ನಾಗ್ಪುರ: ನ್ಯೂಜಿಲೆಂಡ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಕಿವೀಸ್ ನೀಡಿದ್ದ 209 ರನ್‌ಗಳನ್ನು ಯಶಸ್ವಿಯಾಗಿ ಹಿಂಬಾಲಿಸಿ ಸರಣಿಯಲ್ಲಿ 2-0ಯಿಂದ ಮುನ್ನಡೆ ಸಾಧಿಸಿದೆ.
ನಾಗ್ಪುರದ ಶಾಹೀದ್ ವೀರ್ ನಾರಾಯಣ್ ಸಿಂಗ್ ಸ್ಟೇಡಿಯಂನಲ್ಲಿ ಶುಕ್ರವಾರ ಬೌಂಡರಿ-ಸಿಕ್ಸರ್‌ಗಳ ಅಬ್ಬರವೇ ಜೋರಾಗಿತ್ತು. ಅದರಲ್ಲೂ ಭಾರತದ ಪರ ಇಶನ್ ಕಿಶನ್ ಹಾಗೂ ನಾಯಕ ಸೂರ್ಯಕುಮಾರ್ ಯಾದವ್‌ರ ಅಬ್ಬರದ ಬ್ಯಾಟಿಂಗ್‌ಗೆ ಕಿವೀಸ್ ಬೌಲರ್‌ಗಳು ಮೌನ ವಹಿಸುವಂತಾಯಿತು.
ಟಾಸ್ ಗೆದ್ದ ಸೂರ್ಯಕುಮಾರ್, ಪಿಚ್ ವರ್ತನೆಯನ್ನು ಅರಿತು ಮೊದಲು ಬೌಲಿಂಗ್ ಆಯ್ದುಕೊಂಡರು. ಕಿವೀಸ್ ಪರ ಆರಂಭಿಕರಾದ ಡೆವೊನ್ ಕಾನ್ವೆ ಹಾಗೂ ಟಿಮ್ ಸೈಫರ್ಟ್ ಕೇವಲ 3.2 ಓವರ್‌ಗಳಲ್ಲೇ 43 ರನ್ ಜೊತೆಯಾಟವಾಡಿ ಆತಂಕ ಮೂಡಿಸಿದರು. ಆದ್ರೆ, ಹರ್ಷಿತ್ ರಾಣಾ ಭಾರತಕ್ಕೆ ಡೆವೊನ್ ಕಾನ್ವೆ ವಿಕೆಟ್ ತಂದಿಟ್ಟರು.
3ನೇ ಕ್ರಮಾಂಕದಲ್ಲಿ ಆಡಿದ ರಚಿನ್ ರವೀಂದ್ರ 2 ಬೌಂಡರಿ ಹಾಗೂ 4 ಸಿಕ್ಸರ್‌ಗಳೊಂದಿಗೆ 44 ರನ್‌ಗಳಿಸಿದರೆ, ಮಧ್ಯಮ ಕ್ರಮಾಂಕದಲ್ಲಿ ಗ್ಲೆನ್ ಫಿಲಿಪ್ಸ್ 19, ಡೇರಿಯಲ್ ಮಿಚೆಲ್ 18 ಹಾಗೂ ಮಾರ್ಕ್ ಚಪ್ಮನ್ 10 ರನ್‌ಗಳಿಸಿ ಹೊರ ನಡೆದರು.
ಆದ್ರೆ 7ನೇ ಕ್ರಮಾಂಕದಲ್ಲಿ ಆಡಿದ ನಾಯಕ ಮಿಚೆಲ್ ಸ್ಯಾಂಟ್ನರ್ ಸ್ಲಾಗ್ ಓವರ್‌ಗಳಲ್ಲಿ ಬೌಂಡರಿಗಳನ್ನು ಬಾರಿಸಿ ತಂಡದ ಮೊತ್ತ ಇನ್ನೂರರ ಗಡಿ ದಾಟಲು ನೆರವಾದರು. ಜ್ಯಾಕ್ ಫೋಕ್ಸ್ 15 ರನ್‌ಗಳಿಸಿದ್ದರಿಂದ, ಕಿವೀಸ್ 6 ವಿಕೆಟ್‌ಗೆ 208 ರನ್‌ಗಳಿಸಿತು.
ಬೃಹತ್ ಮೊತ್ತದ ಪ್ರತಿಯಾಗಿ ಸ್ಫೋಟಕ ಬ್ಯಾಟಿಂಗ್ ಆರಂಭಿಸಿದ ಭಾರತ ಸಂಜು ಸ್ಯಾಮ್ಸನ್ 6 ಹಾಗೂ ಅಭಿಷೇಕ್ ಶರ್ಮಾ ಶೂನ್ಯಕ್ಕೆ ಔಟಾದರು. ಇದರಿಂದ, ಕಿವೀಸ್ ಪಾಳಯದಲ್ಲಿ ಸಂಭ್ರಮ ಮನೆ ಮಾಡಿತು.
3ನೇ ವಿಕೆಟ್‌ಗೆ ಜೊತೆಯಾದ ಇಶಾನ್ ಕಿಶನ್ ಹಾಗೂ ಸೂರ್ಯಕುಮಾರ್ ಯಾದವ್ ಕೇವಲ 48 ಎಸೆತಗಳಲ್ಲಿ 122 ರನ್‌ಗಳನ್ನು ಚಚ್ಚಿದರು. ಇದರಿಂದ, ಕಿವೀಸ್‌ಗೆ ಒತ್ತಡ ಹೆಚ್ಚಾಯಿತು. 21 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಇಶನ್, ಕೊನೆಗೆ 32 ಎಸೆತಗಳಲ್ಲಿ 75 ರನ್‌ಗಳಿಸಿ ಔಟಾದರು.
ಇದಾದ ಬಳಿಕ ಜೊತೆಗೂಡಿದ ಸೂರ್ಯ ಹಾಗೂ ಶಿವಂ ದುಬೆ 49 ಎಸೆತಗಳಲ್ಲೇ ಇನ್ನಿಂಗ್ಸ್ ಪೂರ್ಣಗೊಳಿಸಿದರು. ದುಬೆ 18 ಎಸೆತಗಳಲ್ಲಿ 36 ರನ್ ಗಳಿಸಿದರೆ, ಸೂರ್ಯ 37 ಎಸೆತಗಳಲ್ಲೇ 82 ರನ್ ಬಾರಿಸಿ ಗೆಲುವಿನ ರೂವಾರಿಯಾದರು.























