Home Advertisement
Home ನಮ್ಮ ಜಿಲ್ಲೆ ಬೆಂಗಳೂರು ಸಚಿವ ಜಮೀರ್ ಮನೆಯಲ್ಲಿ ಭಾರಿ ಕಳ್ಳತನ: ಖಾಸಗಿ ಫೈನಾನ್ಸ್‌ನಲ್ಲಿ ಚಿನ್ನ ಅಡವಿಟ್ಟಿದ್ದ ಖದೀಮರು; ಎಷ್ಟು ಮೊತ್ತದ...

ಸಚಿವ ಜಮೀರ್ ಮನೆಯಲ್ಲಿ ಭಾರಿ ಕಳ್ಳತನ: ಖಾಸಗಿ ಫೈನಾನ್ಸ್‌ನಲ್ಲಿ ಚಿನ್ನ ಅಡವಿಟ್ಟಿದ್ದ ಖದೀಮರು; ಎಷ್ಟು ಮೊತ್ತದ ಚಿನ್ನ ಗೊತ್ತಾ?

0
31

ಬೆಂಗಳೂರು: ರಾಜ್ಯ ವಸತಿ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಸಚಿವ ಬಿ.ಝಡ್. ಜಮೀರ್ ಅಹ್ಮದ್ ಖಾನ್, ಪುಲಕೇಶಿನಗರದ ನಿವಾಸದಲ್ಲಿ ಭಾರಿ ಮೊತ್ತದ ಚಿನ್ನಾಭರಣ ಕಳ್ಳತನವಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಾಜಿನಗರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ವಿಶೇಷವೆಂದರೆ, ಸಚಿವರ ತಾಯಿಯ ಹತ್ತಿರದ ಸಂಬಂಧಿಯೇ ಈ ಕೃತ್ಯದ ಮಾಸ್ಟರ್ ಮೈಂಡ್ ಆಗಿರುವುದು ಬೆಳಕಿಗೆ ಬಂದಿದೆ.

ಬಂಧಿತ ಆರೋಪಿಗಳನ್ನು ಸೈಯದ್ ಅಮೀರ್ ಮತ್ತು ಅಮಿರ್ ಅಹ್ಮದ್ ಎಂದು ಗುರುತಿಸಲಾಗಿದೆ. ಇವರಲ್ಲಿ ಸೈಯದ್ ಅಮೀರ್ ಸಚಿವರ ತಾಯಿಯ ರಕ್ತಸಂಬಂಧಿಯಾಗಿದ್ದು, ಪ್ರತಿದಿನ ಮನೆಗೆ ಬಂದು ಹೋಗುತ್ತಿದ್ದ ಆಪ್ತನಾಗಿದ್ದ. ಟ್ರಾವೆಲ್ಸ್ ವ್ಯವಹಾರದಲ್ಲಿ ಭಾರಿ ನಷ್ಟ ಅನುಭವಿಸಿದ್ದ ಅಮೀರ್, ತನ್ನ ಸಾಲ ತೀರಿಸಲು ಮತ್ತು ಹಣದ ಹಪಾಹಪಿಯಿಂದ ತನ್ನದೇ ಸಂಬಂಧಿಯ ಮನೆಯಲ್ಲಿ ಕಳ್ಳತನ ಮಾಡಲು ಸಂಚು ರೂಪಿಸಿದ್ದನು.

ನಂತರ ಆರೋಪಿ ಸೈಯದ್ ಅಮೀರ್ ಸಚಿವರ ಮನೆಯವರ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡಿದ್ದ. 2023 ರಿಂದಲೇ ಆತ ಸಣ್ಣ ಸಣ್ಣದಾಗಿ ಚಿನ್ನಾಭರಣಗಳನ್ನು ಕದಿಯಲು ಆರಂಭಿಸಿದ್ದ ಎನ್ನಲಾಗಿದೆ. ಒಟ್ಟು 1.2 ಕೆಜಿ (ಸುಮಾರು 1 ಕೋಟಿ 13 ಲಕ್ಷ ರೂ. ಮೌಲ್ಯದ) ಚಿನ್ನಾಭರಣಗಳನ್ನು ಈ ಖದೀಮರು ಎಗರಿಸಿದ್ದರು. ಕದ್ದ ಚಿನ್ನವನ್ನು ಖಾಸಗಿ ಫೈನಾನ್ಸ್ ಕಂಪನಿಗಳಲ್ಲಿ ಅಡವಿಟ್ಟು, ಆ ಹಣವನ್ನು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಹೂಡಿಕೆ ಮಾಡಿ ಲಾಭ ಗಳಿಸುವ ದುರಾಲೋಚನೆಗೆ ಇಂತಹ ಕೃತ್ಯಕ್ಕೆ ಕೈಹಾಕಿದ್ದಾರೆ.

ಹಾಗೇ ಈ ಕಳ್ಳತನದ ವಿಚಾರ ಮನೆಯವರಿಗೆ ತಿಳಿಯುತ್ತಿದ್ದಂತೆಯೇ ಸೈಯದ್ ಅಮೀರ್ ಮನೆಗೆ ಬರುವುದನ್ನು ನಿಲ್ಲಿಸಿದ್ದನು. ಅಷ್ಟೇ ಅಲ್ಲದೇ ಫೋನ್ ಮಾಡಿದರೂ ಸ್ವೀಕರಿಸುತ್ತಿರಲಿಲ್ಲ. ಈ ಹಠಾತ್ ನಡವಳಿಕೆಯ ಬದಲಾವಣೆಯಿಂದ ಅನುಮಾನಗೊಂಡ ಸಚಿವರ ತಾಯಿ ಸೋಗ್ರಾ ಖಾನಂ ಪೊಲೀಸರಿಗೆ ದೂರು ನೀಡಿದ್ದರು. ತಾಂತ್ರಿಕ ಕಾರ್ಯಾಚರಣೆ ನಡೆಸಿದ ಶಿವಾಜಿನಗರ ಪೊಲೀಸರು ಆರೋಪಿಗಳನ್ನು ಬಂಧಿಸಿ, ಖದೀಮರ ಬಳಿಯಿದ್ದ 759 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಸದ್ಯ ಆರೋಪಿಗಳು ಪೊಲೀಸ್ ವಶದಲ್ಲಿದ್ದು, ಈ ಕುರಿತು ಹೆಚ್ಚಿನ ವಿಚಾರಣೆ ನಡೆಯುತ್ತಿದೆ.