‘ನಾನು ಕರುಣಾಕರ’: ಅಪ್ಪ–ಮಗ ಬಾಂಧವ್ಯ ಹೇಳುವ ಹೃದಯಸ್ಪರ್ಶಿ ಸಿನಿಮಾ
ಚಿತ್ರ: ನಾನು ಕರುಣಾಕರ
ನಿರ್ದೇಶನ: ಆರ್ಯನ್ ತೇಜಸ್
ನಿರ್ಮಾಣ: ನಮನ್ ನಾರಾಯಣ್
ತಾರಾಗಣ: ಆರ್ಯನ್ ತೇಜಸ್, ರಾಧಾ ಭಗವತಿ, ಭವಿಷ್ ಗೌಡ, ಅಪೂರ್ವಶ್ರೀ, ಕರಿಸುಬ್ಬು ಹಾಗೂ ಲೋಕೇಶ್.
– ಗಣೇಶ್ ರಾಣೆಬೆನ್ನೂರು
ಕನ್ನಡ ಚಿತ್ರರಂಗದಲ್ಲಿ ಕುಟುಂಬ ಮೌಲ್ಯಗಳನ್ನು ಪ್ರತಿಬಿಂಬಿಸುವ ಹೊಸ ಪ್ರಯತ್ನವಾಗಿ ‘ನಾನು ಕರುಣಾಕರ’ ಸಿನಿಮಾ ಗಮನ ಸೆಳೆಯುತ್ತಿದೆ. ಆರ್ಯನ್ ತೇಜಸ್ ನಿರ್ದೇಶನ ಹಾಗೂ ನಾಯಕತ್ವದಲ್ಲಿ ಮೂಡಿಬಂದಿರುವ ಈ ಚಿತ್ರವು ಅಪ್ಪ–ಮಗನ ಬಾಂಧವ್ಯ, ದಾಂಪತ್ಯ ಜೀವನದ ಸವಾಲುಗಳು ಮತ್ತು ವ್ಯಕ್ತಿಗತ ಕನಸುಗಳ ನಡುವೆ ನಡೆಯುವ ಸಂಘರ್ಷವನ್ನು ಮನಮುಟ್ಟುವ ರೀತಿಯಲ್ಲಿ ತೆರೆದಿಡುತ್ತದೆ.
ನಮನ್ ನಾರಾಯಣ್ ನಿರ್ಮಾಣದಲ್ಲಿ ಮೂಡಿಬಂದಿರುವ ಈ ಸಿನಿಮಾದಲ್ಲಿ ರಾಧಾ ಭಗವತಿ, ಭವಿಷ್ ಗೌಡ, ಅಪೂರ್ವಶ್ರೀ, ಕರಿಸುಬ್ಬು ಮತ್ತು ಲೋಕೇಶ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಚಿತ್ರದ ಕಥಾಹಂದರ ಮುಖ್ಯವಾಗಿ ಒಂದು ಕುಟುಂಬದ ಸುತ್ತ ಸಾಗಿ, ವಿಶೇಷವಾಗಿ ಅಪ್ಪ ಮತ್ತು ಮಗನ ನಡುವಿನ ಭಾವನಾತ್ಮಕ ಸಂಬಂಧವನ್ನು ಎತ್ತಿಹಿಡಿಯುತ್ತದೆ. ಜೊತೆಗೆ, ಸಹಾಯಕ ನಿರ್ದೇಶಕನೊಬ್ಬನ ಜೀವನದ ಹೋರಾಟ ಮತ್ತು ಕನಸುಗಳನ್ನು ತಲುಪಲು ಎದುರಾಗುವ ಸವಾಲುಗಳನ್ನೂ ಚಿತ್ರದಲ್ಲಿ ಸ್ಪಷ್ಟವಾಗಿ ತೋರಿಸಲಾಗಿದೆ.
ಪ್ರತಿಯೊಬ್ಬರಿಗೂ ಜೀವನದಲ್ಲಿ ಏನಾದರೂ ಸಾಧಿಸಬೇಕು ಎಂಬ ಕನಸು ಇರುತ್ತದೆ. ಆದರೆ ಮದುವೆಯ ನಂತರ ಆ ಕನಸುಗಳು ಹೊಗೆಯಾಗುತ್ತವೆ ಎಂಬ ವಾಸ್ತವಿಕತೆಯನ್ನು ಸಿನಿಮಾ ಪ್ರಸ್ತಾಪಿಸುತ್ತದೆ.
ತೇರಿನ ಎರಡೂ ಚಕ್ರಗಳ ಸರಿಯಾಗಿದ್ದರೆ ಮಾತ್ರ ಮೆರವಣಿಗೆ ಸುಸೂತ್ರ. ಹಾಗೆಯೇ ಪತಿ-ಪತ್ನಿ ಕೂಡಿ ಬಾಳಿವುದರ ಜತೆಗೆ, ಇಬ್ಬರೂ ದುಡಿದರೆ ಮಾತ್ರ ಸಂಸಾರದ ಬಂಡಿ ಯಾವುದೇ ಅಡಚಣೆಯಿಲ್ಲದೇ ಸಾಗುತ್ತದೆ ಎಂಬುದನ್ನು ನೀಟಾಗಿ ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ ನಿರ್ದೇಶಕ ಆರ್ಯನ್ ತೇಜಸ್. ನಾಯಕ ಪಾತ್ರಧಾರಿಯೂ ಅವರೇ ಆಗಿರುವುದರಿಂದ ಎರಡನ್ನೂ ಸಮರ್ಥವಾಗಿ ನಿಭಾಯಿಸಲು ಪ್ರಯತ್ನಿಸಿದ್ದಾರೆ.
ಈ ಸಂದರ್ಭದಲ್ಲಿ ಪತಿ–ಪತ್ನಿ ಇಬ್ಬರೂ ಪರಸ್ಪರ ಸಹಕಾರದಿಂದ ಜೀವನವನ್ನು ಹೇಗೆ ಸಮತೋಲನದಲ್ಲಿಟ್ಟುಕೊಳ್ಳಬಹುದು ಎಂಬುದನ್ನು ನಿರ್ದೇಶಕರು ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ.
ಚಿತ್ರದಲ್ಲಿ ಗೃಹಿಣಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ರಾಧಾ ಭಗವತಿ ಅವರ ಪಾತ್ರವು ವಿಶೇಷ ಗಮನ ಸೆಳೆಯುತ್ತದೆ. ತನ್ನ ಕನಸುಗಳನ್ನು ಬದಿಗಿಟ್ಟು ಕುಟುಂಬಕ್ಕಾಗಿ ಬದುಕುವ ಹೆಣ್ಣಿನ ಮನಸ್ಥಿತಿ ಹಾಗೂ ತ್ಯಾಗವನ್ನು ಸಿನಿಮಾದಲ್ಲಿ ಸೂಕ್ಷ್ಮವಾಗಿ ಚಿತ್ರಿಸಲಾಗಿದೆ. “ಕನಸು ಕಾಣುವುದಷ್ಟೇ ಮುಖ್ಯವಲ್ಲ, ಅದನ್ನು ಸಾಕಾರಗೊಳಿಸಲು ಒಬ್ಬರಿಗೊಬ್ಬರು ಬೆಂಬಲ ನೀಡುವುದು ಮುಖ್ಯ” ಎಂಬ ಸಂದೇಶವನ್ನು ಸಿನಿಮಾ ನೀಡುತ್ತದೆ.
ಒಟ್ಟಾರೆ, ‘ನಾನು ಕರುಣಾಕರ’ ಸಿನಿಮಾ ಕೇವಲ ಮನರಂಜನೆಯಲ್ಲ, ಕುಟುಂಬದ ಬಾಂಧವ್ಯ, ಪರಸ್ಪರ ಸಹಕಾರ ಮತ್ತು ಜೀವನದ ನಿಜವಾದ ಮೌಲ್ಯಗಳನ್ನು ಮನದಟ್ಟುಗೊಳಿಸುವ ಭಾವನಾತ್ಮಕ ಫ್ಯಾಮಿಲಿ ಡ್ರಾಮಾ ಎಂದು ಹೇಳಬಹುದು.






















