Home Advertisement
Home ನಮ್ಮ ಜಿಲ್ಲೆ ಉತ್ತರ ಕನ್ನಡ ಗ್ಯಾಸ್ ಪೂರೈಕೆ ವ್ಯತ್ಯಯ: ರಸ್ತೆಯಲ್ಲೇ ಒಲೆ ಹಚ್ಚಿ ಪ್ರತಿಭಟನೆ

ಗ್ಯಾಸ್ ಪೂರೈಕೆ ವ್ಯತ್ಯಯ: ರಸ್ತೆಯಲ್ಲೇ ಒಲೆ ಹಚ್ಚಿ ಪ್ರತಿಭಟನೆ

0
1242

ಉತ್ತರ ಕನ್ನಡ(ದಾಂಡೇಲಿ): ಅಡುಗೆ ಅನಿಲದ ಬೆಲೆ ಏರಿಕೆ ಹಾಗೂ ಗ್ಯಾಸ್ ಪೂರೈಕೆಯಲ್ಲಿ ಉಂಟಾಗಿರುವ ವ್ಯತ್ಯಯದ ವಿರುದ್ಧ ದಾಂಡೇಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಭಾನುವಾರ ನಗರದಲ್ಲಿ ವಿಭಿನ್ನ ರೀತಿಯ ಪ್ರತಿಭಟನೆ ನಡೆಸಲಾಯಿತು.

ನಗರದ ಬಸ್ ನಿಲ್ದಾಣದ ಎದುರು ಪ್ರಮುಖ ರಸ್ತೆಯಲ್ಲೇ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮಹಿಳೆಯರು ಮಾನವ ಸರಪಳಿ ರಚಿಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯ ವೇಳೆ ಮಹಿಳೆಯರು ಕಟ್ಟಿಗೆ ಒಲೆ ಹಚ್ಚಿ ರಸ್ತೆಯಲ್ಲೇ ಅಡಿಗೆ ಮಾಡುವ ಮೂಲಕ ಗ್ಯಾಸ್ ಸಿಲಿಂಡರ್ ದರ ಏರಿಕೆ ಮತ್ತು ಪೂರೈಕೆ ಸಮಸ್ಯೆಯಿಂದ ಜನಸಾಮಾನ್ಯರು ಎದುರಿಸುತ್ತಿರುವ ಸಂಕಷ್ಟವನ್ನು ಪ್ರದರ್ಶಿಸಿದರು.

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮಹಿಳೆಯರು “ಗ್ಯಾಸ್ ದರ ಇಳಿಸಬೇಕು”, “ಸಾಮಾನ್ಯ ಜನರಿಗೆ ತಕ್ಷಣ ಗ್ಯಾಸ್ ಪೂರೈಕೆ ಸುಗಮಗೊಳಿಸಬೇಕು”, “ಬೆಲೆ ಏರಿಕೆ ನಿಯಂತ್ರಿಸಬೇಕು” ಎಂಬ ಘೋಷಣೆಗಳನ್ನು ಕೂಗಿದರು. ಗೃಹಿಣಿಯರ ಬದುಕಿನ ಮೇಲೆ ಬೆಲೆ ಏರಿಕೆಯ ನೇರ ಪರಿಣಾಮ ಬೀರುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ ಹಲವಾಯಿ, ಕಾರ್ಯದರ್ಶಿ ಕೀರ್ತಿ ಗಾಂವಕರ, ಹಿರಿಯ ಮುಖಂಡರಾದ ತಸ್ಟರ್ ಸೌಧಾಘರ, ರೇಣುಕಾ ಬದಂ ಮಾತನಾಡಿ, ಅಡುಗೆ ಅನಿಲದ ನಿರಂತರ ಬೆಲೆ ಏರಿಕೆಯಿಂದ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಅನೇಕ ಕಡೆಗಳಲ್ಲಿ ಗ್ಯಾಸ್ ಪೂರೈಕೆ ವ್ಯತ್ಯಯವಾಗುತ್ತಿರುವುದರಿಂದ ಜನರು ಮತ್ತೆ ಕಟ್ಟಿಗೆ ಒಲೆಗಳತ್ತ ಮುಖ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.

ಕೇಂದ್ರ ಸರ್ಕಾರ ತಕ್ಷಣ ದರ ಇಳಿಕೆ ಮಾಡಿ ಪೂರೈಕೆಯನ್ನು ಸುಗಮಗೊಳಿಸಬೇಕು ಎಂದು ಅವರು ಒತ್ತಾಯಿಸಿದರು. ಹೋಟೆಲ್, ರೆಸಾರ್ಟ್, ಹೋಂ ಸ್ಟೇಗಳಲ್ಲಿ ಗ್ಯಾಸ್ ಸಿಲಿಂಡರ್ ಕೊರತೆಯಿಂದ ಆತಂಕ ಎದುರಿಸುವಂತಾಗಿದೆ ಎಂದು ಕೇಂದ್ರ ಸರ್ಕಾರದ ವೈಫಲ್ಯಗಳ ಕುರಿತು ಟೀಕಿಸಿದರು.