ಬೆಳಗಾವಿ: ಸರ್ವೋನ್ನತ ನ್ಯಾಯಾಲಯದಲ್ಲಿ ಬುಧವಾರ ವಿಚಾರಣೆಗೆ ಬರಬೇಕಾಗಿದ್ದ ಕರ್ನಾಟಕ – ಮಹಾರಾಷ್ಟ್ರ ಗಡಿವಿವಾದ ಪ್ರಕರಣದ ವಿಚಾರಣೆ ನಡೆಯಲಿಲ್ಲ.
ನ್ಯಾಯಮೂರ್ತಿ ಸಂಜಯಕುಮಾರ ಹಾಗೂ ನ್ಯಾಯಮೂರ್ತಿ ಅಲೋಕ ಆರಾಧ್ಯೆ ಅವರ ದ್ವಿಸದಸ್ಯ ಪೀಠದ ಎದುರು ವಿಚಾರಣೆ ನಡೆಸಲು ಕಳೆದ ವರ್ಷದ ಅಕ್ಟೋಬರ್ ತಿಂಗಳಲ್ಲಿಯೇ ನಿಗದಿ ಮಾಡಲಾಗಿತ್ತು. ಆದರೆ ಇಬ್ಬರೂ ನ್ಯಾಯಮೂರ್ತಿಗಳು ಬೇರೆ ಬೇರೆ ಪೀಠಗಳಲ್ಲಿ ಮಹತ್ವದ ಪ್ರಕರಣಗಳ ವಿಚಾರಣೆ ನಡೆಸಲು ನಿಯುಕ್ತಿಗೊಂಡಿದ್ದರ ಹಿನ್ನೆಲೆಯಲ್ಲಿ ಗಡಿವಿವಾದ ಪ್ರಕರಣದ ವಿಚಾರಣೆ ನಡೆಯಲಿಲ್ಲ.
ಪ್ರಕರಣ ಸಂಬಂಧ ವಾದ ಮಂಡಿಸಲು ಕರ್ನಾಟಕದ ಕಾನೂನು ತಂಡವು ಸರ್ವ ಸಿದ್ಧತೆ ಮಾಡಿಕೊಂಡಿತ್ತು. ಹಿರಿಯ ನ್ಯಾಯವಾದಿ ನಿಶಾಂತ ಪಾಟೀಲ್ ಅವರನ್ನು ಅಡ್ವೋಕೇಟ್ ಆನ್ ರೆಕಾರ್ಡ್ ಎಂದು ರಾಜ್ಯ ಸರಕಾರ ನಿನ್ನೆಯಷ್ಟೇ ನೇಮಕ ಮಾಡಿದೆ. ಪ್ರಕರಣದ ವಿಚಾರಣೆ ಯಾವಾಗ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ. 2004 ರಲ್ಲಿ ಮಹಾರಾಷ್ಟ್ರ ಸರಕಾರ ದಾಖಲಿಸಿದ ಈ ದಾವೆಯಲ್ಲಿ ಕೇಂದ್ರ ಸರಕಾರ ಮೊದಲ ಹಾಗೂ ಕರ್ನಾಟಕ ಎರಡನೇ ಪ್ರತಿವಾದಿಯಾಗಿದೆ.









