆಳಕು ತಮಿಳುನಾಡಿನಲ್ಲಿ ಪ್ರಜ್ವಲಿಸುತಿತ್ತು,ಆದರೆ ಈಗ ವಿಜಿಲ್ ಹೊಡೆಯುತ್ತ ತಮಿಳುನಾಡಿನ ಮುಖ್ಯ ಮಂತ್ರಿಯಾಗಲು ಸಜ್ಜಾಗಿದ್ದಾರೆ TVK ಪಕ್ಷದ ನಾಯಕ ವಿಜಯ್. ಹೌದು ತಮಿಳುನಾಡು ರಾಜಕೀಯದಲ್ಲಿ ಇದೀಗ ಒಂದು ಐತಿಹಾಸಿಕ ಬದಲಾವಣೆಯ ಗಾಳಿ ಬೀಸುತ್ತಿದೆ. ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ 108 ಸ್ಥಾನಗಳನ್ನು ಗೆಲ್ಲುವ ಮೂಲಕ ನಟ ವಿಜಯ್ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ ಅಥವಾ TVK ಪಕ್ಷ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಮೇ 7 ರಂದು ಚೆನ್ನೈನ ಜವಾಹರಲಾಲ್ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ವಿಜಯ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಸಜ್ಜಾಗಿದ್ದಾರೆ. ಇನ್ನು ಚುನಾವಣೆಯಲ್ಲಿ ವಿಜಯ್ ಗೆದ್ದ ನಂತರ ತಮ್ಮ ಪಕ್ಷದ ಹಿತೈಷಿಗಳನ್ನು ಭೇಟಿಯಾಗಿ ಎಲ್ಲರೊಂದಿಗೂ ಆತ್ಮೀಯವಾಗಿ ಮಾತನಾಡಿದ್ದಾರೆ. ಆದರೆ ಬಹುಮತಕ್ಕೆ ಅಗತ್ಯವಿರುವ ಸಂಖ್ಯೆಗಿಂತ ಕೇವಲ 10 ಸ್ಥಾನಗಳ ಕೊರತೆ ಇರುವುದರಿಂದ, ವಿಜಯ್ ಅವರು ಸರ್ಕಾರವನ್ನು ಹೇಗೆ ರಚಿಸಲಿದ್ದಾರೆ ಎಂಬುದು ದೇಶಾದ್ಯಂತ ಕುತೂಹಲ ಮೂಡಿಸಿದೆ.
ಸದ್ಯ ವಿಜಯ್ ಅವರ ಮುಂದೆ ಮೂರು ದಾರಿಗಳಿವೆ. ಮೊದಲನೆಯದಾಗಿ, ಕಾಂಗ್ರೆಸ್, ಪಿಎಂಕೆ, ಎಡಪಕ್ಷಗಳು, CPM ಮತ್ತು VCK ಸೇರಿದಂತೆ ಸಣ್ಣ ಪಕ್ಷಗಳ ಬೆಂಬಲದೊಂದಿಗೆ ಮೈತ್ರಿ ಸರ್ಕಾರವನ್ನು ರಚಿಸುವುದು. ಈಗಾಗಲೇ ಈ ನಿಟ್ಟಿನಲ್ಲಿ ಕಾಂಗ್ರೆಸ್ ವರಿಷ್ಠರೊಂದಿಗೆ ವಿಜಯ್ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಎರಡನೆಯದಾಗಿ, ಅತಿದೊಡ್ಡ ಪಕ್ಷವಾಗಿ ಅಲ್ಪಮತದ ಸರ್ಕಾರವನ್ನು ರಚಿಸಿ, ನಂತರ ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತುಪಡಿಸುವುದು. ತೃತೀಯ ಆಯ್ಕೆಯಾಗಿ, ವಿಜಯ್ ಅವರ ಜನಪ್ರಿಯತೆಯನ್ನು ನೋಡಿ ವಿರೋಧ ಪಕ್ಷಗಳ ಕೆಲವು ಶಾಸಕರು ಪಕ್ಷಾಂತರ ಮಾಡುವ ಸಾಧ್ಯತೆಯನ್ನು ರಾಜಕೀಯ ವಿಶ್ಲೇಷಕರು ಗಮನಿಸುತ್ತಿದ್ದಾರೆ.
ವಿಶೇಷವೆಂದರೆ, ವಿಜಯ್ ಅವರ ಈ ಗೆಲುವಿಗೆ ರಾಹುಲ್ ಗಾಂಧಿ ಮತ್ತು ಪ್ರಧಾನಿ ನರೇಂದ್ರ ಮೋದಿ ಇಬ್ಬರೂ ಶುಭಾಶಯ ಕೋರಿದ್ದಾರೆ. ಇದಕ್ಕೆ ಪ್ರತಿಯಾಗಿ ವಿಜಯ್, ರಾಜಕೀಯವನ್ನು ಮೀರಿ ತಮಿಳುನಾಡಿನ ಜನರ ಕಲ್ಯಾಣ ಮತ್ತು ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರದ ಸಹಕಾರವನ್ನು ನಿರೀಕ್ಷಿಸುವುದಾಗಿ ತಿಳಿಸಿದ್ದಾರೆ. ಯುವಜನತೆ ಮತ್ತು ಮಹಿಳೆಯರ ದೊಡ್ಡ ಮಟ್ಟದ ಬೆಂಬಲದೊಂದಿಗೆ ಅಧಿಕಾರದ ಗದ್ದುಗೆಯತ್ತ ಸಾಗಿರುವ ವಿಜಯ್, ರಾಜ್ಯದಲ್ಲಿ ಯಾವ ರೀತಿಯ ಆಡಳಿತ ನಡೆಸಲಿದ್ದಾರೆ ಮತ್ತು ವಿರೋಧ ಪಕ್ಷಗಳನ್ನು ಹೇಗೆ ನಿಭಾಯಿಸಲಿದ್ದಾರೆ ಎಂಬುದು ಸದ್ಯದ ಅತಿ ದೊಡ್ಡ ಪ್ರಶ್ನೆಯಾಗಿದೆ.





















