Home Advertisement
Home ಸುದ್ದಿ ದೇಶ ಉತ್ತರ ಪ್ರದೇಶ ವಿವಿಗಳ ಗುಣಮಟ್ಟ ಹೆಚ್ಚಳಕ್ಕೆ ದಿಟ್ಟ ಕ್ರಮ: ರಾಜ್ಯಪಾಲೆ ಆನಂದಿಬೇನ್ ಪಟೇಲ್

ಉತ್ತರ ಪ್ರದೇಶ ವಿವಿಗಳ ಗುಣಮಟ್ಟ ಹೆಚ್ಚಳಕ್ಕೆ ದಿಟ್ಟ ಕ್ರಮ: ರಾಜ್ಯಪಾಲೆ ಆನಂದಿಬೇನ್ ಪಟೇಲ್

0
30

ಲಕ್ನೋ: ಉತ್ತರ‌ ಪ್ರದೇಶದಲ್ಲಿನ ವಿಶ್ವವಿದ್ಯಾಲಯಗಳ‌ ಗುಣಮಟ್ಟವನ್ನು ಹೆಚ್ಚಿಸಿ ನ್ಯಾಕ್ ಸೇರಿದಂತೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ರ‍್ಯಾಂಕ್ ಪಡೆಯುವ ನಿಟ್ಟಿನಲ್ಲಿ ಕ್ರಮವಹಿಸಲಾಗಿದೆ ಎಂದು ಉತ್ತರ ಪ್ರದೇಶದ ರಾಜ್ಯಪಾಲೆ ಆನಂದಿಬೇನ್ ಪಟೇಲ್ ತಿಳಿಸಿದರು.

ಲಕ್ನೋ ನಗರದ ಜನ್ ಭವನದಲ್ಲಿ ಪಿಐಬಿ ನೇತೃತ್ವದಲ್ಲಿ ಆಗಮಿಸಿದ್ದ ಕರ್ನಾಟಕ‌ ಹಾಗೂ ತ್ರಿಪುರಾ ರಾಜ್ಯಗಳ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಸಂವಾದ ನಡೆಸಿದ್ದರು.

ಮೊದಲು ವಿವಿಗಳು ರ‍್ಯಾಂಕ್ ಪಡೆಯುವ ನಿಟ್ಟಿನಲ್ಲಿ ಒತ್ತು ನೀಡಿರಲಿಲ್ಲ. ಪ್ರತಿ ಬಾರಿ ನ್ಯಾಕ್, ಯುಜಿಸಿಗಳಲ್ಲಿ ಕಳಪೆ ಪ್ರದರ್ಶನ ತೋರಿದಾಗ. ಪ್ರತಿ ವಿವಿ ಅಧಿಕಾರಿಗಳನ್ನು ವೈಯಕ್ತಿಕವಾಗಿ ಕರೆದು ಮಾತನಾಡಿಸಿದೆ. ಅಲ್ಲಿರುವ ಸಮಸ್ಯೆಗಳನ್ನು ಆಲಿಸಿದೆ. ಶೈಕ್ಷಣಿಕ ‌ಗುಣಮಟ್ಟವಿದ್ದರೂ ಮೂಲಸೌಕರ್ಯದ ಕೊರತೆಯಿಂದಾಗಿ ರ‍್ಯಾಂಕ್ಕಿಂಗ್‌ನಲ್ಲಿ ಸಮಾಧಾನಕರ ಪ್ರದರ್ಶನವಿರಲಿಲ್ಲ. ಹೀಗಾಗಿ ಪ್ರತಿ ಹಂತದಲ್ಲೂ ಸುಧಾರಣೆ ಮಾಡುತ್ತ ಬರಲಾಯಿತು. ಪರಿಣಾಮ ರಾಜ್ಯದ ಅಷ್ಟೂ ವಿವಿಗಳ ಗುಣಮಟ್ಟ ಹೆಚ್ಚಳಗೊಂಡ ಉನ್ನತ ರ‍್ಯಾಂಕ್ ಪಡೆಯುತ್ತಿವೆ. ಕಾಲೇಜು ವಿದ್ಯಾರ್ಥಿಗಳ ಬ್ರಾಸ್ ಬ್ಯಾಂಡ್ ತಂಡ ದೆಹಲಿಯಲ್ಲಿ ಗಣರಾಜೋತ್ಸವ ಪರೇಡ್‌ನಲ್ಲಿ ಭಾಗವಹಿಸಿದೆ. ಇದೆಲ್ಲವೂ ಅಲ್ಲಿನ ಜನ್ ಭವನ(ರಾಜಭವನ) ಮೇಲುಸ್ತುವಾರಿಯಲ್ಲಿ ನಡೆದಿರುವ ಸಂಗತಿ ಎಂದರು.

ಉತ್ತರ ಪ್ರದೇಶದಲ್ಲಿ ವಿವಿಗಳ ನೇಮಕಾತಿಯನ್ನು ಸಂಪೂರ್ಣ ಪಾರದರ್ಶಕಗೊಳಿಸಲಾಗಿದೆ. ಸಾವಿರಾರು ನೇಮಕಾತಿಗಳು ನಡೆದರೂ ಒಂದೇ ಒಂದು ಪ್ರಕರಣ ನ್ಯಾಯಾಲಯದ ಮೆಟ್ಟಿಲು ಏರದಿರುವುದು ಪಾರದರ್ಶಕತೆಗೆ ಹಿಡಿದ ಕೈಗನ್ನಡಿ ಎಂದರು.

ಉತ್ತರ‌‌ ಪ್ರದೇಶದ 1 ಲಕ್ಷಕ್ಕೂ ಅಧಿಕ ಅಂಗನವಾಡಿಗಳ ಪೈಕಿ 56 ಸಾವಿರ ಅಂಗನವಾಡಿಗಳನ್ನು ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್ಆರ್) ಅಡಿ ಅಭಿವೃದ್ಧಿ ಪಡಿಸಿ ಮಕ್ಕಳಿಗೆ ಟೇಬಲ್, ಬೆಂಚ್ ಒದಗಿಸಲಾಗಿದೆ. ಪರಿಣಾಮ ಮಕ್ಕಳ ದಾಖಲಾತಿ ಹೆಚ್ಚಿಸಲಾಗಿದೆ ಎಂದರು.

ಶೈಕ್ಷಣಿಕ ಕ್ಷೇತ್ರದಲ್ಲಿ ಗಣನೀಯ ಬದಲಾವಣೆ ತರುವ ಗುರಿಯೊಂದಿಗೆ ನಿರಂತರ ಮೇಲುಸ್ತುವಾರಿ ಮಾಡಲಾಗುತ್ತಿದೆ. ಶಾಲಾ ಮಟ್ಟದಲ್ಲಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಅಲ್ಲಿ ಆಯ್ಕೆಯಾಗುವ ಮಕ್ಕಳನ್ನು ವಿವಿಗಳ ಪದವಿ ಪ್ರದಾನ ಸಮಾರಂಭಕ್ಕೆ ಆಯ್ಕೆ ಮಾಡಲಾಗಿರುತ್ತದೆ. ಅಲ್ಲಿ ಮಕ್ಕಳಿಗೆ ಉಡುಗೊರೆ ನೀಡಲಾಗುತ್ತದೆ. ಶಿಕ್ಷಣದ ಬಗ್ಗೆ ಆಸಕ್ತಿ ಮೂಡಿಸಲು ಇಂಥ ಪ್ರಯತ್ನಗಳನ್ನು ಕೈಗೊಳ್ಳಲಾಗಿದೆ ಎಂದರು.

ವಿವಿಗಳು ಆರ್ಥಿಕವಾಗಿ ಸ್ವಯಂ ನಿರ್ವಹಣೆ ‌ಆಗುವ ರೀತಿಯಲ್ಲಿ ‌ಸ್ವಾವಲಂಬಿಯನ್ನಾಗಿಸಿರುವುದು ಮತ್ತೊಂದು ವಿಶೇಷ ಎಂದು ಹೇಳಿದರು. ಜನ್ ಭವನದ ವಿಶೇಷಾಧಿಕಾರಿ ಸುಧೀರ ಬೋಪ್ಡೆ, ಶಿಕ್ಷಣ ಸಲಹೆಗಾಡ ಡಾ.ಪಂಕಜ್ ಜಾನೆ, ಪಿಐಬಿ ಗುವಾಹಟಿಯ ಎಡಿಜಿ ಕೃಪಾ ಶಂಕರ್ ಯಾದವ್, ಪಿಐಬಿ ಲಕ್ನೋ ನಿರ್ದೇಶಕ ದಿಲೀಪ್ ಕುಮಾರ್ ಶುಕ್ಲಾ, ಪಿಐಬಿ ಬೆಂಗಳೂರಿನ ಸಹಾಯಕ ನಿರ್ದೇಶಕಿ ಕರಿಷ್ಮಾ ಪಂತ್ ಮತ್ತಿತರರು ಇದ್ದರು.