Home Advertisement
Home ನಮ್ಮ ಜಿಲ್ಲೆ ಗದಗ ಡೋಣಿ ತಾಂಡಾದಲ್ಲಿ ಘೋರ ಕೃತ್ಯ; ಒಂದೇ ಕುಟುಂಬದ ಆರು ಮಂದಿ ಸಾವು-ಬದುಕಿನ ನಡುವೆ ಹೋರಾಟ!

ಡೋಣಿ ತಾಂಡಾದಲ್ಲಿ ಘೋರ ಕೃತ್ಯ; ಒಂದೇ ಕುಟುಂಬದ ಆರು ಮಂದಿ ಸಾವು-ಬದುಕಿನ ನಡುವೆ ಹೋರಾಟ!

0
108

ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡೋಣಿ ತಾಂಡಾದಲ್ಲಿ ಮೊನ್ನೆ ನಡುರಾತ್ರಿ ನಡೆದ ಘಟನೆ ಇಡೀ ಜಿಲ್ಲೆಯನ್ನೇ ನಡುಗಿಸಿದೆ. ದಿನವಿಡೀ ದುಡಿದು ದಣಿದಿದ್ದ ಕುಟುಂಬದ ಸದಸ್ಯರು ತಂಪಾದ ಗಾಳಿಗೆ ಮನೆಯ ಮುಂಭಾಗದಲ್ಲಿ ಗಾಢ ನಿದ್ರೆಗೆ ಜಾರಿದ್ದರು. ಸಮಯ ಸುಮಾರು ಒಂದು ಗಂಟೆಯಾದಾಗ ಅನಿರೀಕ್ಷಿತವಾಗಿ ಬಂದ ಹರ್ಜಪ್ಪ ಲಮಾಣಿ ಎಂಬ ವ್ಯಕ್ತಿ, ಮಲಗಿದ್ದವರ ಮೇಲೆ ದೊಣ್ಣೆಯಿಂದ ಅಮಾನುಷವಾಗಿ ಹಲ್ಲೆ ನಡೆಸಲು ಮುಂದಾಗಿದ್ದಾನೆ. ಯಾವುದೇ ಪ್ರಚೋದನೆ ಇಲ್ಲದೆ ನಡೆದ ಈ ದಾಳಿಯಿಂದ ಗಾಬರಿಗೊಂಡ ಗಾಯಾಳುಗಳ ಕಿರುಚಾಟ ಇಡೀ ತಾಂಡಾದ ಮೌನವನ್ನು ಸೀಳಿತ್ತು.

ದೊಣ್ಣೆಯಿಂದ ತಲೆ ಮತ್ತು ಮುಖಕ್ಕೆ ಮನಸೋಇಚ್ಛೆ ಹೊಡೆದ ಪರಿಣಾಮವಾಗಿ ಎಗ್ಗಪ್ಪ ಭಜನೆನಾಯಕ, ಶೇಖಪ್ಪ ನಾಯಕ್, ದೇವಕ್ಕ ನಾಯಕ್ ಸೇರಿದಂತೆ ಒಟ್ಟು ಆರು ಮಂದಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಗ್ರಾಮಸ್ಥರು ಸ್ಥಳಕ್ಕೆ ಧಾವಿಸುವಷ್ಟರಲ್ಲಿ ಹಲ್ಲೆಗೊಳಗಾದವರ ಸ್ಥಿತಿ ಚಿಂತಾಜನಕವಾಗಿತ್ತು. ತಕ್ಷಣವೇ ಎಲ್ಲರನ್ನೂ ಆಸ್ಪತ್ರೆಗೆ ಸಾಗಿಸಲಾಗಿದ್ದು, ಸದ್ಯ ಅವರು ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಘಟನೆಯ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಮುಂಡರಗಿ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ಅಧೀಕ್ಷಕ ರೋಹನ್ ಜಗದೀಶ್ ಅವರು, ಆರೋಪಿಯು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಎನ್ನುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಹೇಳಿದ್ದಾರೆ. ಆತ ಈ ಹಿಂದೆ ಚಿಕಿತ್ಸೆ ಪಡೆಯುತ್ತಿದ್ದ ದಾಖಲೆಗಳೂ ಲಭ್ಯವಿದ್ದು, ಆತನ ಅಸ್ವಸ್ಥತೆಯೇ ಈ ದಾಳಿಗೆ ಪ್ರಮುಖ ಕಾರಣವಿರಬಹುದು ಎಂದು ಶಂಕಿಸಲಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಘಟನೆಯ ಹಿಂದೆ ಇನ್ಯಾವುದಾದರೂ ಉದ್ದೇಶವಿದೆಯೇ ಎಂಬ ಬಗ್ಗೆ ಸಮಗ್ರ ತನಿಖೆ ಮುಂದುವರಿಸಿದ್ದಾರೆ. ಮಲಗಿದ್ದ ಜಾಗದಲ್ಲೇ ಅನಿರೀಕ್ಷಿತ ದಾಳಿಗೆ ಒಳಗಾದ ಕುಟುಂಬದವರ ಕ್ರಂದನ ತಾಂಡಾದಲ್ಲಿ ಶೋಕದ ವಾತಾವರಣ ಸೃಷ್ಟಿಸಿದೆ.