Home Advertisement
Home ಅಪರಾಧ ಚಿನ್ನಾಭರಣದೊಂದಿಗೆ ಪ್ರಿಯಕರನ ಜೊತೆ ಪತ್ನಿ ಎಸ್ಕೇಪ್: ಇಬ್ಬರು ಮಕ್ಕಳನ್ನು ಕೊಂದು ಅರ್ಚಕ ಆತ್ಮಹತ್ಯೆ!

ಚಿನ್ನಾಭರಣದೊಂದಿಗೆ ಪ್ರಿಯಕರನ ಜೊತೆ ಪತ್ನಿ ಎಸ್ಕೇಪ್: ಇಬ್ಬರು ಮಕ್ಕಳನ್ನು ಕೊಂದು ಅರ್ಚಕ ಆತ್ಮಹತ್ಯೆ!

0
40

ತುಮಕೂರು: ಅಕ್ರಮ ಸಂಬಂಧದ ಮೋಹಕ್ಕೆ ಬಿದ್ದ ಪತ್ನಿಯೊಬ್ಬಳು ಇಡೀ ಸಂಸಾರವನ್ನೇ ಸರ್ವನಾಶ ಮಾಡಿದ್ದಾಳೆ. ಪ್ರಿಯಕರನ ಜೊತೆ ಪತ್ನಿ ಚಿನ್ನಾಭರಣದೊಂದಿಗೆ ಪರಾರಿಯಾದ ಅವಮಾನ ಹಾಗೂ ನೋವು ತಾಳಲಾರದೆ, ತಂದೆಯೊಬ್ಬ ತನ್ನ ಇಬ್ಬರು ಮುಗ್ಧ ಮಕ್ಕಳನ್ನು ಉಸಿರುಗಟ್ಟಿಸಿ ಕೊಂದು, ತಾನೂ ನೇಣಿಗೆ ಶರಣಾಗಿರುವ ಹೃದಯವಿದ್ರಾವಕ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಆಲ್ಕೆರೆ ಗ್ರಾಮದಲ್ಲಿ ನಡೆದಿದೆ.

ಮಕ್ಕಳ ಕೊಂದ ಪಾಪಿ ತಂದೆ!: ಆಲ್ಕೆರೆ ಗ್ರಾಮದ ಮಲ್ಲೇಶ್ವರಸ್ವಾಮಿ ದೇಗುಲದ ಅರ್ಚಕ ಹಾಗೂ ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದ ಶಿವಣ್ಣ (40) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಸಾವಿಗೂ ಮುನ್ನ ಆತ ತನ್ನ ಮಕ್ಕಳಾದ ಜೀವನ್ (10) ಹಾಗೂ ಪ್ರಾಣೇಶ್ (5) ಎಂಬ ಇಬ್ಬರು ಪುಟ್ಟ ಕಂದಮ್ಮಗಳನ್ನು ಉಸಿರುಗಟ್ಟಿಸಿ ಭೀಕರವಾಗಿ ಕೊಲೆ ಮಾಡಿದ್ದಾನೆ. ಶುಕ್ರವಾರ ರಾತ್ರಿ ಈ ಘಟನೆ ನಡೆದಿದ್ದು, ಶನಿವಾರ ಬೆಳಗ್ಗೆ ಅಕ್ಕಪಕ್ಕದವರು ನೋಡಿದಾಗ ಈ ಕರಾಳ ಸತ್ಯ ಬೆಳಕಿಗೆ ಬಂದಿದೆ.

ಸಾವಿಗೆ ಕಾರಣವಾದ ಪತ್ನಿಯ ಅಕ್ರಮ ಸಂಬಂಧ: ಶಿವಣ್ಣನ ಪತ್ನಿಗೆ ಪರಪುರುಷನೊಬ್ಬನ ಜೊತೆ ಅಕ್ರಮ ಸಂಬಂಧವಿತ್ತು. ಇದೇ ವಿಚಾರವಾಗಿ ದಂಪತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಕಳೆದ ವಾರವಷ್ಟೇ ಆಕೆ ತನ್ನ ಗಂಡ ಹಾಗೂ ಇಬ್ಬರು ಮಕ್ಕಳನ್ನು ಅನಾಥವಾಗಿ ಬಿಟ್ಟು ಪ್ರಿಯಕರನ ಜೊತೆ ಪರಾರಿಯಾಗಿದ್ದಳು. ಈ ಬಗ್ಗೆ ಶಿವಣ್ಣ ಕುಣಿಗಲ್ ಪೊಲೀಸ್ ಠಾಣೆಗೆ ದೂರು ಕೂಡ ನೀಡಿದ್ದರು.

ಪೊಲೀಸರು ಮಧ್ಯಪ್ರವೇಶಿಸಿ, ಬುದ್ಧಿವಾದ ಹೇಳಿ ಆಕೆಯನ್ನು ವಾಪಸ್ ಗಂಡನ ಮನೆಗೆ ಕಳುಹಿಸಿದ್ದರು. ಆದರೆ, ಬುದ್ಧಿ ಕಲಿಯದ ಆಕೆ, ಮರುದಿನವೇ ಶಿವಣ್ಣ ಕೆಲಸಕ್ಕೆ ಹೋದ ಸಮಯ ಸಾಧಿಸಿ ಮನೆಯಲ್ಲಿದ್ದ ಹಣ ಹಾಗೂ ಚಿನ್ನಾಭರಣಗಳನ್ನು ದೋಚಿಕೊಂಡು ಮತ್ತೆ ಪ್ರಿಯಕರನ ಜೊತೆ ಎಸ್ಕೇಪ್ ಆಗಿದ್ದಾಳೆ!

ಪತ್ನಿಯ ಈ ದ್ರೋಹ ಮತ್ತು ಅವಮಾನದಿಂದ ತೀವ್ರವಾಗಿ ನೊಂದ ಶಿವಣ್ಣ, ಜೀವನದಲ್ಲಿ ಜಿಗುಪ್ಸೆಗೊಂಡು ತಾನು ಸಾಯುವುದಲ್ಲದೆ, ತನ್ನಿಬ್ಬರು ಮಕ್ಕಳನ್ನೂ ಬಲಿತೆಗೆದುಕೊಂಡಿದ್ದಾನೆ. ಘಟನಾ ಸ್ಥಳಕ್ಕೆ ಕುಣಿಗಲ್ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಪರಾರಿಯಾಗಿರುವ ಪತ್ನಿ ಹಾಗೂ ಆಕೆಯ ಪ್ರಿಯಕರನಿಗಾಗಿ ಬಲೆ ಬೀಸಿದ್ದಾರೆ. ಮುಗ್ಧ ಕಂದಮ್ಮಗಳ ಸಾವಿನಿಂದ ಆಲ್ಕೆರೆ ಗ್ರಾಮದಲ್ಲಿ ಶೋಕದ ಮಡುವು ಆವರಿಸಿದೆ.