ಟೆಹ್ರಾನ್: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜತೆಗೆ ಚರ್ಚಿಸಿದ ಬಳಿಕ ಯುದ್ಧ ನಿಲ್ಲಿಸುತ್ತೇನೆ ಎಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಇರಾನ್ ಹಾಗೂ ಇಸ್ರೇಲ್ ಶಾಕ್ ನೀಡಿವೆ.
ಅಮೆರಿಕ ಮತ್ತು ಇಸ್ರೇಲ್ ವಿರುದ್ಧದ ಸೇನೆಯ ದಾಳಿಯಲ್ಲಿ ಯಾವಾಗ ನಿಲ್ಲಿಸಬೇಕು ಅಂತ ನಾವು ನಿರ್ಧರಿಸುತ್ತೇವೆ ಎಂದು ಇರಾನ್ ನಾಯಕರು ತಿರುಗೇಟು ನೀಡಿದ್ದಾರೆ.
ಇತ್ತೀಚೆಗೆ ಅಮೆರಿಕದ ಪೆಂಟಗಾನ್ ಇನ್ನು 10 ದಿನಗಳ ಕಾಲ ಇದೇ ರೀತಿ ಯುದ್ಧ ಮುಂದುವರಿದರೆ ಕ್ಷಿಪಣಿಗಳು ಖಾಲಿಯಾಗಲಿವೆ ಎಂದು ಅಧ್ಯಕ್ಷ ಟ್ರಂಪ್‌ಗೆ ವರದಿ ನೀಡಿತ್ತು. ಈ ಹಿನ್ನೆಲೆಯಲ್ಲಿ ಟ್ರಂಪ್ ಆಗಾಗ್ಗೆ ಯುದ್ಧ ಕೊನೆಗೊಳಿಸುವ ಮಾತನಾಡುತ್ತಿದ್ದಾರೆ.
ಯುದ್ಧದ ಪರಿಣಾಮ ಜಾಗತಿಕವಾಗಿ ತೈಲದ ಬಿಕ್ಕಟ್ಟು ಸೃಷ್ಟಿಯಾಗಿದ್ದು, ಪ್ರತಿ ಬ್ಯಾರಲ್‌ಗೆ 100 ಡಾಲರ್ ತಲುಪಿದೆ. ಈ ಹಿನ್ನೆಲೆಯಲ್ಲಿ ಸೋಮವಾರವಷ್ಟೇ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿರುವ ಅವರು, ಇರಾನ್ ವಿರುದ್ಧ ಯುದ್ಧ ಶೀಘ್ರದಲ್ಲೇ ಮುಗಿಯುತ್ತದೆ. ತೈಲ ಬೆಲೆಯೂ ಇಳಿಕೆಯಾಗುತ್ತದೆ ಎಂದು ಅಚ್ಚರಿಯ ಹೇಳಿಕೆ ನೀಡಿದ್ದರು.
ಟ್ರಂಪ್ ಹೇಳಿಕೆ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ಸ್ ಕಾರ್ಪ್ಸ್ (ಐಆರ್‌ಜಿಸಿ) ದಾಳಿಯ ಮುಂದುವರಿಕೆ ಮತ್ತು ಭವಿಷ್ಯದ ಸ್ಥಿತಿಗತಿ ಟೆಹ್ರಾನ್ ಪಡೆಗಳ ಕೈಯಲ್ಲಿದೆ. ಯುದ್ಧ ಯಾವಾಗ ಕೊನೆಗಾಣಿಸಬೇಕು ಎಂದು ನಿರ್ಧರಿಸುವವರು ನಾವು ಹೊರತು ಅಮೆರಿಕ ಅಲ್ಲ ಎಂದು ಮಾರ್ಮಿಕವಾಗಿ ಹೇಳಿದೆ. ಇರಾನ್‌ನ ಸೇನಾ ಪಡೆಯ ಈ ಹೇಳಿಕೆಯಿಂದ ಯುದ್ಧ ಮತ್ತಷ್ಟು ದಿನ ಮುಂದುವರಿಯುವ ಸಾಧ್ಯತೆ ಇದೆ.






















