ವಾಷಿಂಗ್ಟನ್: ಇರಾನ್ ಮಣಿಸುವ ಯುದ್ಧಕ್ಕೆ ನ್ಯಾಟೋ ಮಿತ್ರಕೂಟದ ದೇಶಗಳು ಬೆಂಬಲ ನೀಡದಿರುವುದರಿಂದ ತೀವ್ರ ಅಸಮಾಧಾನಗೊಂಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ಯುದ್ಧವನ್ನು ಆದಷ್ಟು ಬೇಗ ಮುಗಿಸುವ ಆತುರ ತೋರಿಸಿದ್ದಾರೆ. ಇರಾನ್ ಜತೆ ಒಪ್ಪಂದ ಡೀಲ್ ಮಾಡಿಕೊಳ್ಳದೇ ಎರಡ್ಮೂರು ವಾರಗಳಲ್ಲಿ ಯುದ್ಧ ಅಂತ್ಯ ಗೊಳಿಸುತ್ತೇವೆ ಎಂದಿದ್ದಾರೆ.
ಹೊರ್ಮುಜ್ ಸುತ್ತಮುತ್ತ ನಿರ್ಬಂಧಗಳನ್ನು ಹೇರಲಾಗಿರುವುದರಿಂದ ಬ್ರಿಟನ್‌ನಂಥ ದೇಶಗಳು ಜೆಟ್ ಇಂಧನ ಪಡೆಯುವುದಕ್ಕೂ ಹರಸಾಹಸ ಮಾಡುತ್ತಿವೆ. ಈ ದೇಶಗಳು ಹೊರ್ಮುಜ್ ಜಲ ಸಂಧಿಗೆ ಹೋಗಿ ಅದನ್ನು ಸ್ವಾಧೀನಪಡಿಸಿಕೊಳ್ಳ ಬೇಕು ಎಂದು ತಾಕೀತು ಮಾಡಿದ್ದಾರೆ.
ಸಂಘರ್ಷ ಅಂತ್ಯಗೊಳಿಸಲು ರಾಜತಾಂತ್ರಿಕ ಮಾರ್ಗ ಅತ್ಯವ ಶ್ಯಕವೇ ಎಂದು ಸುದ್ದಿಗಾರರು ಕೇಳಿದಾಗ, ಇರಾನ್ ಜೊತೆ ಒಪ್ಪಂದ ಮಾಡಿಕೊಳ್ಳುವ ಅಗತ್ಯವೇ ಇಲ್ಲ. ಬಹುಶಃ ಎರಡ್ಮೂರು ವಾರಗಳಲ್ಲಿ ಇರಾನ್ ವಿರುದ್ಧದ ಯುದ್ಧಕ್ಕೆ ಅಮೆರಿಕವೇ ಅಂತ್ಯಹಾಡಲಿದೆ ಎಂದಿದ್ದಾರೆ.
ನ್ಯಾಟೋ ಮಿತ್ರಕೂಟಕ್ಕೆ ಅಮೆರಿಕ ಬಹು ಸುದೀರ್ಘ ಕಾಲದಿಂದ ಬದ್ಧತೆ ತೋರಿದೆ. ಉಕ್ರೇನ್ ವಿರುದ್ಧ ರಷ್ಯಾ ಯುದ್ಧಕ್ಕಿಳಿದಾಗಲೂ ನಾವು ಉಕ್ರೇನ್ ಪರ ಧಾವಿಸಿದೆವು. ಆದರೆ ಈಗ ನಮ್ಮ ಪರ ಯಾರೂ ಬರಲಿಲ್ಲ ಎಂದರು.






















