ಬೆಂಗಳೂರಿನ ಹೃದಯಭಾಗದಲ್ಲಿರುವ ಎಂ. ಚಿನ್ನಸ್ವಾಮಿ ಕ್ರೀಡಾಂಗಣ ಕೇವಲ ಒಂದು ಮೈದಾನವಲ್ಲ, ಅದು ಕೋಟ್ಯಂತರ ಅಭಿಮಾನಿಗಳ ಭಾವನೆ. 1969ರಲ್ಲಿ ಸ್ಥಾಪನೆಯಾದ ಈ ಕ್ರೀಡಾಂಗಣಕ್ಕೆ ಈಗ ಐಪಿಎಲ್ 2026ರ ಸಂಭ್ರಮ ಮರಳಿದೆ. ಈ ಬಾರಿ ಇಲ್ಲಿ ಒಟ್ಟು 7 ರೋಚಕ ಪಂದ್ಯಗಳು ನಡೆಯಲಿವೆ.
ಇನ್ನು ಕ್ರೀಡಾಂಗಣದ ಇತಿಹಾಸದ ಬಗ್ಗೆ ನೋಡುವುದಾದರೆ, ಸ್ಥಾಪನೆಯಾಗಿದ್ದು 1969ರಲ್ಲಿ ಕರ್ನಾಟಕ ಸರ್ಕಾರದ ಸಹಕಾರದೊಂದಿಗೆ ಈ ಕ್ರೀಡಾಂಗಣ ತಲೆ ಎತ್ತಿತು. ಮೊದಲು ಇದನ್ನು ‘ಕೆ.ಎಸ್.ಸಿ.ಎ (KSCA) ಸ್ಟೇಡಿಯಂ’ ಎಂದು ಕರೆಯಲಾಗುತ್ತಿತ್ತು. ನಂತರ, ಬಿಸಿಸಿಐ ಮಾಜಿ ಅಧ್ಯಕ್ಷರು ಹಾಗೂ ಕರ್ನಾಟಕ ಕ್ರಿಕೆಟ್ ಸಂಸ್ಥೆಯಲ್ಲಿ 4 ದಶಕಗಳ ಕಾಲ ಸೇವೆ ಸಲ್ಲಿಸಿದ ಮಂಗಳಂ ಚಿನ್ನಸ್ವಾಮಿ ಅವರ ಗೌರವಾರ್ಥವಾಗಿ ಈ ಮೈದಾನಕ್ಕೆ ಅವರ ಹೆಸರನ್ನು ಇಡಲಾಯಿತು. ಇದು ಕರ್ನಾಟಕ ರಾಜ್ಯ ತಂಡ, ಭಾರತೀಯ ಕ್ರಿಕೆಟ್ ತಂಡ ಹಾಗೂ ನಮ್ಮ ಹೆಮ್ಮೆಯ ಆರ್‌ಸಿಬಿ (RCB) ತಂಡಗಳ ತವರು ಮೈದಾನವಾಗಿದೆ. ವಿಶೇಷವೆಂದರೆ, 2024ರಿಂದ ಆರ್‌ಸಿಬಿ ಮಹಿಳಾ ತಂಡಕ್ಕೂ ಇದು ತವರು ನೆಲವಾಗಿದೆ.
ಚಿನ್ನಸ್ವಾಮಿ ಕ್ರೀಡಾಂಗಣದ ಐಪಿಎಲ್ ದಾಖಲೆಗಳು:
ಒಟ್ಟು ಪಂದ್ಯಗಳು: 102
ಗರಿಷ್ಠ ಮೊತ್ತ: 287/3 (ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಆರ್‌ಸಿಬಿ, 2024)
ಕನಿಷ್ಠ ಮೊತ್ತ: 82/10 (ಆರ್‌ಸಿಬಿ ವಿರುದ್ಧ ಕೆಕೆಆರ್, 2008)
ಅತ್ಯಧಿಕ ವೈಯಕ್ತಿಕ ಸ್ಕೋರ್: 175* (ಕ್ರಿಸ್ ಗೇಲ್, 2013)
ಅತಿ ಹೆಚ್ಚು ರನ್: ವಿರಾಟ್ ಕೊಹ್ಲಿ (3,202 ರನ್)
ಅತಿ ಹೆಚ್ಚು ವಿಕೆಟ್: ಯುಜ್ವೇಂದ್ರ ಚಹಾಲ್ (58 ವಿಕೆಟ್)
ಒಟ್ಟು ಸಿಕ್ಸರ್‌ಗಳು: 1,463
ಈ ಕ್ರೀಡಾಂಗಣದ ಇತಿಹಾಸವನ್ನು ಗಮನಿಸಿದರೆ ಇಲ್ಲಿ ಬ್ಯಾಟರ್‌ಗಳದ್ದೇ ದರ್ಬಾರ್ ಎಂಬುದು ಸಾಬೀತಾಗುತ್ತದೆ. ಪುರುಷರ ಅಂತರಾಷ್ಟ್ರೀಯ ಟಿ20ಯಲ್ಲಿ ಭಾರತವು ಅಫ್ಘಾನಿಸ್ತಾನ ವಿರುದ್ಧ ಗಳಿಸಿದ 212 ರನ್ ಗರಿಷ್ಠ ಮೊತ್ತವಾದರೆ, ಐಪಿಎಲ್ ಇತಿಹಾಸದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವು ಆರ್‌ಸಿಬಿ ವಿರುದ್ಧ ಸಿಡಿಸಿದ 287 ರನ್‌ಗಳು ಇಲ್ಲಿ ದಾಖಲಾದ ಸಾರ್ವಕಾಲಿಕ ಗರಿಷ್ಠ ಮೊತ್ತವಾಗಿದೆ. ವಿಶೇಷವಾಗಿ ಕ್ರಿಸ್ ಗೇಲ್ ಅವರು 2013ರಲ್ಲಿ ಬಾರಿಸಿದ ಅಜೇಯ 175 ರನ್‌ಗಳು ಮತ್ತು ವಿರಾಟ್ ಕೊಹ್ಲಿ ಅವರು ಈ ಮೈದಾನದಲ್ಲಿ ಗಳಿಸಿರುವ 3,200ಕ್ಕೂ ಅಧಿಕ ರನ್‌ಗಳು ಚಿನ್ನಸ್ವಾಮಿ ಕ್ರೀಡಾಂಗಣದ ಹೆಮ್ಮೆಯ ದಾಖಲೆಗಳಾಗಿವೆ. 1,400ಕ್ಕೂ ಅಧಿಕ ಸಿಕ್ಸರ್‌ಗಳನ್ನು ಕಂಡಿರುವ ಈ ಮೈದಾನವು ವಿಶ್ವದ ಅತ್ಯಂತ ಸ್ಫೋಟಕ ಬ್ಯಾಟಿಂಗ್ ಪಿಚ್‌ಗಳಲ್ಲಿ ಒಂದೆಂದು ಹೆಸರುವಾಸಿಯಾಗಿದೆ.
ಐಪಿಎಲ್ 2026ರ ಸಾಲಿನಲ್ಲಿ ಬೆಂಗಳೂರಿನ ಈ ಮೈದಾನವು ಪ್ರಮುಖ ಪಂದ್ಯಗಳಿಗೆ ಆತಿಥ್ಯ ವಹಿಸಲಿದ್ದು, ಮಾರ್ಚ್ 28ರಂದು ನಡೆಯಲಿರುವ ಆರ್‌ಸಿಬಿ ಮತ್ತು ಎಸ್‌ಆರ್‌ಹೆಚ್ ನಡುವಿನ ಹಣಾಹಣಿಯೊಂದಿಗೆ ಇಲ್ಲಿನ ಕ್ರಿಕೆಟ್ ಹಬ್ಬಕ್ಕೆ ಚಾಲನೆ ಸಿಗಲಿದೆ. ಏಪ್ರಿಲ್ ತಿಂಗಳ ಪೂರ್ತಿ ಇಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ಲಕ್ನೋ ಸೂಪರ್ ಜೈಂಟ್ಸ್ ಮತ್ತು ದೆಹಲಿ ಕ್ಯಾಪಿಟಲ್ಸ್ ಅಂತಹ ಬಲಿಷ್ಠ ತಂಡಗಳ ನಡುವೆ ರೋಚಕ ಪಂದ್ಯಗಳು ನಡೆಯಲಿವೆ. ಈ ಸಾಲಿನ ವಿಶೇಷವೆಂದರೆ ಲೀಗ್ ಪಂದ್ಯಗಳ ಜೊತೆಗೆ ಅತ್ಯಂತ ನಿರ್ಣಾಯಕವಾದ ಕ್ವಾಲಿಫೈಯರ್-2 ಮತ್ತು ಮೇ 31ರಂದು ನಡೆಯಲಿರುವ ಐಪಿಎಲ್ 2026ರ ಮೆಗಾ ಫೈನಲ್ ಪಂದ್ಯಕ್ಕೂ ಚಿನ್ನಸ್ವಾಮಿ ಕ್ರೀಡಾಂಗಣವು ಸಾಕ್ಷಿಯಾಗಲಿದ್ದು, ಇಡೀ ವಿಶ್ವದ ಕ್ರಿಕೆಟ್ ಅಭಿಮಾನಿಗಳ ಕಣ್ಣು ಈಗ ಬೆಂಗಳೂರಿನತ್ತ ನೆಟ್ಟಿದೆ.






















