ಶಿವಮೊಗ್ಗ: ತೀರ್ಥಹಳ್ಳಿ ತಾಲ್ಲೂಕಿನ ಭಾರತೀಪುರ ಬಳಿ ಮಂಗಳವಾರ ರಾತ್ರಿ ಸಂಭವಿಸಿದ ಕೆಎಸ್‌ಆರ್‌ಟಿಸಿ ಬಸ್ – ಕಾರು ನಡುವಿನ ಭೀಕರ ಅಪಘಾತದಲ್ಲಿ ಶೃಂಗೇರಿಯ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ.
ಚನ್ನಗಿರಿಯಲ್ಲಿ ಸಂಬಂಧಿಕರ ಮನೆ ಮದುವೆ ಮುಗಿಸಿ ಶೃಂಗೇರಿ ತಾಲ್ಲೂಕಿನ ಮೆಣಸೆ ಗ್ರಾಮಕ್ಕೆ ವಾಪಸ್ ಮರಳುತ್ತಿದ್ದ ಕಾರಿಗೆ ಉಡುಪಿಯಿಂದ ರಾಯಚೂರಿಗೆ ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ನಡುವೆ ಡಿಕ್ಕಿಯಾಗಿದೆ.
ಅಪಘಾತದಲ್ಲಿ ಫಾತಿಮಾ (78), ರಿಹಾನ್ (15), ರಾಯಿಲ್ (9) ಮತ್ತು ಜಿಯಾನ್ (12) ಮೃತಪಟ್ಟಿದ್ದಾರೆ. ಒಟ್ಟು 6 ಜನರು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು, ಉಳಿದಿಬ್ಬರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಚಾಲಕ ರಿಯಾಜ್‌ಗೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ: ಭೀಕರ ರೈಲು ದುರಂತ: ರೈಲಿನ ಮೇಲೆ ಕ್ರೇನ್ ಕುಸಿದು 22 ಪ್ರಯಾಣಿಕರು ಮೃತ್ಯು
ಕಾರಿನ ಚಾಲಕ ಓವರ್‌ಟೇಕ್ ಮಾಡುವ ವೇಳೆ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದ್ದು, ಅಪಘಾತದ ತೀವ್ರತೆಗೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಬಸ್‌ನ ಮುಂಭಾಗಕ್ಕೂ ಹಾನಿಯಾಗಿದೆ. ಬಸ್‌ನಲ್ಲಿದ್ದ ಪ್ರಯಾಣಿಕರಿಗೆ ಏನೂ ತೊಂದರೆಯಾಗಿಲ್ಲ
ಕೆಎಸ್‌ಆರ್‌ಟಿಸಿ ಬಸ್ ಡ್ರೈವರ್ ನೀಡಿದ ದೂರಿನ ಮೇರೆಗೆ ಚಾಲಕ ರಿಯಾಜ್ ವಿರುದ್ಧ ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತ ಸಂಭವಿಸಿದ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎ.ಜಿ. ಕಾರಿಯಪ್ಪ ಅವರು ಭೇಟಿ ನೀಡಿ, ಪರಿಶೀಲನೆ ನಡೆಸಿದರು.








