ರೀಲ್ಸ್ ಹುಚ್ಚು: ಟ್ರ್ಯಾಕ್ಟರ್ ಚಕ್ರಕ್ಕೆ ಸಿಕ್ಕು ಪ್ರಾಣ ಕಳೆದುಕೊಂಡ ಯುವಕ

0
4

ಕಲಬುರಗಿ: ರೀಲ್ಸ್ ಮಾಡುತ್ತ ಟ್ರ‍್ಯಾಕ್ಟರ್ ಕೆಳಗೆ ಬಿದ್ದು ಚಾಲಕನೊಬ್ಬ ಪ್ರಾಣ ಕಳೆದುಕೊಂಡಿರುವ ಘಟನೆ ಜಿಲ್ಲೆಯ ಕಮಲಾಪುರ ತಾಲೂಕಿನ ಮಹಾಗಾಂವ್ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ನಿವಾಸಿ ಲೋಕೇಶ್ ಕಲ್ಲಪ್ಪ ಪೂಜಾರಿ (22) ಮೃತ ದುರ್ದೈವಿ. ಬಡತನದ ಕುಟುಂಬದಲ್ಲಿ ಹುಟ್ಟಿದ್ದ ಈ ಯುವಕ 10ನೇ ವಯಸ್ಸಿನಲ್ಲಿಯೇ ಟ್ರ್ಯಾಕ್ಟರ್ ಚಾಲನೆ ಮಾಡಿ ತಾಯಿಯ ಜತೆ ಜೀವನ ನಡೆಸುತ್ತಿದ್ದ. ಆದರೆ, ಯುವಕನಿಗೆ ಇನ್‌ಸ್ಟಾ ರೀಲ್ಸ್ ಗೀಳು ಹೆಚ್ಚಾಗಿತ್ತು.

ಕೆಲ ತಿಂಗಳಿನಿಂದ ರೀಲ್ಸ್ ಮಾಡುತ್ತಿದ್ದ ಲೋಕೇಶ್ ಪೂಜಾರಿ ಬುಧವಾರ ಸಹ ಮಹಾಗಾಂವ ಗ್ರಾಮದ ಕಬ್ಬಿನ ಗದ್ದೆಯಲ್ಲಿ ಕಬ್ಬು ನೆಡುವುದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದ. ಈ ವೇಳೆ ಕೈಯಲ್ಲಿ ಮೊಬೈಲ್ ಹಿಡಿದು ಟ್ರ್ಯಾಕ್ಟರ್ ಚಲಾಯಿಸುತ್ತ ರೀಲ್ಸ್ ಮಾಡುತ್ತಿದ್ದ. ಆಗ ಕೈಯಲ್ಲಿದ್ದ ಮೊಬೈಲ್ ಜಾರಿ ಕೆಳಗೆ ಬೀಳುತ್ತಿದ್ದಂತೆ ಮೊಬೈಲ್ ಹಿಡಿಯಲು ಮುಂದಾಗಿದ್ದಾನೆ. ಕೆಳಗೆ ಬಿದ್ದು ಟ್ರ್ಯಾಕ್ಟರ್ ಚಕ್ರಕ್ಕೆ ಸಿಲುಕಿ ಪ್ರಾಣವನ್ನೇ ಕಳೆದುಕೊಂಡಿದ್ದಾನೆ.

ಆತನು ಚಕ್ರದಲ್ಲಿ ಸಿಲುಕಿದ ವೇಳೆ ಹೊಲದಲ್ಲಿ ಯಾರು ಇರಲಿಲ್ಲ. ಸುಮಾರು ಅರ್ಧ ತಾಸು ಲೋಕೇಶ್ ಮೇಲೆಯೆ ಗಾಲಿ ತಿರುಗಿದೆ. ದೇಹದ ಅರ್ಧ ಭಾಗ ನಜ್ಜುಗುಜ್ಜಾಗಿದೆ. ಬಹಳ ಹೊತ್ತಿನಿಂದ ಒಂದೇ ಕಡೆ ನಿಂತು ತಿರುಗುತ್ತಿದ್ದ ಟ್ರ‍್ಯಾಕ್ಟರ್ ಗಮನಿಸಿದ ರೈತರೊಬ್ಬರು ಅದರ ಬಳಿಗೆ ಹೋಗಿ ನೋಡಿದಾಗ, ಲೋಕೇಶ ಟ್ರ‍್ಯಾಕ್ಟರ್ ಗಾಲಿ ಕೆಳಗೆ ಸಿಕ್ಕಿಕೊಂಡು ಮೃತಪಟ್ಟಿರುವುದು ಗೊತ್ತಾಗಿದೆ. ತಕ್ಷಣ ಸುತ್ತಲಿನ ರೈತರು ಜಮಾಯಿಸಿ ಪೊಲೀಸರಿಗೆ ಮತ್ತು ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ಮಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleರಾಜ್ಯದ ಇತಿಹಾಸದಲ್ಲಿ ಪ್ರಥಮ, ಏಕಕಾಲಕ್ಕೆ 42,345 ಮನೆಗಳ ವಿತರಣೆ