Home Advertisement
Home ನಮ್ಮ ಜಿಲ್ಲೆ ಹಾಸನ ರೈತನ ಹಠಕ್ಕೆ ಮಣಿದ ಬ್ಯಾಂಕ್: 66 ಪೈಸೆಯ ವಿವಾದ ಸುಖಾಂತ್ಯ

ರೈತನ ಹಠಕ್ಕೆ ಮಣಿದ ಬ್ಯಾಂಕ್: 66 ಪೈಸೆಯ ವಿವಾದ ಸುಖಾಂತ್ಯ

0
108

9:34 ಪೈಸೆ ಬಾಕಿಗೆ ಬ್ಯಾಂಕ್ ನೋಟಿಸ್: 10ರೂ ಕಟ್ಟಿ ಉಳಿದ ಹಣಕ್ಕೆ ರೈತನ ಪಟ್ಟು – ಕೊನೆಗೂ 66 ಪೈಸೆ ಖಾತೆಗೆ ಜಮಾ

ಹಾಸನ : 9 ರೂಪಾಯಿ 34 ಪೈಸೆ ಸಾಲ ಬಾಕಿ ವಿಚಾರವಾಗಿ ಬ್ಯಾಂಕ್‌ ನೋಟಿಸ್‌ ನೀಡಿ 66 ಪೈಸೆ ಭಾಕಿ ಕುರಿತಂತೆ ಆರಂಭವಾದ ಘಟನೆ ಕೊನೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾದ ಬಳಿಕ, ರೈತನಿಗೆ ಮರಳಿಸಬೇಕಿದ್ದ 66 ಪೈಸೆಯನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ನಡೆದಿದೆ.

ಸಕಲೇಶಪುರ ತಾಲೂಕಿನ ಹೊಸಕೊಪ್ಪಲು ಗ್ರಾಮದ ರೈತ ಚೊಕ್ಕಣ್ಣ ಗೌಡ (Chokkannagowda) ಅವರು ಹಲವು ವರ್ಷಗಳ ಹಿಂದೆ Canara Bank ಸಕಲೇಶಪುರ ಶಾಖೆಯಿಂದ ಸುಮಾರು 50 ಸಾವಿರ ರೂಪಾಯಿ ಬೆಳೆ ಸಾಲ ಪಡೆದಿದ್ದರು. ನಂತರ ಅವರು ಸಾಲವನ್ನು ಸಮಯಕ್ಕೆ ಸರಿಯಾಗಿ ಸಂಪೂರ್ಣವಾಗಿ ತೀರಿಸಿದ್ದರು.

ಆದರೆ ಬ್ಯಾಂಕ್ ದಾಖಲೆ ಪ್ರಕಾರ ಇನ್ನೂ 9 ರೂಪಾಯಿ 34 ಪೈಸೆ ಬಾಕಿ ಇದೆ ಎಂದು ಹೇಳಿ ಬ್ಯಾಂಕ್ ಅಧಿಕಾರಿಗಳು ರೈತನಿಗೆ ನೋಟಿಸ್ ಕಳುಹಿಸಿದ್ದಲ್ಲದೆ ಹಲವು ಬಾರಿ ಕರೆ ಮಾಡಿ ಬಾಕಿ ಹಣ ಪಾವತಿಸಲು ಒತ್ತಾಯಿಸಿದ್ದರು.

10 ರೂ. ನೀಡಿ ಉಳಿದ ಚಿಲ್ಲರೆ ಕೇಳಿದ ರೈತ: ಬ್ಯಾಂಕ್ ಸಿಬ್ಬಂದಿಯ ಪದೇಪದೇ ಕರೆಗಳಿಂದ ಬೇಸತ್ತ ರೈತ ಚೊಕ್ಕಣ್ಣಗೌಡ ಸ್ವತಃ ಬ್ಯಾಂಕ್‌ಗೆ ತೆರಳಿ 10 ರೂಪಾಯಿ ನೀಡಿ ಬಾಕಿ ಹಣವನ್ನು ಪಾವತಿಸಿದರು. ಬಳಿಕ ಉಳಿದ 66 ಪೈಸೆ ಹಣವನ್ನು ಮರಳಿ ನೀಡುವಂತೆ ಬ್ಯಾಂಕ್ ಕ್ಯಾಶಿಯರ್ ಬಳಿ ಒತ್ತಾಯಿಸಿದರು. ಆದರೆ ಬ್ಯಾಂಕ್ ಸಿಬ್ಬಂದಿ ಚಿಲ್ಲರೆ ಪೈಸೆ ಇಲ್ಲ ಎಂದು ಹೇಳಿದ ಹಿನ್ನೆಲೆಯಲ್ಲಿ ಬ್ಯಾಂಕ್ ಒಳಗೆ ಮಾತಿನ ಚಕಮಕಿ ನಡೆದಿತ್ತು.

ಈ ವೇಳೆ ರೈತ, “ನೀವು ಪೈಸೆಗೆ ಪೈಸೆ ಲೆಕ್ಕ ಹಾಕಿ ನಮ್ಮಿಂದ ಹಣ ವಸೂಲಿ ಮಾಡುತ್ತೀರಾ. ಹಾಗಿದ್ದರೆ ನಮ್ಮ ಹಣವೂ ಪೈಸೆಗೆ ಪೈಸೆ ವಾಪಸ್ ಕೊಡಬೇಕು” ಎಂದು ಪಟ್ಟು ಹಿಡಿದಿದ್ದರು.

ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ: ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡಿಕೊಂಡಿದ್ದು, ರೈತನ ನಡೆಗೆ ಹಲವರು ಬೆಂಬಲ ವ್ಯಕ್ತಪಡಿಸಿದ್ದರು. ಬ್ಯಾಂಕ್ ಅಧಿಕಾರಿಗಳ ಕ್ರಮವನ್ನು ಹಲವರು ಟೀಕಿಸಿದ್ದು, ರೈತನಿಗೆ ನ್ಯಾಯ ಒದಗಿಸಬೇಕು ಎಂದು ಅಭಿಪ್ರಾಯ ವ್ಯಕ್ತವಾಗಿತ್ತು.

ಕೊನೆಗೆ 66 ಪೈಸೆ ರೈತನ ಖಾತೆಗೆ ಜಮಾ : ಈ ವಿಚಾರ ಬ್ಯಾಂಕ್‌ನ ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದ ಬಳಿಕ, ಕೊನೆಗೂ ರೈತನಿಗೆ ಮರಳಿಸಬೇಕಿದ್ದ 66 ಪೈಸೆಯನ್ನು ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ. ಬ್ಯಾಂಕ್‌ನಿಂದ ಹಣ ಜಮಾ ಮಾಡಿದ ಕುರಿತು ರೈತನಿಗೆ ಎಸ್‌ಎಂಎಸ್ ಮೂಲಕ ಮಾಹಿತಿ ಕಳುಹಿಸಲಾಗಿದೆ.

ಈ ಮೂಲಕ ಪೈಸೆಗೆ ಪೈಸೆ ಲೆಕ್ಕಾಚಾರದ ವಿವಾದಕ್ಕೆ ಕೊನೆ ಬಿದ್ದಿದೆ.