ಹಂಸಲೇಖ ಒಂದು ಹಾಡು ಬರೆದಿದ್ದರು. ನಿದಿರೆ ಬರದಿರೆ ಏನಂತಿ… ಎಂದು ಶುರುವಾಗುವ ಹಾಡದು. ಲವ್ ಶುರುವಾದಾಗ ಪ್ರತೀ ಪ್ರೇಮಿಗಳ ಪಾಲಿಗೂ ಜಾಗರಣೆ ಶುರುವಾಗುತ್ತದೆ. ಅದು ಬಿಟ್ಟರೆ ಸಾಲಗಾರರ ಕಾಟ ಅತಿಯಾದಾಗ ಅನೇಕರು ನಿದ್ದೆ ಕಳೆದು ಕೊಳ್ಳುವುದುಂಟು. ಸಂತೆಯಲ್ಲೂ ನಿದ್ದೆ ಮಾಡುವ ಸೌಭಾಗ್ಯ ಎಲ್ಲರಿಗೂ ದಕ್ಕುವುದಿಲ್ಲ. ನಿದ್ದೆ ಕಳೆದುಕೊಂಡವರ ಸಂಕಷ್ಟ ಅವರಿಗಷ್ಟೇ ಗೊತ್ತು.
ಈ ವಿಷ್ಯವನ್ನಿಟ್ಟಿಕೊಂಡು ನಿದ್ರಾದೇವಿ ನೆಕ್ಸ್ಟ್ ಡೋರ್ ಎಂಬ ಚಿತ್ರ ಮಾಡಲಾಗಿದೆ. ಬಾಲ್ಯದಲ್ಲಿ ನಡೆದ ಕೆಲವು ಘಟನೆಗಳು ಮತ್ತೆ ಮತ್ತೆ ನೆನಪಾಗಿ ನಿದ್ದೆ ಇಲ್ಲದಂತೆ ಮನಸ್ಸಿಗೆ ಘಾಸಿ ಮಾಡುತ್ತದೆ. ಅಷ್ಟಕ್ಕೂ ನಿದ್ದೆಗೆಡಿಸುವ ವಿಷಯವಾದರೂ ಏನು ಎಂಬುದಕ್ಕೆ ಸಿನಿಮಾದಲ್ಲಿ ಉತ್ತರ ಕೊಟ್ಟಿದ್ದಾರೆ ನಿರ್ದೇಶಕ ಸುರಾಗ್.
ದೊಡ್ಡವರಾದ ಮೇಲೂ ಚಿಕ್ಕ ವಯಸ್ಸಿನಲ್ಲಿ ನಡೆದ ಘಟನೆ ಕಾಡುವುದಾದರೂ ಏಕೆ ಎಂಬುದು ಒಂದೆಡೆಯಾದರೆ… ಭೂತಕಾಲದಲ್ಲಿ ಘಟಿಸಿದ ಯಾವುದೋ ಘಟನೆಯೊಂದು ವರ್ತಮಾನದಲ್ಲೂ ಮನಸ್ಸನ್ನು ಹಿಂಡುವುದಿದೆಯಲ್ಲ… ಅದನ್ನೂ ಮೀರಿ ನಿದ್ದೆಗೆ ಭಂಗ ತರುವುದಿದೆಯಲ್ಲ… ಅದಕ್ಕಿಂತ ಘೋರ ದುರಂತ ಮತ್ತೊಂದಿಲ್ಲ. ಅಂಥ ನರಕಯಾತನೆ ಶತ್ರುವಿಗೂ ಬೇಡ ಎಂದೆನಿಸದೇ ಇರದು..!
ಮೇಲ್ನೋಟಕ್ಕೆ ಕಥೆ ತುಂಬಾ ಸರಳ ಎನಿಸಿದರೂ ಚಿತ್ರಕಥೆಯಲ್ಲಿ ವಿಶೇಷತೆ ಕಂಡಿಕೊಂಡಿದ್ದಾರೆ ಸುರಾಗ್. ಎರಡೆರಡು ಪಾತ್ರಗಳಿಗೆ ಕಥೆಯ ಎಳೆ ಹೊಂದಿಸಿಕೊಂಡು ಹೋಗಲಾಗಿದೆ. ಇದು ಸಿದ್ಧಸೂತ್ರಗಳನ್ನು ಬದಿಗಿಟ್ಟ ಸಿನಿಮಾ. ಪ್ರತಿಯೊಂದು ಸನ್ನಿವೇಶಗಳೂ ತುಂಬಾ ಸೂಕ್ಷ್ಮವಾಗಿ ಕಾಡುವಂತೆ ಪ್ರಯತ್ನಿಸಿದ್ದಾರೆ ನಿರ್ದೇಶಕ. ನಾಯಕ ಪ್ರವೀರ್ ಶೆಟ್ಟಿ ಧ್ರುವ ಪಾತ್ರದಲ್ಲಿ ಕಾಣಿಸಿಕೊಮಡಿದ್ದಾರೆ. ಅವರ ಸಹಜಾಭಿನಯ ಕಥೆಗೆ ಹೊಂದುಕೊಂಡಣತಿದೆ. ರಿಷಿಕಾ, ಶೈನ್ ಶೆಟ್ಟಿ, ಶ್ರೀಧರ್ ಇತರರು ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ.