ಬೆಂಗಳೂರು: ರಾಜ್ಯದಲ್ಲಿ ಕೃಷಿ ಕೋಟಾದಡಿ ವಿವಿಧ ಕೋರ್ಸ್‌ಗಳಿಗೆ ಸೇರ್ಪಡೆಯಾಗಲು ಯುಜಿಸಿಇಟಿ (UGCET 2026) ಪ್ರಾಯೋಗಿಕ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ ವಿದ್ಯಾರ್ಥಿಗಳಿಗೆ ಕೃಷಿ ವಿಶ್ವವಿದ್ಯಾಲಯವು ಮಹತ್ವದ ಮಾಹಿತಿಯೊಂದನ್ನು ನೀಡಿದೆ. ಮುಂಬರುವ ‘ನೀಟ್’ (NEET) ಪರೀಕ್ಷೆಯ ಹಿನ್ನೆಲೆಯಲ್ಲಿ, ಈ ಮೊದಲು ನಿಗದಿಯಾಗಿದ್ದ ಕೃಷಿ ಪ್ರಾಯೋಗಿಕ ಪರೀಕ್ಷೆಯನ್ನು ಮುಂದೂಡಲಾಗಿದ್ದು, ಹೊಸ ದಿನಾಂಕವನ್ನು ಪ್ರಕಟಿಸಲಾಗಿದೆ.
ಹೊಸ ದಿನಾಂಕ ಯಾವಾಗ? ಬದಲಾವಣೆಗೆ ಕಾರಣವೇನು?: ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಪರಿಷ್ಕೃತ ಪ್ರಕಟಣೆಯ ಪ್ರಕಾರ, ಏಪ್ರಿಲ್ 29, 2026ರಂದು ನಡೆಯಬೇಕಿದ್ದ ಪ್ರಾಯೋಗಿಕ ಪರೀಕ್ಷೆಯನ್ನು ಈಗ ಮೇ 10, 2026ಕ್ಕೆ ಮುಂದೂಡಲಾಗಿದೆ.
ಮೇ 3ರಂದು ದೇಶಾದ್ಯಂತ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಪ್ರವೇಶಾತಿಗಾಗಿ ‘ನೀಟ್’ ಪರೀಕ್ಷೆ ನಡೆಯಲಿದೆ. ವಿದ್ಯಾರ್ಥಿಗಳು ಏಕಕಾಲದಲ್ಲಿ ಎರಡು ಪರೀಕ್ಷೆಗಳ ಒತ್ತಡಕ್ಕೆ ಸಿಲುಕಬಾರದು ಎಂಬ ದೃಷ್ಟಿಯಿಂದ, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಮನವಿಯ ಮೇರೆಗೆ ಕೃಷಿ ವಿವಿ ಈ ವಿದ್ಯಾರ್ಥಿಸ್ನೇಹಿ ನಿರ್ಧಾರವನ್ನು ಕೈಗೊಂಡಿದೆ.
ಯಾವ್ಯಾವ ಕೋರ್ಸ್ ಹಾಗೂ ವಿವಿಗಳಿಗೆ ಇದು ಅನ್ವಯ?: ಈ ಪರೀಕ್ಷಾ ದಿನಾಂಕದ ಬದಲಾವಣೆಯು ಕೇವಲ ಬೆಂಗಳೂರು ಕೃಷಿ ವಿವಿಗೆ ಸೀಮಿತವಾಗಿಲ್ಲ. ಬದಲಾಗಿ ರಾಯಚೂರು, ಧಾರವಾಡ, ಬಾಗಲಕೋಟೆ, ಶಿವಮೊಗ್ಗ, ಬೀದರ್ ಹಾಗೂ ಮಂಡ್ಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಕೃಷಿ, ತೋಟಗಾರಿಕೆ ಮತ್ತು ಪಶುವೈದ್ಯಕೀಯ ವಿಶ್ವವಿದ್ಯಾಲಯಗಳ ಅಭ್ಯರ್ಥಿಗಳಿಗೂ ಅನ್ವಯವಾಗಲಿದೆ.
ಮುಖ್ಯವಾಗಿ ಬಿ.ಎಸ್ಸಿ (ಕೃಷಿ), ಬಿ.ಎಸ್ಸಿ (ರೇಷ್ಮೆ ಕೃಷಿ – ಚಿಂತಾಮಣಿ), ಬಿ.ಟೆಕ್ (ಕೃಷಿ ಇಂಜಿನಿಯರಿಂಗ್ – ಜಿಕೆವಿಕೆ), ತೋಟಗಾರಿಕೆ (Horticulture) ಹಾಗೂ ಬೀದರ್ ವಿವಿಯ ವ್ಯಾಪ್ತಿಯಲ್ಲಿ ಬರುವ ಪಶುವೈದ್ಯಕೀಯ ಮತ್ತು ಮೀನುಗಾರಿಕೆ ಕೋರ್ಸ್‌ಗಳಿಗೆ ‘ಕೃಷಿಕರ ಕೋಟಾ’ದಡಿ ಪ್ರವೇಶ ಬಯಸುವ ಅಭ್ಯರ್ಥಿಗಳು ಮೇ 10ರಂದು ಪರೀಕ್ಷೆ ಬರೆಯಬೇಕಿದೆ.
ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿ ಹಾಗೂ ಮುಂದಿನ ಅಪ್ಡೇಟ್‌ಗಳಿಗಾಗಿ ವಿವಿಯ ಅಧಿಕೃತ ವೆಬ್‌ಸೈಟ್ www.uasbangalore.edu.in ಗೆ ಭೇಟಿ ನೀಡುವಂತೆ ಸೂಚಿಸಲಾಗಿದೆ.























