ನಾಗ್ಪುರ: ಟಿ20 ವಿಶ್ವಕಪ್ ಹಿನ್ನೆಲೆಯಲ್ಲಿ ಮಹತ್ವ ಪಡೆದುಕೊಂಡಿದ್ದ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಸೂರ್ಯಕುಮಾರ್ ಯಾದವ್ ಮುಂದಾಳತ್ವದ ಟೀಮ್ ಇಂಡಿಯಾ ಅಮೋಘ ಗೆಲುವು ಗಳಿಸುವ ಮೂಲಕ ಶುಭಾರಂಭ ಮಾಡಿದೆ.
ಭಾರತದ ಅಮೋಘ 238 ರನ್‌ಗಳ ಎದುರು ನ್ಯೂಜಿಲೆಂಡ್ ಕೂಡ ಅಬ್ಬರದ ಬ್ಯಾಟಿಂಗ್ ನಡೆಸಿತು. ಆದರೂ, ಕಿವೀಸ್ 190 ರನ್‌ಗಳವರೆಗೆ ಸಾಗಿ 48ರನ್‌ಗಳ ಸೋಲು ಒಪ್ಪಿಕೊಂಡಿತು. ಈ ಗೆಲುವಿನೊಂದಿಗೆ ಭಾರತ ತಂಡ 5 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಬ್ಯಾಟರ್‌ಗಳ ಸ್ವರ್ಗ ಎನ್ನಿಸಿಕೊಂಡಿದ್ದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ಕಿವೀಸ್ ಟಾಸ್ ಗೆದ್ದು ಭಾರತಕ್ಕೆ ಬ್ಯಾಟಿಂಗ್ ಮಾಡುವ ಅವಕಾಶ ನೀಡಿತು. ಆರಂಭಿಕರಾಗಿ ಸಂಜು ಸ್ಯಾಮ್ಸನ್ ಜೊತೆ ಕಣಕ್ಕಿಳಿದ ಅಭಿಷೇಕ್ ಶರ್ಮಾ ಬೌಲರ್‌ಗಳಿಗೆ ದೊಡ್ಡ ತಲೆ ನೋವಾದರು.
ಸಂಜು 10 ರನ್‌ಗಳಿಸಿ ಹೊರನಡೆದರೂ, ಇಶನ್ ಕಿಶನ್ 8 ರನ್‌ಗಳಿಸಿ ನಿರ್ಗಮಿಸಿದರೂ, ಅಭಿಷೇಕ್ ಶರ್ಮಾರ ಬೌಂಡರಿ-ಸಿಕ್ಸರ್‌ಗಳ ಮಾರ್ದನಿ ಜೋರಾಗಿ ಕೇಳಿಸುತ್ತಲೇ ಇತ್ತು. ಹೀಗಾಗಿ ಭಾರತ ಕೇವಲ 8.4 ಓವರ್‌ಗಳಲ್ಲೇ ನೂರರ ಗಡಿ ದಾಡಿತು. ಉತ್ತಮವಾಗಿ ಸಾಗುತ್ತಿದ್ದ ಇನ್ನಿಂಗ್ಸ್‌ನಲ್ಲಿ 32 ರನ್‌ಗಳಿಸಿದ್ದ ನಾಯಕ ಸೂರ್ಯ ಮಿಚೆಲ್ ಸ್ಯಾಂಟ್ನರ್ ಬೌಲಿಂಗ್‌ನಲ್ಲಿ ವಿಕೆಟ್ ನೀಡಿದರು.
ಸೂರ್ಯ ನಿರ್ಗಮಿಸುತ್ತಿದ್ದಂತೆ ಅಭಿಷೇಕ್ ಶರ್ಮಾ ಕೂಡ 35 ಎಸೆತಗಳಲ್ಲಿ 84 ರನ್‌ಗಳಿಸಿ ಔಟಾದರು. ಆದ್ರೆ, ಆ ವೇಳೆಗೆ ಭಾರತ 149 ರನ್‌ಗಳಿಸಿತ್ತು. ಈ ವೇಳೆ ಆಡಲು ಬಂದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ 25 ರನ್‌ಗಳ ಸ್ಫೋಟಕ ಕಾಣಿಕೆ ನೀಡಿದರೆ, ಶಿವಂ ದುಬೆ ಮಾತ್ರ ಕೇವಲ 9 ರನ್‌ಗಳಿಸಿ ನಿರಾಸೆ ಮೂಡಿಸಿದರು. ರಿಂಕು ಸಿಂಗ್ ಕೇವಲ 20 ಎಸೆತಗಳಲ್ಲಿ ಅಜೇಯ 44 ರನ್‌ಗಳನ್ನು ಸಿಡಿಸಿ ತಂಡವನ್ನು ಬೃಹತ್ ಮೊತ್ತದತ್ತ ಕೊಂಡೊಯ್ದರು.
ಬೃಹತ್ ಮೊತ್ತ ಬೆನ್ನಟ್ಟಿದ ಕಿವೀಸ್‌ಗೆ ಆರಂಭದಲ್ಲೆ ಎರಡು ಆಘಾತವಾಯಿತು. ಪ್ರಮುಖ ಬ್ಯಾಟರ್‌ಗಳಾದ ಡೆವೊನ್ ಕಾನ್ವೆ ಹಾಗೂ ರಚಿನ್ ರವೀಂದ್ರ ಕ್ರಮವಾಗಿ 0 & 1 ರನ್‌ಗಳಿಗೆ ಔಟಾದರು. ಟಿಮ್ ರಾಬಿನ್ಸನ್ 21 ರನ್ ಗಳಿಸಿದರೆ, ಮಾರ್ಕ್ ಚಾಪ್ಮನ್ 39 ರನ್‌ಗಳಿಸಿದರು.
ಆದ್ರೆ, ಗ್ಲೆನ್ ಫಿಲಿಪ್ಸ್ ಮಾತ್ರ 39 ಎಸೆತಗಳಲ್ಲಿ 78 ರನ್‌ಗಳಿಸಿದರು. ಈತ ಇರುವವರೆಗೂ ಗೆಲುವು ಅಸಾಧ್ಯ ಎನ್ನುವಂತಿತ್ತು. ಆದ್ರೆ ಅಕ್ಷರ್ ಈ ವಿಕೆಟ್ ಪಡೆದು ನಿಟ್ಟುಸಿರು ಬಿಡುವಂತೆ ಮಾಡಿದರು. ಅಂತಿಮವಾಗಿ 7 ವಿಕೆಟ್‌ಗಳನ್ನು ಕಳೆದುಕೊಂಡ ನ್ಯೂಜಿಲೆಂಡ್ 190 ರನ್‌ಗಳಿಗೆ ಸುಮ್ಮನಾಯಿತು.









