ನೇಪಾಳದಲ್ಲಿ ಸಂಬಳ ವ್ಯವಸ್ಥೆಗೆ ದೊಡ್ಡ ಬದಲಾವಣೆ: ಈಗ 15 ದಿನಕ್ಕೊಮ್ಮೆ ವೇತನ!
ಕಠ್ಮಂಡು: ದಕ್ಷಿಣ ಏಷ್ಯಾದಲ್ಲಿ ಮೊದಲ ಬಾರಿಗೆ, ನೇಪಾಳ ಸರ್ಕಾರ ತನ್ನ ಸರ್ಕಾರಿ ನೌಕರರಿಗೆ ಸಂಬಳ ನೀಡುವ ವಿಧಾನದಲ್ಲಿ ಮಹತ್ವದ ಪರಿವರ್ತನೆ ಮಾಡಿದೆ. ಇನ್ನು ಮುಂದೆ ಸರ್ಕಾರಿ ನೌಕರರಿಗೆ ತಿಂಗಳಿಗೆ ಒಂದೇ ಬಾರಿ ಅಲ್ಲ, ಪ್ರತಿ 15 ದಿನಕ್ಕೊಮ್ಮೆ (ಫೋರ್ಟ್‌ನೈಟ್ಲಿ) ಸಂಬಳ ನೀಡಲು ನಿರ್ಧರಿಸಲಾಗಿದೆ.
ಹೇಗೆ ಕೆಲಸ ಮಾಡುತ್ತದೆ ಈ ಹೊಸ ವ್ಯವಸ್ಥೆ? : ಈ ಹೊಸ ನಿಯಮದ ಪ್ರಕಾರ ತಿಂಗಳ ಪೂರ್ಣ ಸಂಬಳವನ್ನು ಎರಡು ಭಾಗಗಳಾಗಿ ವಿಂಗಡಿಸಲಾಗುತ್ತದೆ. ಪ್ರತಿ 15 ದಿನಗಳಿಗೊಮ್ಮೆ ನೌಕರರ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ. ಮೊದಲ ಹಂತದಲ್ಲಿ ಇದು ಸಿವಿಲ್ ಸರ್ವೆಂಟ್ಸ್‌ಗಳಿಗೆ ಅನ್ವಯವಾಗಲಿದೆ. ಈ ನಿರ್ಧಾರವನ್ನು ಏಪ್ರಿಲ್ 17, 2026ರಂದು ನೇಪಾಳದ Ministry of Finance Nepal ಅಧಿಕೃತಗೊಳಿಸಿದೆ.
ಸರ್ಕಾರ ಈಗಾಗಲೇ Financial Comptroller General Officeಗೆ ಈ ವ್ಯವಸ್ಥೆಯನ್ನು ಜಾರಿಗೆ ತರಲು ಸೂಚನೆ ನೀಡಿದೆ. ಪ್ರಾರಂಭದಲ್ಲಿ ನಿಜಾಮ್ತಿ ನೌಕರರಿಗೆ ಮಾತ್ರ ಅನ್ವಯವಾಗಲಿದ್ದು, ಮುಂದಿನ ಹಂತದಲ್ಲಿ ಸೈನ್ಯ, ಪೊಲೀಸ್ ಮತ್ತು ಇತರ ಸರ್ಕಾರಿ ಇಲಾಖೆಗಳಿಗೆ ವಿಸ್ತರಿಸುವ ಯೋಜನೆ ಇದೆ.
ಈ ಬದಲಾವಣೆಯ ಹಿಂದಿನ ಉದ್ದೇಶ : ಈ ಹೊಸ ವೇತನ ವ್ಯವಸ್ಥೆ ಜಾರಿಗೆ ತರಲು ಸರ್ಕಾರ ಹಲವು ಪ್ರಮುಖ ಕಾರಣಗಳನ್ನು ನೀಡಿದೆ. ಆರ್ಥಿಕ ಚಲಾವಣೆ ಹೆಚ್ಚಿಸುವುದಲ್ಲದೆ ಜನರ ಕೈಗೆ ಹಣ ಬೇಗ ತಲುಪುವುದರಿಂದ ಮಾರುಕಟ್ಟೆಯಲ್ಲಿ ಖರೀದಿ ಚಟುವಟಿಕೆ ಹೆಚ್ಚಾಗುತ್ತದೆ. ಹಣಕಾಸು ನಿರ್ವಹಣೆ ಸುಲಭ ಮತ್ತು 15 ದಿನಕ್ಕೊಮ್ಮೆ ಹಣ ಸಿಗುವುದರಿಂದ ಬಿಲ್‌ಗಳು, ದಿನನಿತ್ಯ ಖರ್ಚುಗಳನ್ನು ಸುಲಭವಾಗಿ ನಿರ್ವಹಿಸಬಹುದು. ನೌಕರರ ಮನೋಬಲದ ಮೇಲೆ ಆರ್ಥಿಕ ಒತ್ತಡ ಕಡಿಮೆಯಾಗುವುದರಿಂದ ಕೆಲಸದ ಉತ್ಸಾಹ ಹೆಚ್ಚುತ್ತದೆ.
ಪ್ರಾದೇಶಿಕ ಮಟ್ಟದಲ್ಲಿ ಮೊದಲ ಪ್ರಯತ್ನ : ಈ ರೀತಿಯ ಫೋರ್ಟ್‌ನೈಟ್ಲಿ ಸಂಬಳ ವ್ಯವಸ್ಥೆ ಜಾರಿಗೆ ತಂದ ದಕ್ಷಿಣ ಏಷ್ಯಾದ ಮೊದಲ ದೇಶವಾಗಿ ನೇಪಾಳ ಗುರುತಿಸಿಕೊಂಡಿದೆ. ಖಾಸಗಿ ವಲಯಕ್ಕೂ ಈ ವ್ಯವಸ್ಥೆ ವಿಸ್ತರಿಸುವುದೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಆರ್ಥಿಕ ತಜ್ಞರ ಪ್ರಕಾರ, ಈ ಕ್ರಮವು ಚಿಕ್ಕ ಮತ್ತು ಮಧ್ಯಮ ವ್ಯಾಪಾರಗಳಿಗೆ ಸಹ ಲಾಭಕಾರಿಯಾಗಬಹುದು. ಆದರೆ, ಸರ್ಕಾರದ ಖಜಾನೆ ನಿರ್ವಹಣೆಯ ಮೇಲೆ ಇದರ ಪರಿಣಾಮವನ್ನು ಗಮನಿಸುವುದು ಅಗತ್ಯ ಎಂದು ಅಭಿಪ್ರಾಯ ವ್ಯಕ್ತವಾಗಿದೆ.






















