Home Advertisement
Home ನಮ್ಮ ಜಿಲ್ಲೆ ಬಳ್ಳಾರಿ ಬಳ್ಳಾರಿ: ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ – ಕಾಲೇಜು ಆಡಳಿತದ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ

ಬಳ್ಳಾರಿ: ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ – ಕಾಲೇಜು ಆಡಳಿತದ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ

0
99

ಬಳ್ಳಾರಿ ಪಾಲಿಟೆಕ್ನಿಕ್ ವಿದ್ಯಾರ್ಥಿ ಆತ್ಮಹತ್ಯೆ: ಕಾಲೇಜು ಆಡಳಿತದ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ

ಬಳ್ಳಾರಿ: ನಗರದ ಪ್ರತಿಷ್ಠಿತ ಸಂಜಯ್ ಗಾಂಧಿ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಚಲನ ಮೂಡಿಸಿದೆ. ಈ ಘಟನೆಗೆ ಸಂಬಂಧಿಸಿ ಕಾಲೇಜು ಆಡಳಿತ ಮಂಡಳಿಯ ವಿರುದ್ಧ ವಿದ್ಯಾರ್ಥಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕಾಲೇಜು ಆವರಣದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.

ಮೃತ ವಿದ್ಯಾರ್ಥಿಯನ್ನು ಗುಗ್ಗರಹಟ್ಟಿ ನಿವಾಸಿ ಅರವಿಂದ್ (19) ಎಂದು ಗುರುತಿಸಲಾಗಿದೆ.

ಕಾಲೇಜಿನಲ್ಲಿ ನಡೆದ ಗಲಾಟೆ ಹಿನ್ನೆಲೆ: ಮಂಗಳವಾರ ಕಾಲೇಜಿನಲ್ಲಿ ಕೆಲವು ವಿದ್ಯಾರ್ಥಿಗಳ ನಡುವೆ ಸಣ್ಣ ಮಟ್ಟಿನ ಗಲಾಟೆ ನಡೆದಿತ್ತು ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಕಾಲೇಜಿನ ಎಚ್ಒಡಿ ಹಾಗೂ ಪ್ರೊಫೆಸರ್ ಅರವಿಂದ್ ಅವರ ಪಾಲಕರನ್ನು ಕಾಲೇಜಿಗೆ ಕರೆಸಿದ್ದರು. ಪಾಲಕರ ಸಮ್ಮುಖದಲ್ಲೇ ಅರವಿಂದ್ ಅವರನ್ನು ಉಪನ್ಯಾಸಕರು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದು, “ಹೀಗೆ ಗಲಾಟೆ ಮಾಡುವ ವಿದ್ಯಾರ್ಥಿಗಳನ್ನು ಕಾಲೇಜಿನಲ್ಲಿ ಇರಿಸಿಕೊಳ್ಳಲು ಸಾಧ್ಯವಿಲ್ಲ. ಇದು ನಿನಗೆ ಕೊನೆಯ ಎಚ್ಚರಿಕೆ” ಎಂದು ಗದರಿಸಿದ್ದರೆಂದು ಹೇಳಲಾಗುತ್ತಿದೆ.

ನನೊಂದು ಆತ್ಮಹತ್ಯೆ : ಉಪನ್ಯಾಸಕರ ಗದರಿಕೆಯಿಂದ ತೀವ್ರವಾಗಿ ಮನನೊಂದ ಅರವಿಂದ್ ಮಂಗಳವಾರ ತಡರಾತ್ರಿ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ​ಬುಧವಾರ ಬೆಳಗ್ಗೆ ಕಾಲೇಜಿನಲ್ಲಿ ಅರವಿಂದ್‌ಗೆ ಶ್ರದ್ಧಾಂಜಲಿ ಸಭೆ ಹಮ್ಮಿಕೊಳ್ಳಲಾಗಿತ್ತು. ಸಭೆ ಮುಗಿಯುತ್ತಿದ್ದಂತೆ ರೊಚ್ಚಿಗೆದ್ದ ವಿದ್ಯಾರ್ಥಿಗಳು ಆಡಳಿತ ಮಂಡಳಿಯ ವಿರುದ್ಧ ಘೋಷಣೆಗಳನ್ನು ಕೂಗಲಾರಂಭಿಸಿದರು

ವಿದ್ಯಾರ್ಥಿಗಳ ಪ್ರತಿಭಟನೆ: ಬುಧವಾರ ಬೆಳಗ್ಗೆ ಕಾಲೇಜಿನಲ್ಲಿ ಅರವಿಂದ್ ಅವರಿಗೆ ಶ್ರದ್ಧಾಂಜಲಿ ಸಭೆ ಹಮ್ಮಿಕೊಳ್ಳಲಾಗಿತ್ತು. ಸಭೆ ಮುಗಿದ ತಕ್ಷಣವೇ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿ ಕಾಲೇಜು ಆಡಳಿತ ಮಂಡಳಿಯ ವಿರುದ್ಧ ಘೋಷಣೆಗಳನ್ನು ಕೂಗಲಾರಂಭಿಸಿದರು.

ಈ ವೇಳೆ ಕೆಲ ವಿದ್ಯಾರ್ಥಿಗಳು ಪ್ರಾಂಶುಪಾಲರ ಕಚೇರಿಯ ಕಿಟಕಿ ಗಾಜುಗಳನ್ನು ಪುಡಿಪುಡಿ ಮಾಡಿದ ಘಟನೆ ನಡೆದಿದೆ. ಎಚ್ಒಡಿ ಮತ್ತು ಉಪನ್ಯಾಸಕರ ಅತಿಯಾದ ಶಿಸ್ತು ಹಾಗೂ ನಿಂದನೆಯೇ ಅರವಿಂದ್ ಸಾವಿಗೆ ಕಾರಣ ಎಂದು ವಿದ್ಯಾರ್ಥಿಗಳು ಗಂಭೀರ ಆರೋಪ ಮಾಡಿದ್ದಾರೆ.

ಪೊಲೀಸರು ಭೇಟಿ, ಪ್ರಕರಣ ದಾಖಲು : ಘಟನಾ ಸ್ಥಳಕ್ಕೆ ಬ್ರೂಸ್‌ಪೇಟೆ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.

ಈ ಸಂಬಂಧ ಬ್ರೂಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿದ್ಯಾರ್ಥಿ ಸಾವಿನ ಬಗ್ಗೆ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.