ಕ್ರಿಕೆಟ್ ಲೋಕದ ಆಕ್ರಮಣಕಾರಿ ಆಟಗಾರ ಹಾಗೂ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್ ಅವರ ಇತ್ತೀಚಿನ ನೋಟ ಈಗ ಕ್ರೀಡಾ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಇತ್ತೀಚೆಗಷ್ಟೇ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಬಿಡುಗಡೆ ಮಾಡಿದ ಹೊಸ ಕಿಟ್‌ನ ಪ್ರಚಾರದ ವಿಡಿಯೋದಲ್ಲಿ ಸ್ಟೋಕ್ಸ್ ಅವರು ಕಾಣಿಸಿಕೊಂಡ ರೀತಿ ಕಂಡು ಅವರ ಅಭಿಮಾನಿಗಳು ಒಂದು ಕ್ಷಣ ಅಚ್ಚರಿಗೆ ಒಳಗಾಗಿದ್ದಾರೆ. ವಿಡಿಯೋದಲ್ಲಿ 34 ವರ್ಷದ ಈ ಆಲ್‌ರೌಂಡರ್ ಅತ್ಯಂತ ತೆಳ್ಳಗಾಗಿರುವುದು ಮಾತ್ರವಲ್ಲದೆ, ಅವರ ಮುಖದ ಚಹರೆ ಸಂಪೂರ್ಣವಾಗಿ ಬದಲಾದಂತೆ ಭಾಸವಾಗುತ್ತಿದೆ. ಟೊಯೋಟಾ ಯುಕೆ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಆದಿಲ್ ರಶೀದ್ ಮತ್ತು ಮಾರ್ಕ್ ವುಡ್ ಅವರಂತಹ ಆಟಗಾರರಿದ್ದರೂ, ಎಲ್ಲರ ಕಣ್ಣು ನೆಟ್ಟಿದ್ದು ಮಾತ್ರ ಬೆನ್ ಸ್ಟೋಕ್ಸ್ ಅವರ ಮೇಲೆ.
ಈ ಗಮನಾರ್ಹ ಬದಲಾವಣೆಯ ಹಿಂದೆ ಒಂದು ಭೀಕರ ಅಪಘಾತದ ಕಥೆಯಿದೆ. ಕಳೆದ ಫೆಬ್ರವರಿ 2026ರಲ್ಲಿ ಡರ್ಹಾಮ್ ಕೌಂಟಿ ತಂಡದ ಅಕಾಡೆಮಿ ಆಟಗಾರರಿಗೆ ತರಬೇತಿ ನೀಡುತ್ತಿದ್ದ ಸಂದರ್ಭದಲ್ಲಿ, ಸ್ಟೋಕ್ಸ್ ಅವರಿಗೆ ಕ್ರಿಕೆಟ್ ಬಾಲ್ ನೇರವಾಗಿ ಮುಖಕ್ಕೆ ಬಡಿದಿತ್ತು. ಈ ವೇಗದ ಏಟಿನಿಂದಾಗಿ ಅವರ ಬಲ ಕೆನ್ನೆಯ ಮೂಳೆ ಪುಡಿಯಾಗಿದ್ದು, ತುರ್ತಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ಈ ಘಟನೆಯ ಬಗ್ಗೆ ಇಸಿಬಿಗೆ ನೀಡಿದ ಸಂದರ್ಶನದಲ್ಲಿ ಸ್ವತಃ ಸ್ಟೋಕ್ಸ್ ಮಾತನಾಡುತ್ತಾ, “ಅಂದು ಬಾಲ್ ಬಡಿದಾಗ ನಾನು ಸ್ವಲ್ಪ ತಲೆ ತಿರುಗಿಸದಿದ್ದರೆ ಇವತ್ತು ನಿಮ್ಮ ಮುಂದೆ ಇರುತ್ತಿರಲಿಲ್ಲ. ಆ ಇಂಚಿನ ವ್ಯತ್ಯಾಸವೇ ಇಂದು ನನ್ನ ಜೀವ ಉಳಿಸಿದೆ” ಎಂದು ಭಾವನಾತ್ಮಕವಾಗಿ ಹಂಚಿಕೊಂಡಿದ್ದಾರೆ.
ಇದನ್ನು ಓದಿ: Virat Kohli ಕಮಾಲ್: ಜಗತ್ತಿನ ಯಾವೊಬ್ಬ ಬ್ಯಾಟ್ಸ್‌ಮನ್‌ಗೂ ಸಾಧ್ಯವಾಗದ ವಿಶ್ವ ದಾಖಲೆ ವಿರಾಟ್ ಹೆಸರಿಗೆ
ಈ ಭೀಕರ ಗಾಯ ಮತ್ತು ಅದಕ್ಕೆ ಸಂಬಂಧಿಸಿದ ಪುನರ್ನಿರ್ಮಾಣ ಶಸ್ತ್ರಚಿಕಿತ್ಸೆಯಿಂದಾಗಿ ಸ್ಟೋಕ್ಸ್ ಕೌಂಟಿ ಚಾಂಪಿಯನ್‌ಶಿಪ್‌ನ ಆರಂಭಿಕ ಪಂದ್ಯಗಳಿಂದ ದೂರ ಉಳಿಯಬೇಕಾಯಿತು. ಆದರೆ, ಚೇತರಿಕೆಯ ಹಾದಿಯಲ್ಲಿರುವ ಅವರು ಮೇ ತಿಂಗಳ ಆರಂಭದಲ್ಲಿ ಮೈದಾನಕ್ಕೆ ಮರಳುವ ವಿಶ್ವಾಸದಲ್ಲಿದ್ದಾರೆ. ಆಶಸ್ ಸರಣಿಯಲ್ಲಿ ಅನುಭವಿಸಿದ 4-1ರ ಸೋಲಿನ ನಂತರ ಇಂಗ್ಲೆಂಡ್ ತಂಡಕ್ಕೆ ಈ ಬೇಸಿಗೆಯ ಸರಣಿ ಅತ್ಯಂತ ಮಹತ್ವದ್ದಾಗಿದೆ. ಜೂನ್ 4 ರಂದು ಲಾರ್ಡ್ಸ್ ಮೈದಾನದಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆಯಲಿರುವ ಟೆಸ್ಟ್ ಸರಣಿಯಲ್ಲಿ ಬೆನ್ ಸ್ಟೋಕ್ಸ್ ಮತ್ತೆ ತಂಡವನ್ನು ಮುನ್ನಡೆಸಲಿದ್ದಾರೆ. ಗಾಯದ ನೋವು ಮತ್ತು ಬದಲಾದ ರೂಪದ ನಡುವೆಯೂ, ಸ್ಟೋಕ್ಸ್ ಅವರ ಈ ಮರಳಿ ಬರುವ ಹಠ ಕ್ರಿಕೆಟ್ ಪ್ರೇಮಿಗಳಲ್ಲಿ ಹೊಸ ಭರವಸೆಯನ್ನು ಮೂಡಿಸಿದೆ.























