ಕೇಂದ್ರ ಸಚಿವ ಗಡ್ಕರಿ ಭೇಟಿ ಮಾಡಿದ ಸಚಿವ ಸತೀಶ್ ಜಾರಕಿಹೊಳಿ

0
5

ರಾಜ್ಯದ ಮೂಲಸೌಕರ್ಯ ಯೋಜನೆಗಳಿಗೆ ವೇಗ ನೀಡುವ ಚರ್ಚೆ : ರಾಜ್ಯ ಲೋಕೋಪಯೋಗಿ ಇಲಾಖೆಯ ತ್ವರಿತಗತಿಯ ಕಾರ್ಯವೈಖರಿಗೆ ಗಡ್ಕರಿ ಶ್ಲಾಘನೆ

ನವದೆಹಲಿ: ದೆಹಲಿಯಲ್ಲಿರುವ ಕೇಂದ್ರ ಭೂಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರ ಅಧಿಕೃತ ನಿವಾಸದಲ್ಲಿ ರಾಜ್ಯದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಇಂದು ಭೇಟಿ ನೀಡಿ, ಕರ್ನಾಟಕದ ವಿವಿಧ ಪ್ರಮುಖ ಮೂಲಸೌಕರ್ಯ ಮತ್ತು ರಸ್ತೆ ಅಭಿವೃದ್ಧಿ ಯೋಜನೆಗಳ ಕುರಿತು ಸುದೀರ್ಘ ಚರ್ಚೆ ನಡೆಸಿದರು.

ಈ ವೇಳೆ ಮುಖ್ಯವಾಗಿ ಕೇಂದ್ರ ರಸ್ತೆ ಮತ್ತು ಮೂಲಸೌಕರ್ಯ ನಿಧಿ (CRIF) ಅನುದಾನವನ್ನು ತ್ವರಿತವಾಗಿ ಬಿಡುಗಡೆಗೊಳಿಸುವಂತೆ ಸಚಿವ ಜಾರಕಿಹೊಳಿ ಅವರು ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಿದರು.

ಇದನ್ನೂ ಓದಿ: Deepfake video ವಿರುದ್ಧ ಸಾರ್ವಜನಿಕರಿಗೆ ಸುಧಾಮೂರ್ತಿ ಎಚ್ಚರಿಕೆ

ವಿಳಂಬವಾಗಿದ್ದ ಕಾಮಗಾರಿಗಳಿಗೆ ಪರಿಹಾರ: ಸಭೆಯ ವೇಳೆ ರಾಜ್ಯದಲ್ಲಿ ತಾಂತ್ರಿಕ ಕಾರಣಗಳಿಂದಾಗಿ ವಿಳಂಬವಾಗಿದ್ದ 48 ಪ್ರಮುಖ ರಸ್ತೆ ಮತ್ತು ಮೂಲಸೌಕರ್ಯ ಕಾಮಗಾರಿಗಳ ಪೈಕಿ 39 ಕಾಮಗಾರಿಗಳ ಸಮಸ್ಯೆಗಳನ್ನು ಯಶಸ್ವಿಯಾಗಿ ಬಗೆಹರಿಸಲಾಗಿದೆ ಎಂಬ ಮಾಹಿತಿ ಕೇಂದ್ರ ಸಚಿವರಿಗೆ ನೀಡಲಾಯಿತು. ಈ ಹಿನ್ನೆಲೆಯಲ್ಲಿ, ರಾಜ್ಯ ಲೋಕೋಪಯೋಗಿ ಇಲಾಖೆಯ ತ್ವರಿತಗತಿಯ ಕಾರ್ಯವೈಖರಿ, ತಾಂತ್ರಿಕ ಅಡಚಣೆಗಳನ್ನು ಶೀಘ್ರ ಪರಿಹರಿಸಿರುವ ಕ್ರಮ, ಇವುಗಳನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ಶ್ಲಾಘಿಸಿ, ಇಲಾಖೆಯ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ರಾಜ್ಯದ ಸಮಗ್ರ ಅಭಿವೃದ್ಧಿಗೆ ಕೇಂದ್ರದ ಸಹಕಾರ: ಚರ್ಚೆಯ ವೇಳೆ ರಾಜ್ಯದ ಸಮಗ್ರ ಅಭಿವೃದ್ಧಿ ಹಾಗೂ ರಸ್ತೆ ಸಂಪರ್ಕ ವಿಸ್ತರಣೆಗಾಗಿ ಕೇಂದ್ರ ಸರ್ಕಾರದ ಸಹಕಾರ ಅತ್ಯಗತ್ಯ ಎಂಬುದನ್ನು ಸಚಿವ ಸತೀಶ್ ಜಾರಕಿಹೊಳಿ ಅವರು ಮನವರಿಕೆ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು, “ರಾಜ್ಯದ ಮೂಲಸೌಕರ್ಯ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ಅಗತ್ಯ ಸಹಕಾರ ನೀಡಲಾಗುವುದು” ಎಂಬ ಭರವಸೆಯನ್ನು ನೀಡಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Smart Energyಯ ಪ್ರಮುಖ ಕೇಂದ್ರವಾಗಿ ಕರ್ನಾಟಕ ರೂಪುಗೊಳ್ಳಲಿದೆ

ರಸ್ತೆ ಅಭಿವೃದ್ಧಿಗೆ ಹೊಸ ಚೈತನ್ಯ: ಈ ಸಭೆಯಿಂದಾಗಿ ರಾಜ್ಯದ ಪ್ರಮುಖ ರಸ್ತೆ, ಸೇತುವೆ ಹಾಗೂ ಮೂಲಸೌಕರ್ಯ ಯೋಜನೆಗಳಿಗೆ ಹೆಚ್ಚಿನ ವೇಗ ದೊರೆಯುವ ನಿರೀಕ್ಷೆ ಮೂಡಿದ್ದು, ಅನುದಾನ ಬಿಡುಗಡೆ ಪ್ರಕ್ರಿಯೆ ಮತ್ತಷ್ಟು ಸುಗಮವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Previous articleಮಂಗಳೂರು: ನರೇಗಾ ಸ್ವರೂಪ ಉಳಿಸಲು ಆಗ್ರಹಿಸಿ ಉಪವಾಸ ಸತ್ಯಾಗ್ರಹ