ಸಂಸತ್ತಿನಲ್ಲಿ ರಾಜಕೀಯ ಕಾವು: ಸ್ಪೀಕರ್ ವಿರುದ್ಧ ವಿಪಕ್ಷಗಳ ಅವಿಶ್ವಾಸ ನಿರ್ಣಯ
ನವದೆಹಲಿ: ಸಂಸತ್ತಿನ ಬಜೆಟ್ ಅಧಿವೇಶನದ ಎರಡನೇ ಹಂತದ ಕಲಾಪಗಳು ಸೋಮವಾರದಿಂದ ಪ್ರಾರಂಭವಾಗಿದ್ದು, ರಾಜಕೀಯವಾಗಿ ಉದ್ವಿಗ್ನ ವಾತಾವರಣದಲ್ಲಿ ಚರ್ಚೆಗಳು ನಡೆಯುವ ಸಾಧ್ಯತೆ ಇದೆ. ಈ ಹಂತದಲ್ಲಿ ಪ್ರಮುಖವಾಗಿ ಲೋಕಸಭಾ ಸ್ಪೀಕರ್ ವಿರುದ್ಧ ವಿರೋಧ ಪಕ್ಷಗಳು ನೀಡಿರುವ ಅವಿಶ್ವಾಸ ನಿರ್ಣಯದ ನೋಟಿಸ್ ವಿಚಾರವಾಗಿ ಚರ್ಚೆ ನಡೆಯುವ ಸಾಧ್ಯತೆ ಇದೆ.
ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರ ವಿರುದ್ಧ ವಿರೋಧ ಪಕ್ಷಗಳು ಅವಿಶ್ವಾಸ ನಿರ್ಣಯದ ನೋಟಿಸ್ ಸಲ್ಲಿಸಿರುವುದು ಅಧಿವೇಶನದ ಪ್ರಮುಖ ರಾಜಕೀಯ ಬೆಳವಣಿಗೆಯಾಗಿದೆ. ಬಜೆಟ್ ಅಧಿವೇಶನದ ಮೊದಲ ಹಂತದಲ್ಲಿ ಆಡಳಿತಾರೂಢ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವೆ ತೀವ್ರ ವಾಗ್ವಾದ ನಡೆದಿತ್ತು. ವಿಶೇಷವಾಗಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಸದನದಲ್ಲಿ ಮಾತನಾಡಲು ಅವಕಾಶ ನೀಡಲಾಗಿಲ್ಲ ಎಂಬ ಆರೋಪವನ್ನು ವಿರೋಧ ಪಕ್ಷಗಳು ಮಾಡಿದ್ದವು.
ಈ ಹಿನ್ನೆಲೆಯಲ್ಲಿ Indian National Congress ನೇತೃತ್ವದಲ್ಲಿ ವಿರೋಧ ಪಕ್ಷಗಳು ಲೋಕಸಭೆ ಕಾರ್ಯದರ್ಶಿಗೆ ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯದ ನೋಟಿಸ್ ನೀಡಿದ್ದವು. ಕಾಂಗ್ರೆಸ್ ಪಕ್ಷದ ಸಂಸದರು ಈ ನೋಟಿಸ್ ಸಲ್ಲಿಸಿದ್ದಾರೆ.
118 ಸಂಸದರ ಬೆಂಬಲ: ಸ್ಪೀಕರ್ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಕಾಂಗ್ರೆಸ್ ಸೇರಿದಂತೆ ಹಲವು ವಿರೋಧ ಪಕ್ಷಗಳ ಒಟ್ಟು 118 ಸಂಸದರು ಸಹಿ ಹಾಕಿದ್ದಾರೆ ಎಂದು ತಿಳಿದುಬಂದಿದೆ. ಆರಂಭದಲ್ಲಿ ಬೆಂಬಲ ನೀಡದಿದ್ದ All India Trinamool Congress ಕೂಡ ಈಗ ಈ ಅವಿಶ್ವಾಸ ನಿರ್ಣಯಕ್ಕೆ ಬೆಂಬಲ ಸೂಚಿಸುವುದಾಗಿ ಹೇಳಿದೆ. ಇದರಿಂದ ವಿಷಯವು ಮತ್ತಷ್ಟು ರಾಜಕೀಯ ಚರ್ಚೆಗೆ ಗ್ರಾಸವಾಗುವ ಸಾಧ್ಯತೆ ಇದೆ.
ಸ್ಪೀಕರ್ ವಿರುದ್ಧದ ಆರೋಪಗಳು : ವಿರೋಧ ಪಕ್ಷಗಳು ನೀಡಿರುವ ನೋಟಿಸ್‌ನಲ್ಲಿ ಸ್ಪೀಕರ್ ಅವರ ಕಾರ್ಯವೈಖರಿಯನ್ನು ತೀವ್ರವಾಗಿ ಟೀಕಿಸಲಾಗಿದೆ. ಸದನದಲ್ಲಿ ಪಕ್ಷಪಾತದ ವರ್ತನೆ ತೋರಿದ್ದಾರೆ ಎಂಬ ಆರೋಪ, ವಿರೋಧ ಪಕ್ಷದ ನಾಯಕರು ಹಾಗೂ ಇತರ ಸಂಸದರಿಗೆ ಮಾತನಾಡಲು ಅವಕಾಶ ನೀಡಿಲ್ಲ ಎಂಬ ದೂರು. ಮಹಿಳಾ ಸಂಸದೆಯರ ವಿರುದ್ಧ ಆಧಾರರಹಿತ ಆರೋಪಗಳು ಮಾಡಲಾಗಿದೆ ಎಂಬ ಆಕ್ಷೇಪ, ಎಂಟು ವಿರೋಧ ಪಕ್ಷದ ಸಂಸದರನ್ನು ಅಮಾನತು ಮಾಡಿರುವ ಕ್ರಮಗಳನ್ನು ಉಲ್ಲೇಖಿಸಿ ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯ ತರಲಾಗಿದೆ.
ನಿಯಮಗಳು ಏನು ಹೇಳುತ್ತವೆ?: ಲೋಕಸಭೆಯ ನಿಯಮಗಳ ಪ್ರಕಾರ ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯ ತರಲು ಕೆಲವು ಕ್ರಮಗಳನ್ನು ಅನುಸರಿಸಬೇಕು. ಕನಿಷ್ಠ ಇಬ್ಬರು ಸಂಸದರು ನೋಟಿಸ್ ನೀಡಬೇಕು, 14 ದಿನಗಳ ಮುಂಚಿತ ನೋಟಿಸ್ ಅಗತ್ಯ, ಸದನದಲ್ಲಿ ಚರ್ಚೆಗೆ ತರಲು ಕನಿಷ್ಠ 50 ಸದಸ್ಯರ ಬೆಂಬಲ ಬೇಕು ಈ ಎಲ್ಲಾ ಷರತ್ತುಗಳು ಪೂರ್ತಿಯಾದ ನಂತರ ಸ್ಪೀಕರ್ ವಿರುದ್ಧದ ಅವಿಶ್ವಾಸ ನಿರ್ಣಯವನ್ನು ಚರ್ಚೆಗೆ ತೆಗೆದುಕೊಳ್ಳಲು ಸಮಯ ನಿಗದಿಪಡಿಸಲಾಗುತ್ತದೆ.
ಚರ್ಚೆ ವೇಳೆ ಸ್ಪೀಕರ್ ಕುರ್ಚಿಯಲ್ಲಿ ಕುಳಿತುಕೊಳ್ಳುವುದಿಲ್ಲ: ಸ್ಪೀಕರ್ ವಿರುದ್ಧದ ಅವಿಶ್ವಾಸ ನಿರ್ಣಯದ ಚರ್ಚೆ ನಡೆಯುವ ವೇಳೆ ಸ್ಪೀಕರ್ ಸ್ವತಃ ಸಭಾಧ್ಯಕ್ಷ ಸ್ಥಾನದಲ್ಲಿ ಕುಳಿತುಕೊಳ್ಳುವಂತಿಲ್ಲ. ಆ ಸಮಯದಲ್ಲಿ ಉಪಸ್ಪೀಕರ್ ಸಭೆಯನ್ನು ನಡೆಸುತ್ತಾರೆ. ಉಪಸ್ಪೀಕರ್ ಹಾಜರಿಲ್ಲದಿದ್ದರೆ, ಸ್ಪೀಕರ್ ಸಮಿತಿಯಲ್ಲಿರುವ ಹಿರಿಯ ಸಂಸದರು ಅಧಿವೇಶನದ ಅಧ್ಯಕ್ಷತೆ ವಹಿಸುವ ವ್ಯವಸ್ಥೆ ಇದೆ.
ಬಜೆಟ್ ಅಧಿವೇಶನದ ಎರಡನೇ ಹಂತದಲ್ಲಿ ಸರ್ಕಾರದ ನೀತಿಗಳು, ಬಜೆಟ್ ಹಾಗೂ ರಾಜಕೀಯ ವಿವಾದಗಳು ಸೇರಿದಂತೆ ಹಲವು ಪ್ರಮುಖ ವಿಷಯಗಳ ಮೇಲೆ ತೀವ್ರ ಚರ್ಚೆ ನಡೆಯುವ ಸಾಧ್ಯತೆ ಇದೆ.






















