ಚಿಕ್ಕಣ್ಣನ ದೊಡ್ಡ ಕನಸಿನ ಸಿನಿಮಾ: ಹೊಸ ವರ್ಷದಿಂದ ‘ಜೋಡೆತ್ತು’ ಶೂಟಿಂಗ್‌ ಶುರು

0
5

ಸುಧಾಕರ್ ನಿರ್ದೇಶನದ ಚೊಚ್ಚಲ ಸಿನಿಮಾ: ಚಿಕ್ಕಮಗಳೂರಿನಲ್ಲಿ ಬೃಹತ್ ಗ್ರಾಮೀಣ ಸೆಟ್,

ಬೆಂಗಳೂರು: ನಟ ಚಿಕ್ಕಣ್ಣ ನಾಯಕನಾಗಿ ಅಭಿನಯಿಸುತ್ತಿರುವ ‘ಜೋಡೆತ್ತು’ ಸಿನಿಮಾ ಹೊಸ ವರ್ಷದ ಆರಂಭದೊಂದಿಗೆ ಚಿತ್ರೀಕರಣಕ್ಕೆ ಸಜ್ಜಾಗಿದೆ. ಸುಧಾಕರ್ ಎಸ್ ರಾಜ್ ನಿರ್ದೇಶನದ ಚೊಚ್ಚಲ ನಿರ್ದೇಶನದ ಈ ಸಿನಿಮಾ ಇತ್ತೀಚೆಗಷ್ಟೇ ಸೆಟ್ಟೇರಿದ್ದು, ಜನವರಿ 5ರಿಂದ ಅಧಿಕೃತವಾಗಿ ಶೂಟಿಂಗ್ ಆರಂಭವಾಗಲಿದೆ.

ಗ್ರಾಮೀಣ ಸೊಗಡಿನ ಹಿನ್ನೆಲೆಯಲ್ಲೇ ಇಡೀ ಕಥೆ ಸಾಗುವ ಕಾರಣ, ‘ಜೋಡೆತ್ತು’ ಚಿತ್ರತಂಡ ಒಂದು ಗ್ರಾಮವನ್ನೇ ಸೆಟ್‌ನಲ್ಲಿ ನಿರ್ಮಿಸುವ ಸಾಹಸಕ್ಕೆ ಕೈ ಹಾಕಿದೆ. ಈ ಉದ್ದೇಶಕ್ಕಾಗಿ ಚಿಕ್ಕಮಗಳೂರಿನಲ್ಲಿ ಬೃಹತ್ ಗ್ರಾಮೀಣ ಸೆಟ್ ನಿರ್ಮಾಣ ಮಾಡಲಾಗಿದ್ದು, ಅಲ್ಲಿ ಚಿತ್ರೀಕರಣ ನಡೆಯಲಿದೆ. 80ರ ದಶಕದ ಕಾಲಘಟ್ಟದಲ್ಲಿ ನಡೆಯುವ ಕಥೆಯನ್ನು ನೈಜವಾಗಿ ಕಟ್ಟಿಕೊಡುವುದೇ ತಂಡದ ಉದ್ದೇಶವಾಗಿದೆ.

ಇದನ್ನೂ ಓದಿ: ಜೋಡೆತ್ತು ಜತೆ ಬಂದ ಚಿಕ್ಕಣ್ಣ: ಮೂರು ಭಾಷೆಯ ಬೃಹತ್ ಸಿನಿಮಾ!

ಸೋಮಶೇಖರ್ (ಕಟ್ಟಿಗೇನಹಳ್ಳಿ) ನಿರ್ಮಾಣದ ಈ ಸಿನಿಮಾ ಆಕಾಶ್ ಎಂಟರ್‌ಪ್ರೈಸಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಮೂರನೇ ಸಿನಿಮಾ ಆಗಿದ್ದು, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅದ್ಧೂರಿಯಾಗಿ ತಯಾರಾಗುತ್ತಿದೆ. ಚಿಕ್ಕಣ್ಣ ಜತೆಗೆ ತೆಲುಗಿನ ನಟ ಸುನಿಲ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಇನ್ನೂ ಹಲವು ಹಿರಿಯ ಹಾಗೂ ಯುವ ಕಲಾವಿದರು ಈ ಸಿನಿಮಾದ ಭಾಗವಾಗಲಿದ್ದಾರೆ. ಉಳಿದ ಕಲಾವಿದರ ಪಟ್ಟಿ ಕುರಿತು ಚಿತ್ರತಂಡ ಶೀಘ್ರದಲ್ಲೇ ಅಧಿಕೃತ ಘೋಷಣೆ ಮಾಡುವ ನಿರೀಕ್ಷೆಯಿದೆ.

‘ಅಧ್ಯಕ್ಷ’, ‘ರಾಬರ್ಟ್’, ‘ಕಾಟೇರ’ ಹಾಗೂ ಇತ್ತೀಚೆಗೆ ಬಿಡುಗಡೆಯಾದ ‘ದಿ ಡೆವಿಲ್’ ಸಿನಿಮಾಗಳಿಗೆ ಛಾಯಾಗ್ರಾಹಕರಾಗಿದ್ದ ಸುಧಾಕರ್ ಎಸ್ ರಾಜ್ ಈ ಸಿನಿಮಾದ ಮೂಲಕ ನಿರ್ದೇಶಕರಾಗುತ್ತಿದ್ದಾರೆ. ವಿಶೇಷವೆಂದರೆ, ನಿರ್ದೇಶನದ ಜೊತೆಗೆ ಛಾಯಾಗ್ರಹಣ ಜವಾಬ್ದಾರಿಯನ್ನೂ ಅವರೇ ವಹಿಸಿಕೊಂಡಿದ್ದು, ‘ಜೋಡೆತ್ತು’ ಸಿನಿಮಾಕ್ಕೆ ದೃಶ್ಯಾತ್ಮಕವಾಗಿ ಹೊಸ ಮೆರಗು ನೀಡುವ ಆಶಯ ಹೊಂದಿದ್ದಾರೆ.

ಇದನ್ನೂ ಓದಿ: ಶಿವಣ್ಣನ ಅಸಲಿ ಪ್ರತಿಭೆ ಈ ಚಿತ್ರದಲ್ಲಿ ಹೊರಬರಲಿದೆ: ‘45’ ಬಗ್ಗೆ ಉಪೇಂದ್ರ ಭರವಸೆ

ಸಂಗೀತದ ಜವಾಬ್ದಾರಿಯನ್ನು ವಿ. ಹರಿಕೃಷ್ಣ ವಹಿಸಿಕೊಂಡಿದ್ದು, ಈ ಚಿತ್ರಕ್ಕೆ ಐದು ಹಾಡುಗಳನ್ನು ಸಂಯೋಜಿಸಲಿದ್ದಾರೆ. ಮಾಸ್ತಿ, ರಾಜಶೇಖರ್ ಹಾಗೂ ರಘು ನಿಡುವಳ್ಳಿ ಸಂಭಾಷಣೆ ಬರೆಯುತ್ತಿದ್ದು, ಮೋಹನ್ ಬಿ ಕೆರೆ ಕಲಾ ನಿರ್ದೇಶನ ಸಿನಿಮಾಗೆ ಇದೆ. ಎಲ್ಲಾ ಹಂತಗಳು ಯೋಜನೆಯಂತೆ ಸಾಗಿದರೆ, 2026ರಲ್ಲಿ ‘ಜೋಡೆತ್ತು’ ಸಿನಿಮಾ ತೆರೆಕಾಣಲಿದೆ.

ಸಿನಿಮಾ ಕುರಿತು ಮಾತನಾಡಿದ ನಟ ಚಿಕ್ಕಣ್ಣ, “ಈ ಸಿನಿಮಾದ ಕಥೆ 80ರ ದಶಕದ ಕಾಲಘಟ್ಟದಲ್ಲಿ ನಡೆಯುತ್ತದೆ. ನಿಜವಾದ ‘ಜೋಡೆತ್ತು’ ಯಾರು ಎಂಬುದನ್ನು ಸದ್ಯದಲ್ಲೇ ಬಹಿರಂಗಪಡಿಸುತ್ತೇವೆ. ಇದು ನನ್ನ ವೃತ್ತಿಜೀವನದಲ್ಲೇ ದೊಡ್ಡ ಬಜೆಟ್‌ನ ಸಿನಿಮಾ. ಹಳ್ಳಿಯಲ್ಲಿ ಶುರುವಾಗಿ ಹಳ್ಳಿಯಲ್ಲೇ ಮುಗಿಯುವ ಕಥೆಯಿದು. ಫ್ಯಾಮಿಲಿ ಸೆಂಟಿಮೆಂಟ್, ಕಾಮಿಡಿ, ಆಕ್ಷನ್—all-in-one ಪ್ಯಾಕೇಜ್ ಆಗಿರುವ ಸಿನಿಮಾ ಇದು” ಎಂದು ಹೇಳಿದ್ದಾರೆ.

ಇದನ್ನೂ ಓದಿ: “ಯುದ್ಧಕ್ಕೆ ನಾವು ಸಿದ್ಧ” – ಹುಬ್ಬಳ್ಳಿ ವೇದಿಕೆಯಿಂದ ವಿರೋಧಿಗಳಿಗೆ ಕಿಚ್ಚ ಸುದೀಪ್ ಎಚ್ಚರಿಕೆ

ಒಟ್ಟಿನಲ್ಲಿ, ಚಿಕ್ಕಣ್ಣನ ಹೊಸ ಅವತಾರ, ಗ್ರಾಮೀಣ ಹಿನ್ನೆಲೆ ಮತ್ತು ಬೃಹತ್ ನಿರ್ಮಾಣದ ಕಾರಣದಿಂದ ‘ಜೋಡೆತ್ತು’ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ.

Previous articleToxic ಸಿನಿಮಾದ ನಟಿ ಕಿಯಾರಾ ಅಡ್ವಾಣಿ: ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ