Home Advertisement
Home ನಮ್ಮ ಜಿಲ್ಲೆ ಕಲಬುರಗಿ ಭೀಕರ ರಸ್ತೆ ಅಪಘಾತ: ಗರ್ಭಿಣಿ ತಾಯಿ, 2 ವರ್ಷದ ಮಗು ಸಾವು

ಭೀಕರ ರಸ್ತೆ ಅಪಘಾತ: ಗರ್ಭಿಣಿ ತಾಯಿ, 2 ವರ್ಷದ ಮಗು ಸಾವು

0
168

ಕಲಬುರಗಿ: ಜಿಲ್ಲೆಯ ನದಿಸಿನ್ನೂರ ಗ್ರಾಮದ ಬಳಿ ಸೋಮವಾರ ನಡೆದ ಭೀಕರ ರಸ್ತೆ ಅಪಘಾತವೊಂದು ತಾಯಿ-ಮಗಳ ಜೀವವನ್ನು ಬಲಿ ಪಡೆದಿದೆ.

ಕಾರು ಮತ್ತು ಸ್ಕೂಟರ್ ನಡುವೆ ಸಂಭವಿಸಿದ ಈ ಡಿಕ್ಕಿಯಲ್ಲಿ ಗರ್ಭಿಣಿ ಹಾಗೂ ಅವರ ಎರಡು ವರ್ಷದ ಕಂದಮ್ಮ ಮೃತಪಟ್ಟಿದ್ದು, ಕುಟುಂಬದ ಇನ್ನಿಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.

ಬೀದರ್ ಮೂಲದ ಬಟ್ಟೆ ವ್ಯಾಪಾರಿ ಪಿರೋಜಖಾನ್ (34) ಅವರು ವ್ಯಾಪಾರದ ನಿಮಿತ್ತ ಜೇವರ್ಗಿಗೆ ಬಂದಿದ್ದರು. ವ್ಯಾಪಾರ ಮುಗಿಸಿಕೊಂಡು ತಮ್ಮ ಗರ್ಭಿಣಿ ಪತ್ನಿ ಪ್ರವೀದ್ ಶೇಖ (32) ಅವರನ್ನು ತಪಾಸಣೆಗಾಗಿ ಕಲಬುರಗಿಯ ಖಾಸಗಿ ಹೆರಿಗೆ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರು. ಸ್ಕೂಟರ್‌ನಲ್ಲಿ ಪತ್ನಿ ಹಾಗೂ ಇಬ್ಬರು ಮಕ್ಕಳಾದ ಅಭಿಷಾನ್ (2) ಮತ್ತು ನಾಜಿಯಾ (5) ಜೊತೆಗೆ ಪ್ರಯಾಣಿಸುತ್ತಿದ್ದಾಗ, ನದಿಸಿನ್ನೂರ ಗ್ರಾಮದ ಬಳಿ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ.

ಅಪಘಾತದ ತೀವ್ರತೆಗೆ ತಾಯಿ ಪ್ರವೀದ್ ಶೇಖ ಸ್ಥಳದಲ್ಲೇ ಕೊನೆಯುಸಿರೆಳೆದರೆ, ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸುವ ದಾರಿಯ ಮಧ್ಯೆ ಪುಟ್ಟ ಮಗು ಅಭಿಷಾನ್ ಮೃತಪಟ್ಟಿದ್ದಾಳೆ. ಗಾಯಗೊಂಡಿರುವ ಪಿರೋಜಖಾನ್ (34) ಹಾಗೂ ಹಿರಿಯ ಮಗಳು ನಾಜಿಯಾರನ್ನು (5) ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.

ವಿಷಯ ತಿಳಿಯುತ್ತಿದ್ದಂತೆಯೇ ಟ್ರಾಫಿಕ್-2 ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತಕ್ಕೆ ಕಾರಣವಾದ ವಾಹನವನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದು, ಘಟನೆಯ ಬಳಿಕ ಪರಾರಿಯಾಗಿರುವ ಚಾಲಕನಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.