ಪಾಟ್ನಾ: ಬಿಹಾರ ರಾಜಕೀಯದಲ್ಲಿ ಮಹತ್ವದ ತಿರುವು ಸಂಭವಿಸಿದ್ದು, “ಸುಶಾಸನ್ ಬಾಬು” ಎಂದೇ ಖ್ಯಾತರಾಗಿರುವ ನಿತೀಶ್ ಕುಮಾರ್ ಅವರು ಏಪ್ರಿಲ್ 14ರಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದರಿಂದ ಸುಮಾರು ಎರಡು ದಶಕಗಳ ಕಾಲ ರಾಜ್ಯ ರಾಜಕಾರಣದಲ್ಲಿ ಪ್ರಭಾವ ಬೀರಿದ ಅವರ ಆಡಳಿತಕ್ಕೆ ತೆರೆ ಬಿದ್ದಿದೆ.
‘ಸುಶಾಸನ ಬಾಬು’ ಹೆಸರಿನ ಹಿನ್ನೆಲೆ: (Sushasan Babu) ಎನ್ನುವುದು ಬಿಹಾರದ ಮಾಜಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಇರುವ ಜನಪ್ರಿಯ ಅಡ್ಡಹೆಸರು. ಈ ಹೆಸರಿನ ಅರ್ಥ ‘ಉತ್ತಮ ಆಡಳಿತದ ನಾಯಕ’ ಎಂದಾಗಿದೆ. 2005ರಲ್ಲಿ ಅವರು ಬಿಹಾರದ ಅಧಿಕಾರಕ್ಕೆ ಬಂದಾಗ, ರಾಜ್ಯದಲ್ಲಿದ್ದ ಕಾನೂನು ಸುವ್ಯವಸ್ಥೆಯ ಹದಗೆಟ್ಟ ಸ್ಥಿತಿಯನ್ನು ಸುಧಾರಿಸಿ, ಉತ್ತಮ ಆಡಳಿತ ನೀಡಲು ಮುಂದಾದ ಕಾರಣ ಅವರಿಗೆ ‘ಸುಶಾಸನ ಬಾಬು’ ಎಂಬ ಹೆಸರು ಬಂದಿತು.
ನಿತೀಶ್ ಕುಮಾರ್ ಇತ್ತೀಚೆಗೆ ರಾಜ್ಯಸಭೆಗೆ ಆಯ್ಕೆಯಾಗಿರುವ ಹಿನ್ನೆಲೆ, ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವುದು ನಿರೀಕ್ಷಿತವಾಗಿತ್ತು. ಮಂಗಳವಾರ ತಮ್ಮ ಅಂತಿಮ ಸಂಪುಟ ಸಭೆಗೆ ಅಧ್ಯಕ್ಷತೆ ವಹಿಸಿದ ನಂತರ, ಅವರು ಸಂಪುಟ ವಿಸರ್ಜನೆ ಘೋಷಿಸಿ, ತಮ್ಮ ರಾಜೀನಾಮೆ ಪತ್ರವನ್ನು ಬಿಹಾರ ರಾಜ್ಯಪಾಲ ಸೈಯದ್ ಅತಾ ಹಸ್ಟೈನ್ (Syed Ata Hasnain) ಅವರಿಗೆ ಸಲ್ಲಿಸಿದರು.
21 ವರ್ಷಗಳ ಆಡಳಿತಕ್ಕೆ ಅಂತ್ಯ : 2005ರಲ್ಲಿ ಮೊದಲ ಬಾರಿಗೆ ಎನ್‌ಡಿಎ ಸರ್ಕಾರವನ್ನು ಸ್ಥಾಪಿಸಿದ್ದ ನಿತೀಶ್ ಕುಮಾರ್, ನಂತರ ಹಲವು ಅವಧಿಗಳಲ್ಲಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು.
ಕಾನೂನು ಸುವ್ಯವಸ್ಥೆ, ರಸ್ತೆ, ವಿದ್ಯುತ್, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಬದಲಾವಣೆ ತಂದ ನಾಯಕನಾಗಿ ಅವರು ಗುರುತಿಸಿಕೊಂಡಿದ್ದರು. ಇವರು ದಾಖಲೆಯ 10 ಬಾರಿ ಬಿಹಾರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಆದಾಗ್ಯೂ, ರಾಜಕೀಯ ಲಾಭಕ್ಕಾಗಿ ಪದೇ ಪದೇ ಮೈತ್ರಿ ಬದಲಾಯಿಸುವ ಇವರ ಸ್ವಭಾವದಿಂದಾಗಿ ವಿರೋಧ ಪಕ್ಷಗಳು ಇವರನ್ನು ‘ಪಲ್ಟು ರಾಮ್’ ಎಂದೂ ಕರೆಯುತ್ತಾರೆ.
ರಾಜೀನಾಮೆಗೂ ಮುನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಸಂದೇಶದಲ್ಲಿ, “ನಾನು ದಣಿವರಿಯದೆ ಬಿಹಾರದ ಜನತೆಗೆ ಸೇವೆ ಸಲ್ಲಿಸಿದ್ದೇನೆ. ಈಗ ಹೊಸ ಸರ್ಕಾರಕ್ಕೆ ಅವಕಾಶ ನೀಡಲು ನಿರ್ಧರಿಸಿದ್ದೇನೆ” ಎಂದು ತಿಳಿಸಿದ್ದಾರೆ.
ಅಭಿವೃದ್ಧಿ ಕುರಿತ ಹೇಳಿಕೆ: ತಮ್ಮ ಕಾರ್ಯಕಾಲದ ಸಾಧನೆಗಳನ್ನು ಉಲ್ಲೇಖಿಸಿದ ಅವರು ಎಲ್ಲಾ ವರ್ಗಗಳ (ಹಿಂದುಳಿದ, ದಲಿತ, ಮಹಾದಲಿತ) ಅಭಿವೃದ್ಧಿಗೆ ಒತ್ತು, ಶಿಕ್ಷಣ, ಆರೋಗ್ಯ, ರಸ್ತೆ, ವಿದ್ಯುತ್ ಕ್ಷೇತ್ರಗಳಲ್ಲಿ ಸುಧಾರಣೆ, ಮಹಿಳೆಯರು ಮತ್ತು ಯುವಕರಿಗಾಗಿ ವಿಶೇಷ ಯೋಜನೆಗಳು “7 ನಿಶ್ಚಯ್-3” ಯೋಜನೆಯ ಮೂಲಕ 2025–2030 ಅವಧಿಗೆ ಅಭಿವೃದ್ಧಿ ರೂಪರೇಖೆ
ಇದಲ್ಲದೆ, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಬೆಂಬಲವನ್ನು ಶ್ಲಾಘಿಸಿ, “ಬಿಹಾರ ಇನ್ನಷ್ಟು ವೇಗವಾಗಿ ಅಭಿವೃದ್ಧಿ ಹೊಂದಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನೂತನ ಮುಖ್ಯಮಂತ್ರಿ: ಬಿಜೆಪಿ (BJP) ನಾಯಕರಾದ ಸಮ್ರಾಟ್ ಚೌಧರಿ ಅವರು ಬಿಹಾರದ ಮುಂದಿನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುವ ಸಾಧ್ಯತೆಯಿದೆ. ಈ ಮೂಲಕ ಬಿಹಾರದಲ್ಲಿ ಮೊದಲ ಬಾರಿಗೆ ಬಿಜೆಪಿ ನಾಯಕರು ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಲಿದ್ದಾರೆ.





















