ಮಾತೃತ್ವ ರಜೆ ಪಡೆದ ಶಿಕ್ಷಕರ ಸ್ಥಾನಕ್ಕೆ ಗಸ್ಟ್ ಟೀಚರ್ ನೇಮಕ: ಸರ್ಕಾರದ ನಿರ್ಧಾರ
ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳ ಮಹಿಳಾ ಶಿಕ್ಷಕರಿಗೆ ನೀಡಲಾಗುವ ಮಾತೃತ್ವ ರಜೆ ಹಾಗೂ ಶಿಶುಪಾಲನಾ ರಜೆ ಅವಧಿಯಲ್ಲಿ ಬೋಧನಾ ಕಾರ್ಯದಲ್ಲಿ ವ್ಯತ್ಯಯ ಉಂಟಾಗದಂತೆ ಅತಿಥಿ ಶಿಕ್ಷಕರನ್ನು ನೇಮಕ ಮಾಡುವ ಕ್ರಮ ಕೈಗೊಳ್ಳಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಇಂದು ನಡೆದ ವಿಧಾನ ಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಸದಸ್ಯ ವೈ.ಎಂ.ಸತೀಶ್ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಮಾತೃತ್ವ ರಜೆಯ ಅವಧಿಯಲ್ಲಿ ವಿದ್ಯಾರ್ಥಿಗಳ ಪಾಠದಲ್ಲಿ ವ್ಯತ್ಯಯ ಉಂಟಾಗದಂತೆ ಅತಿಥಿ ಶಿಕ್ಷಕರನ್ನು ನಿಯುಕ್ತಿಗೊಳಿಸಲು ಸರ್ಕಾರ ಕ್ರಮವಹಿಸುವುದಾಗಿ ಹೇಳಿದರು.
15 ದಿನಗಳಲ್ಲಿ ರಜೆ ಮಂಜೂರು: ಮಾತೃತ್ವ ರಜೆಗಾಗಿ ಮಹಿಳಾ ಶಿಕ್ಷಕರು ಸಲ್ಲಿಸುವ ಅರ್ಜಿಯನ್ನು ಸಕ್ಷಮ ಪ್ರಾಧಿಕಾರ ಸ್ವೀಕರಿಸಿದ ಬಳಿಕ 15 ದಿನಗಳ ಒಳಗೆ ರಜೆಯನ್ನು ಮಂಜೂರು ಮಾಡಲಾಗುವುದು. ಇದರಿಂದ ಮಹಿಳಾ ಶಿಕ್ಷಕರಿಗೆ ತ್ವರಿತವಾಗಿ ರಜೆ ಸೌಲಭ್ಯ ದೊರೆಯಲಿದೆ ಎಂದು ಸಚಿವರು ತಿಳಿಸಿದರು.
ಶಿಶುಪಾಲನಾ ರಜೆಯೂ ಲಭ್ಯ : ಮಹಿಳಾ ಶಿಕ್ಷಕರು ಮಾತೃತ್ವ ರಜೆಯೊಂದಿಗೆ ಶಿಶುಪಾಲನಾ ರಜೆಯನ್ನು ಸಂಯೋಜಿಸಿಕೊಂಡು ಬಳಸಿಕೊಳ್ಳುವ ಅವಕಾಶವೂ ಇರಲಿದೆ. ಶಿಶುಪಾಲನಾ ರಜೆಗೆ ಸಲ್ಲಿಸುವ ಅರ್ಜಿಯನ್ನೂ ಸ್ವೀಕರಿಸಿದ 15 ದಿನಗಳೊಳಗೆ ಅನುಮೋದನೆ ನೀಡಲಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.
ಮಗುವಿನ ಅನುಕೂಲಕ್ಕೆ ನಿಯುಕ್ತಿ : ಮಾತೃತ್ವ ರಜೆಯ ನಂತರ ಕರ್ತವ್ಯಕ್ಕೆ ಹಾಜರಾಗುವ ಮಹಿಳಾ ಶಿಕ್ಷಕರಿಗೆ ಮಗುವಿನ ವಯಸ್ಸು 5 ವರ್ಷ ಪೂರ್ಣಗೊಳ್ಳುವವರೆಗೆ ತಮ್ಮ ಅನುಕೂಲವಾದ ಸ್ಥಳದಲ್ಲಿ ಸೇವೆ ಸಲ್ಲಿಸುವ ಅವಕಾಶ ನೀಡುವ ವ್ಯವಸ್ಥೆಯನ್ನು ಕೂಡ ಸರ್ಕಾರ ಮಾಡಲಿದೆ ಎಂದು ಸಚಿವರು ಹೇಳಿದರು.
ಈ ಕ್ರಮದಿಂದ ಮಹಿಳಾ ಶಿಕ್ಷಕರಿಗೆ ಕುಟುಂಬದ ಜವಾಬ್ದಾರಿಗಳನ್ನು ನಿಭಾಯಿಸುವುದಕ್ಕೂ, ಶಾಲಾ ಶಿಕ್ಷಣದ ಗುಣಮಟ್ಟ ಕಾಪಾಡುವುದಕ್ಕೂ ಸಹಕಾರಿಯಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.





















