Home Advertisement
Home ನಮ್ಮ ಜಿಲ್ಲೆ ಮೈಸೂರು ನದಿಯಲ್ಲಿ ಮುಳುಗಿ 6 ಮಂದಿ ಸಾವು : ₹5 ಲಕ್ಷ ಪರಿಹಾರ ಘೋಷಣೆ

ನದಿಯಲ್ಲಿ ಮುಳುಗಿ 6 ಮಂದಿ ಸಾವು : ₹5 ಲಕ್ಷ ಪರಿಹಾರ ಘೋಷಣೆ

0
108

ಕೆ.ಆ‌ರ್.ನಗರ (ಮೈಸೂರು): : ಹೊರವಲಯದ ಅರ್ಕೇಶ್ವರ ದೇಗುಲದ ಬಳಿಯ ಕಾವೇರಿ ನದಿಯಲ್ಲಿ ಈಜಲು ಇಳಿದಿದ್ದ ಆರು ಮಂದಿ ನೀರಿನಲ್ಲಿ ಮುಳುಗಿ ಮೃತಪಟ್ಟ ಹೃದಯವಿದ್ರಾವಕ ಘಟನೆ ಭಾನುವಾರ ನಡೆದಿದೆ.

ಉರೂಸ್ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಅರ್ಕೇಶ್ವರ ದೇಗುಲದ ಬಳಿಯ ದರ್ಗಾಗೆ ಹಲವು ಮುಸ್ಲಿಂ ಕುಟುಂಬಗಳು ಭೇಟಿ ನೀಡಿದ್ದವು. ಈ ವೇಳೆ 8 ಮಂದಿ ಯುವಕರು ಮತ್ತು ಮಕ್ಕಳು ನದಿಗೆ ಈಜಲು ಇಳಿದಿದ್ದರು. ಆದರೆ ನೀರಿನ ರಭಸ ಹೆಚ್ಚಿದ್ದರಿಂದ 6 ಮಂದಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಸ್ಥಳೀಯರು ತಕ್ಷಣ ಕಾರ್ಯಪ್ರವೃತ್ತರಾಗಿ ಇಬ್ಬರನ್ನು ರಕ್ಷಿಸಿದ್ದಾರೆ.

ಮೃತರನ್ನು ಯಾಸಿನ್ (23), ಫಾತಿಮ್ (30), ಹುಮಾಯೂನ್ (7), ನೇಹಾನ್ (19), ಅಲೀಂ (13) ಸೇರಿದಂತೆ ಒಟ್ಟು ಆರು ಮಂದಿ ಎಂದು ಗುರುತಿಸಲಾಗಿದೆ. ಉಳಿದ ಇಬ್ಬರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಕ್ಷಣಾ ಕಾರ್ಯಾಚರಣೆ: ಘಟನೆಯ ಮಾಹಿತಿ ತಿಳಿದ ತಕ್ಷಣ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಶೋಧ ಕಾರ್ಯಾಚರಣೆ ನಡೆಸಿದರು. ಸ್ಥಳೀಯರು ಸಹ ರಕ್ಷಣಾ ಕಾರ್ಯದಲ್ಲಿ ಕೈಜೋಡಿಸಿದರು. ಬಳಿಕ ಮೃತದೇಹಗಳನ್ನು ಹೊರತೆಗೆದು ಮುಂದಿನ ಕ್ರಮ ಕೈಗೊಳ್ಳಲಾಗಿದೆ.

CM ಪರಿಹಾರ ಘೋಷಣೆ : ಈ ದುರ್ಘಟನೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ಅವರು ಮೃತರ ಆತ್ಮಕ್ಕೆ ಶಾಂತಿ ಕೋರಿ, ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ. ಮೃತರ ಕುಟುಂಬಗಳಿಗೆ ತಲಾ ₹5 ಲಕ್ಷ ಪರಿಹಾರ ನೀಡುವುದಾಗಿ ಸರ್ಕಾರ ಘೋಷಿಸಿದ್ದು, ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.