ಬೆಂಗಳೂರು: UGCET-2026 ಸಂಬಂಧ ವಿದ್ಯಾರ್ಥಿಗಳಲ್ಲಿ ಉಂಟಾಗಿದ್ದ ಗೊಂದಲಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಸ್ಪಷ್ಟನೆ ನೀಡಿದೆ. ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಪರೀಕ್ಷೆ-1 ಮತ್ತು ಪರೀಕ್ಷೆ-2ರಲ್ಲಿ ಪಡೆದ ಅಂಕಗಳ ಪೈಕಿ ಹೆಚ್ಚು ಅಂಕಗಳನ್ನು ಸಿಇಟಿ ರ‍್ಯಾಂಕ್‌ಗಾಗಿ ಪರಿಗಣಿಸಲಾಗುತ್ತದೆ ಎಂದು ಪ್ರಾಧಿಕಾರ ತಿಳಿಸಿದೆ.
ಕೆಲ ವಿದ್ಯಾರ್ಥಿಗಳು ಪರೀಕ್ಷೆ-1ರಲ್ಲಿ ಪಡೆದ ಅಂಕಗಳನ್ನು ಹೆಚ್ಚಿಸಿಕೊಳ್ಳಲು ಪರೀಕ್ಷೆ-2 ಬರೆಯುತ್ತಿದ್ದಾರೆ. ಇಂತಹ ವಿದ್ಯಾರ್ಥಿಗಳಿಗೆ ಕಳೆದ ವರ್ಷದಂತೆ ಎರಡೂ ಪರೀಕ್ಷೆಗಳಲ್ಲಿನ ಅತ್ಯಧಿಕ ಅಂಕಗಳನ್ನೇ ಪರಿಗಣಿಸಲಾಗುತ್ತದೆ ಎಂದು KEA ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ಐಎಎಸ್ ತಿಳಿಸಿದ್ದಾರೆ.
ಇತ್ತೀಚೆಗೆ “ಪರೀಕ್ಷೆ-2 ಅಂಕಗಳನ್ನು ಪರಿಗಣಿಸಲಾಗುವುದಿಲ್ಲ” ಎಂಬ ವದಂತಿಗಳು ಹರಡುತ್ತಿದ್ದವು. ಇದನ್ನು ಸಂಪೂರ್ಣವಾಗಿ ತಳ್ಳಿಹಾಕಿರುವ KEA, ಇಂತಹ ಸುಳ್ಳು ಮಾಹಿತಿಗಳಿಗೆ ಕಿವಿಗೊಡಬಾರದು ಎಂದು ವಿದ್ಯಾರ್ಥಿಗಳಿಗೆ ಸೂಚಿಸಿದೆ.
ಇನ್ನೊಂದು ಮಹತ್ವದ ವಿಷಯವೆಂದರೆ, ದ್ವಿತೀಯ ಪಿಯುಸಿ ಎರಡೂ ಪರೀಕ್ಷೆಗಳ ಫಲಿತಾಂಶ ಪ್ರಕಟವಾದ ನಂತರವೇ CET ಫಲಿತಾಂಶ ಪ್ರಕಟಿಸಲಾಗುತ್ತದೆ. ಹೀಗಾಗಿ ಎರಡನೇ ಪರೀಕ್ಷೆಯ ಅಂಕಗಳನ್ನು ಕಡೆಗಣಿಸಲಾಗುತ್ತದೆ ಎಂಬ ಮಾತು ತಪ್ಪು ಎಂದು ಸ್ಪಷ್ಟಪಡಿಸಲಾಗಿದೆ.
ಈ ನಿಯಮವು ಕರ್ನಾಟಕ ರಾಜ್ಯ ಪಠ್ಯಕ್ರಮದ ಪಿಯುಸಿ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯವಾಗುತ್ತದೆ. ಕೇಂದ್ರ ಹಾಗೂ ಇತರ ರಾಜ್ಯಗಳ ಬೋರ್ಡ್ ವಿದ್ಯಾರ್ಥಿಗಳಿಗೆ ಈ ನಿಯಮ ಅನ್ವಯಿಸುವುದಿಲ್ಲ ಎಂದು KEA ತಿಳಿಸಿದೆ.























