Home Advertisement
Home ಕ್ರೀಡೆ ಭಾರತದ IPLನಲ್ಲಿ ಸಿಕ್ಕ ಹೊಸ ‘ರನ್ ಮಷಿನ್’; ದಾಖಲೆಗಳ ಸರದಾರನಾದ ವೈಭವ್ ಸೂರ್ಯವಂಶಿ! ಯಾವೆಲ್ಲ ದಾಖಲೆಗಳು...

ಭಾರತದ IPLನಲ್ಲಿ ಸಿಕ್ಕ ಹೊಸ ‘ರನ್ ಮಷಿನ್’; ದಾಖಲೆಗಳ ಸರದಾರನಾದ ವೈಭವ್ ಸೂರ್ಯವಂಶಿ! ಯಾವೆಲ್ಲ ದಾಖಲೆಗಳು ಉಡೀಸ್?

0
95

ಕ್ರಿಕೆಟ್ ಜಗತ್ತಿನಲ್ಲಿ ದಾಖಲೆಗಳು ನಿರ್ಮಾಣವಾಗುವುದೇ ಮುರಿಯುವುದಕ್ಕೆ ಎಂಬ ಮಾತಿದೆ. ಆದರೆ, ರಾಜಸ್ಥಾನ್ ರಾಯಲ್ಸ್ ತಂಡದ ಹದಿನೈದರ ಹರೆಯದ ಪೋರ ವೈಭವ್ ಸೂರ್ಯವಂಶಿ ಮಾಡಿರುವ ಸಾಧನೆ ಮಾತ್ರ ದಶಕಗಳ ಕಾಲ ಯಾರೂ ಮುಟ್ಟಲಾಗದ ಶಿಖರದಂತೆ ಕಾಣುತ್ತಿದೆ. 2026ರ ಐಪಿಎಲ್ ಆವೃತ್ತಿಯ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ 32ನೇ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಕೇವಲ 500 ರನ್‌ಗಳ ಗಡಿ ದಾಟಲಿಲ್ಲ, ಬದಲಿಗೆ ಕ್ರಿಕೆಟ್ ಇತಿಹಾಸದ ಪುಟಗಳಲ್ಲಿ ತಮ್ಮ ಹೆಸರನ್ನು ಅಚ್ಚಳಿಯದಂತೆ ಬರೆದಿದ್ದಾರೆ.

ದಾಖಲೆಗಳ ಸರದಾರನ ಪಟ್ಟ:
ವೈಭವ್ ಸೂರ್ಯವಂಶಿ ಕೇವಲ 15 ವರ್ಷ 26 ದಿನಗಳ ಪ್ರಾಯದಲ್ಲೇ ಐಪಿಎಲ್‌ನಲ್ಲಿ 500 ರನ್ ಪೂರೈಸಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಹಿಂದೆ ಭಾರತದ ಪೃಥ್ವಿ ಶಾ 19 ವರ್ಷ 164 ದಿನಗಳಲ್ಲಿ ಈ ಸಾಧನೆ ಮಾಡಿದ್ದರು. ಆದರೆ ವೈಭವ್, ಶಾ ಅವರ ದಾಖಲೆಯನ್ನು ಬರೋಬ್ಬರಿ ನಾಲ್ಕು ವರ್ಷಗಳ ಅಂತರದಿಂದ ಹಿಂದಿಕ್ಕುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಲಕ್ನೋ ವಿರುದ್ಧದ ಪಂದ್ಯದಲ್ಲಿ ಕೇವಲ 8 ರನ್ ಗಳಿಸಿ ಔಟಾದರೂ, ಈ ಮೈಲಿಗಲ್ಲು ತಲುಪಲು ಅವರಿಗೆ ಅದು ಸಾಕಾಗಿತ್ತು.

ವೇಗದಲ್ಲಿ ಮ್ಯಾಕ್ಸ್‌ವೆಲ್‌ಗೇ ಶಾಕ್:
ವೈಭವ್ ಅವರ ಈ ಸಾಧನೆ ಕೇವಲ ವಯಸ್ಸಿಗೆ ಮಾತ್ರ ಸೀಮಿತವಾಗಿಲ್ಲ. ಅತಿ ವೇಗವಾಗಿ 500 ರನ್ ಗಳಿಸಿದ ಬ್ಯಾಟರ್ ಎಂಬ ಗೌರವವೂ ಈಗ ಇವರ ಪಾಲಾಗಿದೆ. ಕೇವಲ 227 ಎಸೆತಗಳಲ್ಲಿ ಈ ಸಾಧನೆ ಮಾಡಿರುವ ಸೂರ್ಯವಂಶಿ, ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟರ್ ಗ್ಲೆನ್ ಮ್ಯಾಕ್ಸ್‌ವೆಲ್ ಅವರ ದಾಖಲೆಯನ್ನು ಧೂಳೀಪಟ ಮಾಡಿದ್ದಾರೆ. ಮ್ಯಾಕ್ಸ್‌ವೆಲ್ ಈ ಮೊದಲು 260 ಎಸೆತಗಳಲ್ಲಿ 500 ರನ್ ಗಳಿಸಿದ್ದರು. ಆದರೆ ಸೂರ್ಯವಂಶಿ ಅವರಿಗಿಂತ 33 ಎಸೆತಗಳನ್ನು ಮೊದಲೇ ಈ ಮೈಲಿಗಲ್ಲು ತಲುಪಿ ತಮ್ಮ ಬ್ಯಾಟಿಂಗ್ ಪರಾಕ್ರಮವನ್ನು ಜಗತ್ತಿಗೆ ಸಾರಿದ್ದಾರೆ.

ಟಿ20 ಕ್ರಿಕೆಟ್‌ನ ‘ವಿಸ್ಮಯ ಬಾಲಕ’:
ಕಳೆದ ವರ್ಷ ಐಪಿಎಲ್ ಅಂಗಳಕ್ಕೆ ಪದಾರ್ಪಣೆ ಮಾಡಿದ ವೈಭವ್, ಇದುವರೆಗೆ ಆಡಿರುವ 14 ಪಂದ್ಯಗಳಿಂದ 36.14ರ ಸರಾಸರಿಯಲ್ಲಿ ಒಟ್ಟು 506 ರನ್ ಕಲೆಹಾಕಿದ್ದಾರೆ. ಇದರಲ್ಲಿ ಅವರ ಸ್ಟ್ರೈಕ್ ರೇಟ್ 213ಕ್ಕಿಂತ ಹೆಚ್ಚಿರುವುದು ನಿಜಕ್ಕೂ ಬೆರಗುಗೊಳಿಸುವ ವಿಚಾರ. ಇದೇ ಋತುವಿನಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಕೇವಲ 35 ಎಸೆತಗಳಲ್ಲಿ ಶತಕ ಸಿಡಿಸುವ ಮೂಲಕ ಐಪಿಎಲ್‌ನಲ್ಲಿ ವೇಗದ ಶತಕ ಸಿಡಿಸಿದ ಭಾರತೀಯ ಎಂಬ ಹೆಗ್ಗಳಿಕೆಗೂ ಇವರು ಪಾತ್ರರಾಗಿದ್ದರು. ಅಷ್ಟೇ ಅಲ್ಲದೆ, ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಕಿರಿಯ ಶತಕಧಾರಿ ಎಂಬ ದಾಖಲೆಯೂ ಇವರ ಹೆಸರಿನಲ್ಲಿದೆ.

ಫ್ರೇಸರ್ ಮೆಕ್ ಗುರ್ಕ್ ಸಾಲಿನಲ್ಲಿ ವೈಭವ್:
ಪ್ರಸ್ತುತ ಸೀಸನ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಅತಿ ಹೆಚ್ಚು ರನ್ ಗಳಿಸಿರುವ ವೈಭವ್, ಈಗಾಗಲೇ ಮೂರು ಅರ್ಧಶತಕ ಹಾಗೂ ಒಂದು ಶತಕವನ್ನು ಸಿಡಿಸಿದ್ದಾರೆ. ವಿಶೇಷವೆಂದರೆ, 15 ಅಥವಾ ಅದಕ್ಕಿಂತ ಕಡಿಮೆ ಎಸೆತಗಳಲ್ಲಿ ಎರಡು ಬಾರಿ ಐಪಿಎಲ್ ಅರ್ಧಶತಕ ಸಿಡಿಸಿದ ಎರಡನೇ ಆಟಗಾರ ಎಂಬ ದಾಖಲೆಯನ್ನು ಅವರು ಆಸ್ಟ್ರೇಲಿಯಾದ ಜೇಕ್ ಫ್ರೇಸರ್-ಮೆಕ್‌ಗುರ್ಕ್ ಅವರೊಂದಿಗೆ ಹಂಚಿಕೊಂಡಿದ್ದಾರೆ. ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಅಟ್ಟುವ ಇವರ ಕಲೆ ನೋಡುತ್ತಿದ್ದರೆ, ಭಾರತೀಯ ಕ್ರಿಕೆಟ್‌ನ ಭವಿಷ್ಯದ ಸೂಪರ್ ಸ್ಟಾರ್ ಸಿಕ್ಕಾಯ್ತು ಎಂಬ ಭರವಸೆ ಅಭಿಮಾನಿಗಳಲ್ಲಿ ಮೂಡಿದೆ.