ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಟಾಕ್ಸಿಕ್’ ಚಿತ್ರದ ನಾಯಕಿ ಕಿಯಾರಾ ಅಡ್ವಾಣಿ ಅವರ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ. ಈ ಚಿತ್ರದ ಮೂಲಕ ಯಶ್‌ಗೆ ನಾಯಕಿಯಾಗಿ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಕಾಣಿಸಿಕೊಳ್ಳುತ್ತಿದ್ದು, ಅವರು ಸಿನಿಮಾದ ಪ್ರಮುಖ ಪಾತ್ರವಾದ ನಾಡಿಯಾ ಎಂಬ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದ ‘ಟಾಕ್ಸಿಕ್’ ಸಿನಿಮಾ 2026ರ ಮಾರ್ಚ್ 19ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ಈಗಾಗಲೇ ಚಿತ್ರದ ಪ್ರಚಾರ ಕಾರ್ಯ ಜೋರಾಗಿದ್ದು, ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯೊಂದಿಗೆ ಅಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲ ಹೆಚ್ಚಾಗಿದೆ. ಸರ್ಕಸ್ ಹಿನ್ನೆಲೆಯಲ್ಲಿರುವ ಈ ಫಸ್ಟ್ ಲುಕ್ ಪೋಸ್ಟರ್‌ನಲ್ಲಿ ಕಿಯಾರಾ ಅಡ್ವಾಣಿ ಗ್ಲಾಮರಸ್ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: ಶಿವಣ್ಣನ ಅಸಲಿ ಪ್ರತಿಭೆ ಈ ಚಿತ್ರದಲ್ಲಿ ಹೊರಬರಲಿದೆ: ‘45’ ಬಗ್ಗೆ ಉಪೇಂದ್ರ ಭರವಸೆ
ಈ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ವಿಜೇತೆ ಗೀತು ಮೋಹನ್‌ದಾಸ್ ನಿರ್ದೇಶನ ವಹಿಸಿಕೊಂಡಿದ್ದಾರೆ. ‘ಟಾಕ್ಸಿಕ್’ ಸಿನಿಮಾ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಏಕಕಾಲಕ್ಕೆ ನಿರ್ಮಾಣವಾಗುತ್ತಿದ್ದು, ನಂತರ ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಸೇರಿದಂತೆ ಹಲವು ಭಾಷೆಗಳಿಗೆ ಡಬ್ಬಿಂಗ್ ಆಗಲಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಬಿಡುಗಡೆಗೆ ಸಿದ್ಧತೆ ನಡೆಯುತ್ತಿದೆ.
ನಾಡಿಯಾ ಪಾತ್ರದ ಬಗ್ಗೆ ಮಾತನಾಡಿರುವ ನಿರ್ದೇಶಕಿ ಗೀತು ಮೋಹನ್‌ದಾಸ್, “ಕೆಲವು ಪಾತ್ರಗಳು ಸಿನಿಮಾಗೆ ಮಾತ್ರ ಸೀಮಿತವಾಗಿರುವುದಿಲ್ಲ. ಅವು ಕಲಾವಿದರಿಗೂ ಹೊಸ ಆಯಾಮ ನೀಡುತ್ತವೆ. ನಾಡಿಯಾ ಪಾತ್ರಕ್ಕೂ ಅದೇ ರೀತಿಯ ಮಹತ್ವವಿದೆ. ಈ ಪಾತ್ರಕ್ಕೆ ಕಿಯಾರಾ ಅಡ್ವಾಣಿ ಅವರು ಸಂಪೂರ್ಣ ನ್ಯಾಯ ಒದಗಿಸಿದ್ದಾರೆ. ಅದಕ್ಕಾಗಿ ನನಗೆ ಅವರ ಬಗ್ಗೆ ಹೆಮ್ಮೆ ಇದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: “ಯುದ್ಧಕ್ಕೆ ನಾವು ಸಿದ್ಧ” – ಹುಬ್ಬಳ್ಳಿ ವೇದಿಕೆಯಿಂದ ವಿರೋಧಿಗಳಿಗೆ ಕಿಚ್ಚ ಸುದೀಪ್ ಎಚ್ಚರಿಕೆ
ಇನ್ನೂ ಈ ಸಿನಿಮಾದ ಕಥೆ ಹಾಗೂ ಬರವಣಿಗೆಯ ಹಂತದಲ್ಲಿ ನಿರ್ದೇಶಕಿ ಗೀತು ಮೋಹನ್‌ದಾಸ್ ಜೊತೆ ರಾಕಿಂಗ್ ಸ್ಟಾರ್ ಯಶ್ ಕೂಡ ಕೈ ಜೋಡಿಸಿರುವುದು ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಲು ಮತ್ತೊಂದು ಪ್ರಮುಖ ಕಾರಣವಾಗಿದೆ. ಯಶ್ ಅವರ ಕ್ರಿಯೇಟಿವ್ ಇನ್‌ಪುಟ್ ಮತ್ತು ವಿಭಿನ್ನ ಕಥಾಹಂದರ ‘ಟಾಕ್ಸಿಕ್’ ಸಿನಿಮಾವನ್ನು ವಿಶೇಷ ಅನುಭವವಾಗಿಸಲಿದೆ ಎಂಬ ವಿಶ್ವಾಸ ಸಿನಿಪ್ರಿಯರಲ್ಲಿ ಮೂಡಿದೆ.
ಒಟ್ಟಿನಲ್ಲಿ, ಕಿಯಾರಾ ಅಡ್ವಾಣಿ ಅವರ ಫಸ್ಟ್ ಲುಕ್ ಬಿಡುಗಡೆಗೊಂಡಿರುವುದರೊಂದಿಗೆ ‘ಟಾಕ್ಸಿಕ್’ ಸಿನಿಮಾ ಮತ್ತೊಮ್ಮೆ ಸುದ್ದಿಯಲ್ಲಿದ್ದು, 2026ರ ಬಹುನಿರೀಕ್ಷಿತ ಚಿತ್ರಗಳ ಪಟ್ಟಿಯಲ್ಲಿ ತನ್ನ ಸ್ಥಾನವನ್ನು ಗಟ್ಟಿಗೊಳಿಸಿದೆ.






















